ಕರ್ನಾಟಕ

ಸೇವಿಸುವ ಆಹಾರ, ಜೀವನಶೈಲಿಯಲ್ಲಿ ಕೆಲ ಬದಲಾವಣೆಯಿಂದ ಕ್ಯಾನ್ಸರ್ ನ್ನು ತಡೆಗಟ್ಟಬಹುದು

Pinterest LinkedIn Tumblr


ಮೈಸೂರು: ಹಲವು ವರ್ಷಗಳ ಹಿಂದೆ ಕ್ಯಾನ್ಸರ್ ಬಂದರೆ ಸಾವು ನಿಶ್ಚಿತವಾಗಿತ್ತು. ಆದರೆ, ಪ್ರಸ್ತುತ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗಿದ್ದು, ಸಾಕಷ್ಟು ಕ್ಯಾನ್ಸರ್ ರೋಗಗಳನ್ನು ಚಿಕಿತ್ಸೆಯಿಂದ ಗುಣಪಡಿಸಬಹುದು. ಹೀಗಾಗಿ ರೋಗಿಗಳು ಆತ್ಮವಿಶ್ವಾದಿಂದ ಇರಬೇಕು ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.

ಸಂಜೀವಿನಿ ಕ್ಯಾನ್ಸರ್ ಕೇರ್ ಟ್ರಸ್ಟ್, ಸುಯೋಗ ಆಸ್ಪತ್ರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕ್ಲಿಯರ್‌ಮೆಡಿ ರೇಡಿಯೆಂಟ್ ಆಸ್ಪತ್ರೆ, ಮಹಾರಾಣಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕಲಾಮಂದಿರದಲ್ಲಿ ಹಮ್ಮಿಕೊಂಡ ವಿಶ್ವಸ್ತನ ಕ್ಯಾನ್ಸರ್ ದಿನಾಚರಣೆ ಮತ್ತು ಸ್ತನ ಕ್ಯಾನ್ಸರ್ ಕುರಿತ ಸಮೂಹ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೀವನಶೈಲಿಯಲ್ಲಿ ಬದಲಾವಣೆ ಹಾಗೂ ಮುಂಜಾಗ್ರತೆ ವಹಿಸಿದರೆ ಕ್ಯಾನ್ಸರ್ ಕಾಯಿಲೆಯನ್ನು ತಡೆಗಟ್ಟಬಹುದು. ಹೀಗಾಗಿ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಸಲಹೆ ನೀಡಿದರು.

ಕ್ಲಿಯರ್‌ಮೆಡಿ ರೇಡಿಯೆಂಟ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ.ಸಿ.ಬಿ.ಅವಿನಾಶ್ ಮಾತನಾಡಿ, ನಾವು ಸೇವಿಸುವ ಆಹಾರ, ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಶೇ.35 ರಷ್ಟು ಕ್ಯಾನ್ಸರ್ ಬರುವ ಸಾಧ್ಯತೆಯನ್ನು ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟರು.

ತಂಬಾಕು ಸೇವನೆ, ಮದ್ಯಪಾನ, ವ್ಯಾಯಾಮ ಮಾಡದೆ ಇರುವುದು ಹಾಗೂ ಅತಿಯಾದ ಪಾಶ್ಚಿಮಾತ್ಯ ಆಹಾರ ಸೇವನೆ, ಹಣ್ಣು ಹಂಪಲು ಕಡಿಮೆ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ನಿತ್ಯ ವ್ಯಾಯಾಮ, ಉತ್ತಮ ಆಹಾರ ಸೇವನೆ, ಹಣ್ಣು ಹಂಪಲು ತಿನ್ನುತ್ತಿದ್ದರೆ ನಮ್ಮ ದೇಹದಲ್ಲಿರುವ ಸಾಮಾನ್ಯ ಜೀವಕೋಶಗಳು ಕ್ಯಾನ್ಸರ್ ಜೀವಕೋಶಗಳಾಗಿ ಪರಿವರ್ತನೆಯಾಗುವುದನ್ನು ತಪ್ಪಿಸಬಹುದು ಎಂದು ಹೇಳಿದರು.

ವಯಸ್ಸಿಗೆ ತಕ್ಕಹಾಗೆ ನಮ್ಮ ದೇಹದಲ್ಲಿ ಜೀವಕೋಶಗಳು ಹುಟ್ಟುತ್ತವೆ, ಸಾಯುತ್ತವೆ. ನಮ್ಮ ದೇಹದಲ್ಲಿ ಸಾಯುವ ಜೀವಕೋಶಗಳು ಮತ್ತೆ ಅಷ್ಟೇ ಪ್ರಮಾಣದಲ್ಲಿ ಹುಟ್ಟುತ್ತವೆ. ಆದರೆ, ಕ್ಯಾನ್ಸರ್ ಜೀವಕೋಶಗಳು ಮಾತ್ರ ಹಾಗಲ್ಲ, ಅದರ ಸಂಖ್ಯೆ ವೃದ್ಧಿಯಾಗುತ್ತಾ ಹೋಗುತ್ತದೆ. ಈ ರೀತಿ ವೃದ್ಧಿಯಾದ ಕ್ಯಾನ್ಸರ್ ಜೀವಕೋಶಗಳು ಕ್ಯಾನ್ಸರ್ ಗಡ್ಡೆಗಳಾಗುತ್ತವೆ. ಈ ಕ್ಯಾನ್ಸರ್ ಜೀವಕೋಶಗಳು ಆರೋಗ್ಯವಾಗಿರುವ ಜೀವಕೋಶಗಳನ್ನು ಸಹ ಕೊಲ್ಲುತ್ತವೆ ಎಂದರು.

ಸ್ತನ ಕ್ಯಾನ್ಸರ್ ತಜ್ಞರಾದ ಡಾ.ಜಯಂತಿ ಥುಮ್ಸಿ ಮಾತನಾಡಿ, ಮಹಿಳೆಯರಂತೆ ಪುರುಷರಿಗೂ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಆದರೆ, ಮಹಿಳೆಯರಿಗೆ ಹೋಲಿಕೆ ಮಾಡಿದರೆ ಪುರುಷರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವ ಪ್ರಮಾಣ ತೀರಾ ಕಡಿಮೆ. ಹೆಣ್ಣು ಮತ್ತು ಗಂಡಿನಲ್ಲಿ ಇರುವ ಹಾರ್ಮೋನುಗಳು ಭಿನ್ನವಾಗಿರುತ್ತದೆ. ಹೆಣ್ಣಿನಲ್ಲಿರುವ ಕೆಲವೊಂದು ಹಾರ್ಮೋನುಗಳು ಸ್ತನ ಕ್ಯಾನ್ಸರ್‌ಗೆ ಪೂರಕವಾಗಿವೆ ಎಂದರು.

Comments are closed.