ಕರ್ನಾಟಕ

ಅರಮನೆಯಲ್ಲಿ ಅದ್ದೂರಿ ಆಯುಧ ಪೂಜೆ ಸಂಭ್ರಮ.

Pinterest LinkedIn Tumblr

ಮೈಸೂರು, ಅ.7- ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನವ ವಧುವಿನಂತೆ ನಗರ ವೈಭವದ ದಸರಾಗೆ ಸಿಂಗಾರಗೊಂಡು ಸಜ್ಜಾಗಿದೆ.
400 ವರ್ಷಗಳ ಇತಿಹಾಸ ಹೊಂದಿರುವ ದಸರಾ ಮಹೋತ್ಸವದ ಆಕರ್ಷಣೆಗಳ ಕೇಂದ್ರಬಿಂದುವಾದ ಜಂಬು ಸವಾರಿ,

ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಚಿನ್ನದ ಅಂಬಾರಿ ಹೊತ್ತ ಗಜಪಡೆಯ ಸವಾರಿ ನೋಡಲು, ಆ ವೈಭವ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ದೇಶ-ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸಿದ್ದಾರೆ. ಕಳೆದ ಎಂಟು ದಿನಗಳಿಂದ ಪ್ರತಿದಿನವೂ ದುರ್ಗಾ ಸೇರಿದಂತೆ ವಿವಿಧ ದೇವಿಯರ ಆರಾಧನೆ, ಸರಸ್ವತಿ ಪೂಜೆ ನಡೆದಿದ್ದು, ಇಂದು ಅರಮನೆಯಲ್ಲಿ ಆಯುಧಪೂಜೆ ವಿಜೃಂಭಣೆಯಿಂದ ಸಾಂಪ್ರದಾಯಿಕವಾಗಿ ನೆರವೇರಿತು.

ವಿಜಯದಶಮಿ ಅಂಗವಾಗಿ ನಾಳೆ ಅರಮನೆಯಲ್ಲಿ ವಿವಿಧ ಪೂಜಾ ಕೈಂಕರ್ಯದ ನಂತರ ಶುಭ ಮಕರ ಲಗ್ನದಲ್ಲಿ ಮಧ್ಯಾಹ್ನ 2.15 ರಿಂದ 2.58ರ ವರೆಗೆ ನಂದಿ ಪೂಜೆ ನಡÉಯಲಿದೆ. ಬಳಿಕ ಅಂಬಾರಿಯಲ್ಲಿ ಪ್ರತಿಷ್ಠಾಪನೆಗೊಳ್ಳುವ ಚಾಮುಂಡೇಶ್ವರಿಗೆ ಸಂಜೆ 4.31 ರಿಂದ 4.57ರ ಒಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪಾರ್ಚನೆ ಮಾಡಲಿದ್ದಾರೆ.

ನಂತರ ಆರಂಭಗೊಳ್ಳುವ ಜಂಬು ಸವಾರಿ ಸಯ್ಯಾಜಿರಾವ್ ರಸ್ತೆ ಹಾಗೂ ನಗರದ ಪ್ರಮುಖ ರಸ್ತೆ ಮೂಲಕ ಬನ್ನಿಮಂಟಪ ತಲುಪಿ ಸಂಪ್ರದಾಯದಂತೆ ಶಮೀಪೂಜೆ ನಡೆಸಲಾಗುತ್ತದೆ. ರಾತ್ರಿ 7 ಗಂಟೆಗೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತಿನೊಂದಿಗೆ 10 ದಿನಗಳ ಉತ್ಸವಕ್ಕೆ ತೆರೆ ಬೀಳಲಿದೆ.

Comments are closed.