ಕರ್ನಾಟಕ

ಚೆನ್ನಾಗಿ ಬೈದು, ಎಲ್ಲರ ಮೇಲೆ ಸಗಣಿ ಎರಚುವುದು ಈ ಹಬ್ಬ!

Pinterest LinkedIn Tumblr


ಚಾಮರಾಜನಗರ: ನಿಮಗೆ ಯಾರಾದರೂ ಮೈ ಮೇಲೆ ಸಗಣಿ ಎರಚಿ ಬಾಯಿಗೆ ಬಂದ ಹಾಗೆ ಬೈದರೆ ಏನಾಗುತ್ತೇ ಹೇಳಿ. ಕೋಪ ಬರುತ್ತೆ ತಾನೇ? ಆದರೆ ಈ ಊರಿನ ಜನ ಇಂದು ಖುಷಿ ಪಟ್ಟು ಮನ ಬಂದಂತೆ ಒಬ್ಬರಿಗೊಬ್ಬರು ಬೈದುಕೊಂಡಿದ್ದಾರೆ. ಅಲ್ಲದೆ ಮನಬಂದಂತೆ ಸಿಕ್ಕ-ಸಿಕ್ಕವರ ಮೇಲೆ ಸಗಣಿ ಎರಚಿದ್ದಾರೆ. ಅರೆ ಇದ್ಯಾಕಪ್ಪಾ ಅಂತೀರಾ? ಅಸಲಿ ಕಥೆ ಇಲ್ಲಿದೆ ನೋಡಿ.

ಗಡಿ ಜಿಲ್ಲೆ ಚಾಮರಾಜನಗರ ಸಮೀಪದ ತಮಿಳುನಾಡಿನ ತಾಳವಾಡಿ ತಾಲ್ಲೂಕಿನಲ್ಲಿ ಗುಮಟಾಪುರ ಎಂಬ ಗ್ರಾಮವೊಂದಿದೆ. ಇಲ್ಲಿ ಪ್ರತಿವರ್ಷ ದೀಪಾವಳಿಯ ಮರು ದಿನ ‘ಗೋರೆ ಹಬ್ಬ’ ಎಂಬ ವಿಶೇಷ ಆಚರಣೆ ನಡೆಯುತ್ತದೆ. ಅಲ್ಲಿ ನೀವು ಈ ಬೈದಾಟ, ಸೆಗಣಿ ಎರೆಚಾಟವನ್ನು ನೋಡಬಹುದು. ಇಲ್ಲಿ ಕಳೆದ 100 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಈ ಹಬ್ಬ ಆಚರಣೆಯಲ್ಲಿದೆ.

ಇಂದು ಈ ಗ್ರಾಮದಲ್ಲಿ ಗೋರೆ ಹಬ್ಬವನ್ನು ಆಚರಿಸಲಾಯಿತು. ಹೊರಗೆ ಜೋರಾಗಿ ಪಟಾಕಿ ಸಿಡಿಯುತ್ತಿದ್ದರೆ ಜನರು ಮಾತ್ರ ಸಗಣಿ ರಾಶಿಗಳಿಗೆ ದೇವಸ್ಥಾನದ ಪೂಜಾರಿ ಮಾಡುವ ಪೂಜೆಯ ಮೇಲೆಯೇ ಗಮನ ಕೇಂದ್ರೀಕರಿಸಿದ್ದರು. ಸುತ್ತಲೂ ಸೇರಿದ್ದ ಯುವಕರು ಹಾಗೂ ಜನರ ಕೇಕೆ, ಶಿಳ್ಳೆ, ಅರಚಾಟ, ಕೂಗಾಟಗಳು ಮುಗಿಲು ಮುಟ್ಟಿತ್ತು.

ಪೂಜಾರಿ ಮೇಲೆ ದೇವರು ಬಂದದ್ದೇ ತಡ, ಸಗಣಿಯನ್ನು ಉಂಡೆಗಳನ್ನಾಗಿ ಮಾಡಿ ಜನರು ಪೈಪೋಟಿಗೆ ಬಿದ್ದವರಂತೆ ಪರಸ್ಪರ ಎರಚಾಡಲು ಶುರುವಿಟ್ಟುಕೊಂಡರು. ಎರಡು ಟ್ರ್ಯಾಕ್ಟರ್ ಲೋಡ್‌ಗಳಿಷ್ಟಿದ್ದ ಸೆಗಣಿ ರಾಶಿಯಲ್ಲಿ ಉರುಳಾಡಿದ ಯುವಕರು, ಸೆಗಣಿಯನ್ನು ದೊಡ್ಡ ದೊಡ್ಡ ಉಂಡೆಗಳನ್ನಾಗಿ ಮಾಡಿ ಪರಸ್ಪರರ ಮೇಲೆ ಎತ್ತಿ ಹಾಕಿ ಸಂಭ್ರಮಿಸಿದರು.

Comments are closed.