ಕರ್ನಾಟಕ

ನನಗೆ ಒಂದು ನಿಂಬೆಹಣ್ಣು ಕೊಡಪ್ಪಾ ಒಳ್ಳೇದಾಗ್ಲಿ- ರೇವಣ್ಣಗೆ ಸಿದ್ದರಾಂಯ್ಯ

Pinterest LinkedIn Tumblr


ಬೆಂಗಳೂರು: ವಿಧಾನಸಭಾ ಕಲಾಪದ ಮೊದಲ ದಿನವೇ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ನಿಂಬೆಹಣ್ಣು ವಿಚಾರ ಪ್ರಸ್ತಾಪವಾಗಿ ಸದನವನ್ನು ಕೆಲ ಹೊತ್ತು ನಗೆಗಡಲಲ್ಲಿ ತೇಲಿಸಿತು.

ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಉಂಟಾದ ಪ್ರವಾಹ ವಿಚಾರವಾಗಿ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾರೀ ಚರ್ಚೆ ನಡೆದಿತ್ತು. ಕೇಂದ್ರ ಹಾಗೂ ರಾಜದಲ್ಲಿ ನಿಮ್ಮ ಸರ್ಕಾರವಿದೆ. ಆದಷ್ಟು ಬೇಗ ಕೊಡಗು ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಿ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಕೆ.ಜಿ. ಬೋಪಯ್ಯನವರು, ನೀವು ವಿಪಕ್ಷ ನಾಯಕರನ್ನು ಬುಧವಾರ ಆಯ್ಕೆ ಮಾಡಿದ್ದೀರಿ. ನೀವು ಅವರು ಎಲ್ಲರೂ ಒಂದೇ ರೀತಿ ಎಂದು ಹೇಳಿದರು.

ಬೋಪಯ್ಯ ಅವರ ಮಾತಿಗೆ ತಕ್ಷಣವೇ ಉತ್ತರ ಕೊಟ್ಟ ವಿರೋಧ ಪಕ್ಷದ ಶಾಸಕರೊಬ್ಬರು, ನಿಮ್ಮ ಮಂತ್ರಿ ಮಂಡಲ ರಚನೆಯಾಗಲು ಒಂದು ತಿಂಗಳೇ ಬೇಕಾಯಿತು ಎಂದರು. ಮಾತು ಮುಂದುವರಿಸಿದ ಸಿದ್ದರಾಮಯ್ಯ ಅವರು, ನಾನು ವಿಪಕ್ಷ ನಾಯಕನಾಗಿದ್ದೇನೆ. ಬಿಜೆಪಿಯಲ್ಲಿ ನಿಮ್ಮ ಪರಿಸ್ಥಿತಿ ಈಗ ಹೇಗಿದೆ ಬೋಪಯ್ಯನವರೇ? ಸಚಿವ ಪಟ್ಟಿಯಿಂದ ನಿಮ್ಮನ್ನ ತೆಗೆದು ಹಾಕಿದರು. ಸುಮ್ಮನೆ ಇರಿ ಸಾಕು ನಿಮ್ಮ ಮಾತು ಎಂದರು.

ನಿಮ್ಮನ್ನ ಸಭಾಪತಿ ಮಾಡುತ್ತಾರೆ ಎನ್ನುವ ಸುದ್ದಿ ನನಗೆ ಬಂದಿತ್ತು. ಸಚಿವ ಸ್ಥಾನದ ಆಕಾಂಕ್ಷೆಯಿಂದ ಬಿಟ್ಟುಕೊಟ್ರಿ ಎಂದು ಸಿದ್ದರಾಮಯ್ಯ ಕಾಲೆಳೆದರು. ಇದರಿಂದ ಮತ್ತಷ್ಟು ಮುಜುಗರಕ್ಕೆ ಒಳಗಾದ ಬೋಪಯ್ಯ, ನೀವು ವಿಪಕ್ಷ ನಾಯಕರಾಗಲು ಒಂದು ತಿಂಗಳು ತಗೊಂಡ್ರಿ ಎಂದು ತಿರುಗೇಟು ನೀಡಿದರು. ಆಗ ಸಿದ್ದರಾಮಯ್ಯ ಅವರು, ನಾನೇ ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‍ಪಿ) ನಾಯಕ ನಿಮಗೆ ಗೊತ್ತಾ ಬೋಪಯ್ಯನವರೇ? ನಾನು ಸಿಎಲ್‍ಪಿ ನಾಯಕ ಆಗಿದ್ದು ಯಾವಾಗ ಅಂತ ನಿಮಗೆ ಗೊತ್ತಾ ಎಂದು ಮರು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರ ಪ್ರಶ್ನೆಗೆ ಸದನದ ಸದಸ್ಯರೊಬ್ಬರು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಕೇಳಿ ಎಂದು ಉತ್ತರ ತೂರಿ ಬಿಟ್ಟರು. ಆಗ ಸಿದ್ದರಾಮಯ್ಯ, ರೇವಣ್ಣ ನಿಂಬೆಹಣ್ಣು ಬಿಟ್ಟಿದ್ದರೆ ಕಷ್ಟ ಎಂದು ಕಾಲೆಳೆದರು. ನಿಂಬೆಹಣ್ಣು ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ರೇವಣ್ಣ ಮಾತನಾಡಲು ಮುಂದಾದರು. ಈ ವೇಳೆ ಸಿದ್ದರಾಮಯ್ಯ ಅವರು, ನಿಂಬೆಹಣ್ಣು ತಂದಿಯಾ ಎಂದು ಕೇಳಿ ಸದನದಲ್ಲಿ ನಗೆ ಹರಿಸಿದರು.

ಧ್ವನಿ ಏರಿಸಿದ ರೇವಣ್ಣ ಅವರು ನಮ್ಮ ನಿಂಬೆಹಣ್ಣನ್ನು ಕೇಂದ್ರ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಅವರಿಗೆ ಕೊಟ್ಟಿದ್ದೇವೆ. ಅದನ್ನ ಅವರು ರಫೇಲ್ ಯುದ್ಧ ವಿಮಾನದ ಮೇಲೆ ಇಟ್ಟರು ಎಂದು ನಕ್ಕರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಯೋ.. ರೇವಣ್ಣ ನಂಗೊಂದು ನಿಂಬೆಹಣ್ಣು ಕೊಡಪ್ಪಾ ಒಳ್ಳೇದಾಗ್ಲಿ ಎಂದು ಕಿಚಾಯಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಮಗೆ ರೇವಣ್ಣ ಅವರೇ ನಿಂಬೆಹಣ್ಣು ಕೊಟ್ಟಿದ್ದರು ಎನ್ನುವ ಸುದ್ದಿ ನನಗೆ ಬಂದಿತ್ತು ಎಂದು ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡುತ್ತಿದ್ದಂತೆ ಮತ್ತೆ ಮಾತು ಮುಂದುವರಿಸಿದ ಸ್ಪೀಕರ್, ನನಗೆ ನಿಮ್ಮ ಮನೆ ಬಿಟ್ಟುಕೊಟ್ಟರೆ ಸಾಕು. ನೀವು ಅದನ್ನು ಬಿಡುತ್ತಿಲ್ಲ ಎಂದು ನಗೆ ಬೀರಿದರು. ಆಗ ರೇವಣ್ಣ ಅವರು, ನಾನು ಎರಡು ತಿಂಗಳಲ್ಲೆ ಮನೆ ಬಿಟ್ಟುಕೊಟ್ಟೆ ಎಂದರು. ತಕ್ಷಣವೇ ಸಿದ್ದರಾಮಯ್ಯ ಅವರು, ಸದನವನ್ನು ಮತ್ತೊಂದು ವಿಚಾರಕ್ಕೆ ತೆಗೆದುಕೊಂಡು ಹೋಗುವುದು ಬೇಡ. ಸದನದಲ್ಲಿ ಎಲ್ಲರೂ ಸ್ವಲ್ಪ ಖುಷಿಯಾಗಿ ಇರಲಿ ಅಂತ ಹೀಗೆ ಮಾತನಾಡಿದೆ ಎಂದರು.

Comments are closed.