ಕರ್ನಾಟಕ

ಕೊಳವೆಬಾವಿಯಲ್ಲಿ ಬಿದ್ದಿದ್ದ ಕಂದ ಸುಜಿತ್​ ವಿಲ್ಸನ್ ಕೊನೆಗೂ ಬದುಕಿ ಬರಲ್ಲಿಲ್ಲ.

Pinterest LinkedIn Tumblr

ಚೆನ್ನೈ: ತಿರಚಿರಾಪಳ್ಳಿಯ ನಾಡುಕಟ್ಟುಪಟ್ಟಿಯಲ್ಲಿ ಕೊಳವೆಬಾವಿಗೆ ಬಿದ್ದಿದ್ದ ಎರಡು ವರ್ಷದ ಬಾಲಕ ಸುಜಿತ್​ ವಿಲ್ಸನ್​ ಕೊನೆಗೂ ಬದುಕಲಿಲ್ಲ. ಕಳೆದ ಶುಕ್ರವಾರ ಸಂಜೆ ಮನೆಯ ಎದುರು ಆಟವಾಡುತ್ತಿದ್ದಾಗ ತೆರೆದ ಕೊಳವೆಬಾವಿಗೆ ಬಿದ್ದಿದ್ದ. ಅವನನ್ನು ರಕ್ಷಿಸಲು ರಕ್ಷಣಾ ತಂಡಗಳು ಹರಸಾಹಸಪಟ್ಟರೂ ಸಾಧ್ಯವಾಗಲಿಲ್ಲ. ಈಗ ಐದು ದಿನದ ಬಳಿಕ ಸುಜಿತ್​ ಮೃತಪಟ್ಟಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕನ ದೇಹ ಕೊಳವೆಬಾವಿಯೊಳಗೇ ಅತಿಯಾಗಿ ಕೊಳೆತು ಹೋಗಿದ್ದು ತುಂಡುತುಂಡಾದ ಸ್ಥಿತಿಯಲ್ಲಿ ಇದೆ ಎಂದು ಕಂದಾಯ ಇಲಾಖೆ ಆಯುಕ್ತ ಜೆ.ರಾಧಾಕೃಷ್ಣನ್​ ಮಾಹಿತಿ ನೀಡಿದ್ದಾರೆ. ಮಗುವಿನ ಕೊಳೆತ ದೇಹದ ಅವಶೇಷಗಳನ್ನು ಮೇಲೆತ್ತಲು ಪ್ರಯತ್ನಿಸಲಾಗುತ್ತಿದ್ದು ಕೆಲವು ಭಾಗಗಳು ಸಿಕ್ಕಿವೆ ಎಂದು ಅವರು ಹೇಳಿದ್ದಾರೆ.

ಇದೊಂದು 600 ಅಡಿ ಆಳದ ಕೊಳವೆಬಾವಿ. ಸುಜಿತ್​ ಬಿದ್ದಾಗ 35 ಅಡಿ ಆಳದಲ್ಲಿದ್ದ. ರಕ್ಷಣೆಗಾಗಿ ಹಲವು ಕೇಂದ್ರೀಯ ಮತ್ತು ರಾಜ್ಯ ರಕ್ಷಣಾ ತಂಡಗಳು ಆಗಮಿಸಿದ್ದವು. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳೂ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದವು.

ಬಾಲಕ ದಿನೇದಿನೆ ಕೊಳವೆಬಾವಿಯಲ್ಲಿ ಆಳಕ್ಕೆ ಜಾರತೊಡಗಿದ್ದ. 35 ಅಡಿ ಆಳದಿಂದ 70 ಅಡಿಗೆ, ಅಲ್ಲಿಂದ 90 ಅಡಿಗೆ ಬಿದ್ದಿದ್ದ. ಅಷ್ಟಾದರೂ ನಿರಂತರವಾಗಿ ಆಕ್ಸಿಜನ್​ ನೀಡಲಾಗುತ್ತಿತ್ತು. ಆದರೆ ಮಗುವಿನ ಸುತ್ತ ಒದ್ದೆ ಮಣ್ಣುಗಳು ತುಂಬಿತ್ತು. ಇದರಿಂದ ಸುಜಿತ್​ ಪ್ರಜ್ಞೆ ಕಳೆದುಕೊಂಡಿದ್ದ. ಆದರೂ ಉಸಿರಾಡುತ್ತಿದ್ದಾನೆಂದು ಸ್ಥಳದಲ್ಲಿದ್ದ ಅಧಿಕಾರಿಗಳು ಹೇಳಿದ್ದರು. ನಂತರ ಬಾಲಕನ ಮೇಲೆ ಮಣ್ಣು ಕುಸಿದು ಬಿದ್ದಿದ್ದು ಕೊಳವೆಬಾವಿಗೆ ಬಿಟ್ಟ ಕ್ಯಾಮರಾದಿಂದ ಗೊತ್ತಾಗಿತ್ತು.

ಭಾನುವಾರ ಕೊಳವೆಬಾವಿಯಿಂದ ಮೂರು ಮೀಟರ್​ ಅಂತರದಲ್ಲಿ ಇನ್ನೊಂದು ಗುಂಡಿ ತೋಡಲಾಗಿತ್ತು. ಸೋಮವಾರ ಬಾಲಕನ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರ ಗೊಳಿಸಲಾಯಿತಾದರೂ ಅತಿಯಾದ ಮಳೆಯಿಂದ ಮಣ್ಣು ಕುಸಿಯಲು ತೊಡಗಿತ್ತು. ಕೊಳವೆಬಾವಿಯ ವ್ಯಾಸ ತೀರ ಕಿರಿದಾಗಿತ್ತು. ಅಲ್ಲದೆ ಸುಜಿತ್​ ಕೂಡ ಕಲ್ಲುಮಣ್ಣಿನಲ್ಲಿ ಸಿಕ್ಕಿಬಿದ್ದಿದ್ದ. ಇದರಿಂದಾಗಿ ರಕ್ಷಣಾ ಕಾರ್ಯ ಜಟಿಲವಾಗಿತ್ತು.

ನಿನ್ನೆ ರಾತ್ರಿ ಸುಮಾರು 10.30ರವೇಳೆಗೆ ಕೊಳವೆಬಾವಿ ಸಮೀಪ ಇದ್ದವರಿಗೆ ದುರ್ವಾಸನೆ ಬರಲು ಪ್ರಾರಂಭವಾಯಿತು. ಬಾಲಕನ ದೇಹ ವಿಪರೀತವಾಗಿ ಕೊಳೆತು ಹೋಗಿದ್ದರಿಂದ ಮಣ್ಣು ಅಗೆಯುವ ಕಾರ್ಯವನ್ನು ನಿಲ್ಲಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದರು.

ಕೊಳವೆಬಾವಿಯಲ್ಲಿ ಬಿದ್ದ ಬಾಲಕ ಸುಜಿತ್​ ಸುರಕ್ಷಿತವಾಗಿ ಬರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ರಾಜಕಾರಣಿಗಳು, ಗಣ್ಯರು ಪ್ರಾರ್ಥನೆ ಮಾಡಿದ್ದರು.

ಸೋಮವಾರ ಟ್ವೀಟ್​ ಮಾಡಿದ್ದ ನರೇಂದ್ರ ಮೋದಿಯವರು, ಸುಜಿತ್​ ವಿಲ್ಸನ್​ ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥಿಸುತ್ತೇನೆ. ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳಿನಿಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವನು ಸುರಕ್ಷಿತವಾಗಿ ಬರುತ್ತಾನೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದರು.

ಭಾನುವಾರ ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ ಟ್ವೀಟ್​ ಮಾಡಿ, ಇಡೀ ದೇಶ ದೀಪಾವಳಿ ಸಂಭ್ರಮದಲ್ಲಿದೆ. ಆದರೆ ತಮಿಳುನಾಡಿನಲ್ಲಿ ಸುಜಿತ್​ನನ್ನು ರಕ್ಷಿಸಲು ಇನ್ನಿಲ್ಲದಂತೆ ಪ್ರಯತ್ನಿಸಲಾಗುತ್ತಿದೆ. ಆತನ ಪೋಷಕರು ದುಃಖದ ಮಡುವಿನಲ್ಲಿದ್ದಾರೆ. ಸುಜಿತ್​ ಆದಷ್ಟು ಬೇಗ ಮರಳಿ ತಂದೆತಾಯಿಯ ಮಡಿಲು ಸೇರಿಕೊಳ್ಳಲಿ ಎಂದಿದ್ದರು.

ಕಮಲ್​ ಹಾಸನ್​, ಎಂ.ಕೆ.ಸ್ಟಾಲಿನ್ ಸೇರಿ ಹಲವರು ಸುಜಿತ್​ಗಾಗಿ ಪ್ರಾರ್ಥನೆ

 

 

Comments are closed.