ಕರ್ನಾಟಕ

ಐಟಿಬಿಟಿ ಉದ್ಯೋಗಿಗಳು, ಅಪಾರ್ಟ್‍ಮೆಂಟ್ ನಿವಾಸಿಗಳು, ನಾಗರಿಕರು, ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ

Pinterest LinkedIn Tumblr

ಮಹದೇವಪುರ: ಮಹದೇವಪುರ ಕ್ಷೇತ್ರ ಅಭಿವೃದ್ಧಿ ಮಾಡುವಲ್ಲಿ ವಿಫಲಗೊಂಡಿರುವ ಜನಪ್ರತಿನಿಧಿಗಳು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಐಟಿಬಿಟಿ ಉದ್ಯೋಗಿಗಳು, ಕ್ಷೇತ್ರದ ಅಪಾರ್ಟ್‍ಮೆಂಟ್ ನಿವಾಸಿಗಳು, ನಾಗರಿಕರು, ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಮಾರತ್ತಹಳ್ಳಿ ಸೇತುವೆ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ಜನಪ್ರತಿ ನಿಧಿಗಳ ರಾಜೀನಾಮೆಗೆ ಆಗ್ರಹಿಸಿದರು. ರಸ್ತೆ ಗುಂಡಿಗಳು ಬಿದ್ದು ತಿಂಗಳುಗಳಾಗಿವೆ. ಮಳೆ ನೀರು ಸುಗಮವಾಗಿ ಹಾದು ಹೋಗಲು ಜಾಗವಿಲ್ಲ, ಟ್ರಾಫಿಕ್ ನಿಯಂತ್ರಣ ಮಾಡುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸಂಚಾರಿ ಪೊಲೀಸರು ವಿಫಲರಾಗಿದ್ದಾರೆ.

ಟ್ರಾಫಿಕ್ ಹತೋಟಿಗೆ ಬರುವವರೆಗೆ ಹೊಸ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಶುದ್ಧ ನೀರು, ಗಾಳಿ, ಒಳ್ಳೆ ರಸ್ತೆ ನೀಡಬೇಕಾದದ್ದು ಜನಪ್ರತಿನಿಧಿಗಳ ಕರ್ತವ್ಯ. ಆದರೆ ಮಹದೇವಪುರ ಕ್ಷೇತ್ರದಲ್ಲಿ ಇದ್ಯಾವುದೂ ಸರಿಯಾಗಿ ಸಿಗುತ್ತಿಲ್ಲ ಎಂದು ಕಿಡಿಕಾರಿದರು.

ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುತ್ತಾರೆ, ಗೆದ್ದ ನಂತರ ನಮ್ಮನ್ನೇ ಮರೆತು ಬಿಡುತ್ತಾರೆ. ಸರಿಯಾದ ಸಮಯಕ್ಕೆ ಟ್ಯಾಕ್ಸ್ ಕಟ್ಟಿದರೂ ನಮಗೆ ಮೂಲಭೂತ ಸೌಲಭ್ಯ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೂಲಭೂತ ಸಮಸ್ಯೆಗಳು, ರಸ್ತೆ, ಟ್ರಾಫಿಕ್ ಸಮಸ್ಯೆ ನಿವಾರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Comments are closed.