ಕರ್ನಾಟಕ

ವಿರೋಧ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಆಯ್ಕೆ!

Pinterest LinkedIn Tumblr


ಬೆಂಗಳೂರು: ಭಾರೀ ಚರ್ಚೆಗೆ ಕಾರಣವಾಗಿದ್ದ ವಿಧಾನಸಭಾ ಹಾಗೂ ಪರಿಷತ್ ವಿಪಕ್ಷ ನಾಯಕರು ಯಾರಾಗಬೇಕು ಎನ್ನುವುದನ್ನು ಕಾಂಗ್ರೆಸ್ ಹೈಕಮಾಂಡ್ ಇಂದು ರಾತ್ರಿ ಅಂತಿಮಗೊಳಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವಿಧಾನಸಭಾ ವಿಪಕ್ಷ ನಾಯಕ ಜವಾಬ್ದಾರಿಯನ್ನು ನೀಡಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಮೊದಲ ಅಧಿವೇಶನ ನಾಳೆ ನಡೆಯಲಿದೆ. ಇದಕ್ಕೂ ಮುನ್ನ ಕಾಂಗ್ರೆಸ್‍ನಲ್ಲಿ ಪ್ರತಿಪಕ್ಷ ನಾಯಕ ಸ್ಥಾನ ಯಾರಿಗೆ ಎನ್ನುವುದು ಭಾರೀ ಕುತೂಹಲ ಕೆರಳಿಸಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಎಚ್.ಕೆ.ಪಾಟೀಲ್ ಹಾಗೂ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಬಿಗ್ ಫೈಟ್ ಕೊಟ್ಟಿದ್ದರು. ಆದರೆ ರಾತ್ರಿ 8 ಗಂಟೆ ಹೊತ್ತಿಗೆ ಎಐಸಿಸಿ ಅಧಿಕೃತ ಆದೇಶ ಹೊರಡಿಸಿ, ಸಿದ್ದರಾಮಯ್ಯ ಅವರಿಗೆ ಮಣೆ ಹಾಕಿದೆ.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಎಸ್.ಆರ್. ಪಾಟೀಲ್ ಅವರನ್ನು ಆಯ್ಕೆ ಮಾಡಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿದೆ. ವಿಧಾನಸಭೆ ವಿಪಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದ ಎಚ್.ಕೆ.ಪಾಟೀಲ್ ಅವರಿಗೆ ಅದೃಷ್ಟ ಕೈ ಕೊಟ್ಟಿದೆ.

ಈ ಮೂಲಕ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ತೆರವಾಗುವಂತೆ ಸಿದ್ದರಾಮಯ್ಯ ಅವರಿಗೆ ಪಕ್ಷದ ಹೈಕಮಾಂಡ್ ಸೂಚನೆ ನಿಡಿದೆ. ಉಳಿದಂತೆ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಮತ್ತು ಉಪ ಅಧ್ಯಕ್ಷರ ಆಯ್ಕೆ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದಕ್ಕೂ ಮುನ್ನ ಬೆಳಗಾವಿಯಲ್ಲಿ ಮಾತನಾಡಿದ್ದ ಎಚ್.ಕೆ. ಪಾಟೀಲ್, ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾನು ಬದ್ಧನಾಗಿದ್ದೇನೆ ಎಂದಿದ್ದರು. ಅತ್ತ, ಕಲಬುರ್ಗಿಯಲ್ಲಿ ಮಾತನಾಡಿದ್ದ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕನ ಕುರ್ಚಿಗಾಗಿ ಕಾಂಗ್ರೆಸ್‍ನಲ್ಲಿ ಕಿತ್ತಾಟ ನಡೆದಿಲ್ಲ. ಯಾವ ಗುಂಪು ಇಲ್ಲ. ಅಭಿಪ್ರಾಯ ಭೇದ ಇದೆ. ಆದರೆ ಪೇಪರ್, ಟಿವಿಯವರು ಮಸಾಲೆ ಹಚ್ಚುತ್ತಿದ್ದಾರೆ ಎಂದು ದೂರಿದರು.

Comments are closed.