ಕರ್ನಾಟಕ

ಪ್ರವಾಹ ಪೀಡಿತ ಪ್ರದೇಶಗಳಿಗೆ 6,449.93 ಕೋಟಿ ರೂ. ಬಿಡುಗಡೆ

Pinterest LinkedIn Tumblr

ಬೆಂಗಳೂರು : ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ 6,449.93 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಇನ್ನು ಸಾಕಷ್ಟು ಹಣವಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಹಾರ ಧನವನ್ನು ಯಾವುದೇ ಸಾಲಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿಲ್ಲ. ಈ ಸಂಬಂಧ ಎಲ್ಲಾ ಬ್ಯಾಂಕ್‍ಗಳಿಗೆ ನೋಟೀಸ್ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಬೆಳೆ ಪರಿಹಾರ ಧನವನ್ನು ಬ್ಯಾಂಕ್‍ಗಳು ಸಾಲದ ಬಾಕಿ ಹಣಕ್ಕೆ ಮುಟ್ಟುಗೋಲು ಹಾಕಿಕೊಳ್ಳುತ್ತಿವೆ ಎಂಬ ದೂರುಗಳು ರೈತರಿಂದ ಬಂದ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳಿಗೆ ನೋಟೀಸ್ ನೀಡಲು ಸೂಚಿಸಲಾಗಿದೆ ಎಂದರು.ಹಿಂಗಾರು ಹಂಗಾಮಿನ ಬರ ಪರಿಹಾರ ಧನ 1045 ಕೋಟಿ ರೂ. ಬಂದಿದ್ದು, ರೈತರ ಖಾತೆಗಳಿಗೆ ವರ್ಗಾವಣೆ ಮಾಡಲು ಸೂಚಿಸಲಾಗಿದೆ.

2ನೇ ಹಂತದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರು, ಬೆಳೆ ನಷ್ಟವಾದವರಿಗೂ ಪರಿಹಾರ ನೀಡಲಾಗುವುದು. ಆಸ್ತಿ-ಪಾಸ್ತಿ ಹಾಗೂ ಬೆಳೆ ಹಾನಿ ಬಗ್ಗೆ ಅಂದಾಜು ಮಾಡಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಮಳೆಯ ಪ್ರಮಾಣ ತಗ್ಗುವ ಮುನ್ಸೂಚನೆಗಳಿವೆ.

ಬೆಳಗಾವಿಯಲ್ಲಿ ಎನ್‍ಡಿಆರ್‍ಎಫ್‍ನ 2 ಹಾಗೂ ಎಸ್‍ಡಿಆರ್‍ಎಫ್ 2 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಗದಗ, ಧಾರವಾಡ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ ಒಂದು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಅಧಿಕಾರಿಗಳಿಗೆ ರಜೆ ಇಲ್ಲದೆ ಕೆಲಸ ಮಾಡಲು ಸೂಚಿಸಲಾಗಿದೆ.

ಮನೆ ಕಳೆದುಕೊಂಡಿರುವ ಬಿ ವರ್ಗದವರಿಗೂ ಒಂದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು.ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿ ಉಂಟಾಗಿದ್ದು, 867.67 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿ ಖಾತೆಯಲ್ಲಿ ಇನ್ನು 481 ಕೋಟಿ ರೂ. ಇದೆ ಎಂದರು.

Comments are closed.