ಚಿಕ್ಕಮಗಳೂರು: ಬೈಕೊಂದು ಸಂಚರಿಸುತ್ತಿರುವಾಗಲೇ ಸೇತುವೆಯೊಂದು ಕುಸಿದುಬಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ಎರಡು ತಿಂಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗಿತ್ತು. ಈಗಲೂ ಬಿಟ್ಟು ಬಿಟ್ಟು ಜಿಲ್ಲೆಯ ಅಲ್ಲಲ್ಲಿ ಮಳೆಯಾಗುತ್ತಿದೆ. ಭಾನುವಾರ ಸಂಜೆಯೂ ಚಿಕ್ಕಮಗಳೂರಿನಲ್ಲಿ ನಿರಂತರ ಮಳೆಯಾಗಿತ್ತು. ಜಿಲ್ಲೆಯ ಮಲೆನಾಡು ಭಾಗವಾದ ಮೂಡಿಗೆರೆ ತಾಲೂಕಿನಲ್ಲಿ ಎಡೆಬಿಡದೇ ಮಳೆ ಸುರಿದಿದ್ದು, ಈ ವೇಳೆ ಮೊದಲೇ ಮಳೆಯಿಂದ ಶಿಥಿಲಗೊಂಡಿದ್ದ ಸೇತುವೆ ನಿನ್ನೆ ಏಕಾಏಕಿ ಕುಸಿದು ಬಿದ್ದಿದೆ.
ಮೂಡಿಗೆರೆ ತಾಲೂಕಿನ ಮಾಲಿಂಗನಾಡು ಗ್ರಾಮದಲ್ಲಿ ಹಿರೇಬೈಲು-ಕೂವೆ ಸಂಪರ್ಕಿಸುವ ಸೇತುವೆ ಇದಾಗಿದ್ದು, ಸುಮಾರು 40 ರಿಂದ 50 ಅಡಿ ಆಳಕ್ಕೆ ಕುಸಿದಿದೆ. ಕುಸಿದು ಬಿದ್ದ ಸೇತುವೆ ಕೆಳಗೆ ಬೈಕ್ ಸಿಕ್ಕಿಕೊಂಡಿದೆ.
ಸೇತುವೆ ಕುಸಿದು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಸೇತುವೆ ಕುಸಿದು ಬಿದ್ದಿರುವ ಪರಿಣಾಮ ಹಿರೇಬೈಲು – ಕೂವೆ ಸಂಪರ್ಕ ಸಹ ಕಡಿತವಾಗಿದೆ.

Comments are closed.