ಕರ್ನಾಟಕ

ಹಂಪಿ ಉತ್ಸವ ಆಚರಣೆಗೆ ನೀತಿ ಸಂಹಿತೆ ಅಡ್ಡಿ

Pinterest LinkedIn Tumblr

ಬಳ್ಳಾರಿ, ಅಕ್ಟೋಬರ್ 10 : ವಿಜಯನಗರದ ವೈಭವ ಸಾರುವ ಹಂಪಿ ಉತ್ಸವ ಆಚರಣೆ ಕುರಿತು ಈ ವರ್ಷವೂ ಚರ್ಚೆಗಳು ಆರಂಭವಾಗಿವೆ. ನವೆಂಬರ್‌ನಲ್ಲಿ ನಡೆಯಬೇಕಿದ್ದ ಉತ್ಸವ ಈ ಬಾರಿ ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ.

ಆರೋಗ್ಯ ಸಚಿವ ಬಿ. ಶ್ರೀರಾಮುಲು ಮತ್ತು ಉಪ ಮುಖ್ಯಮಂತ್ರಿ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ನವೆಂಬರ್‌ನಲ್ಲಿ ಹಂಪಿ ಉತ್ಸವ ನಡೆಸುವುದಾಗಿ ಹೇಳಿದ್ದರು. ಆದರೆ, ಉಪ ಚುನಾವಣೆಯ ಕಾರಣ ಉತ್ಸವದ ದಿನಾಂಕ ಬದಲಾಗಲಿದೆ ಎಂಬ ಚರ್ಚೆ ಆರಂಭವಾಗಿದೆ.

ವಿಜಯನಗರ ಶಾಸಕ ಆನಂದ್ ಸಿಂಗ್ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಕ್ಷೇತ್ರಕ್ಕೆ ಡಿಸೆಂಬರ್ 5ರಂದು ಉಪ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ನವೆಂಬರ್ 11ರಿಂದ ನೀತಿ ಸಂಹಿತೆ ಜಾರಿಗೆ ಬರುವುದರಿಂದ ಹಂಪಿ ಉತ್ಸವ ಡಿಸೆಂಬರ್‌ನಲ್ಲಿ ನಡೆಯಬಹುದು ಎಂಬುದು ಲೆಕ್ಕಾಚಾರವಾಗಿದೆ.

“ನವೆಂಬರ್‌ನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಆದ್ದರಿಂದ ಹಂಪಿ ಉತ್ಸವ ನಡೆಸುವುದು ಕಷ್ಟ. ಚುನಾವಣಾ ಪ್ರಕ್ರಿಯೆ ಮುಕ್ತಾಯವಾದ ಬಳಿಕ ಉತ್ಸವ ನಡೆಸಬಹುದು” ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಹೇಳಿದ್ದಾರೆ.

ಬಳ್ಳಾರಿ ಬಿಜೆಪಿ ಸಂಸದ ವೈ. ದೇವೇಂದ್ರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಮೊದಲೇ ಹಂಪಿ ಉತ್ಸವ ನಡೆಸಲು ಮನವಿ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಹಂಪಿ ಉತ್ಸವ ಆಚರಣೆ ವಿವಾದಕ್ಕೆ ಕಾರಣವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ. ಕೆ. ಶಿವಕುಮಾರ್ ಬರದ ಹಿನ್ನಲೆಯಲ್ಲಿ ಉತ್ಸವ ಆಚರಣೆ ಬೇಡ ಎಂದು ಹೇಳಿದ್ದರು. ಆಗ ಪ್ರತಿಭಟನೆಗಳು ನಡೆದಿದ್ದವು. ಅಂತಿಮವಾಗಿ ಸರ್ಕಾರ ಮಾರ್ಚ್ ತಿಂಗಳಿನಲ್ಲಿ ಸರಳವಾಗಿ ಹಂಪಿ ಉತ್ಸವ ಆಚರಣೆ ಮಾಡಿತ್ತು.

Comments are closed.