ರಾಷ್ಟ್ರೀಯ

ಆನ್‌ಲೈನ್‌ನಲ್ಲಿ ಗೇಮ್ ಆಡಿ ರೂ.78 ಲಕ್ಷ ಕಳೆದುಕೊಂಡ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ.

Pinterest LinkedIn Tumblr

ರಾಜ್‌ಕೋಟ್: ಆನ್‌ಲೈನ್‌ನಲ್ಲಿ ಪೋಕರ್ ಗೇಮ್ ಆಡಿ 78 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ.

ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ಮೋಟಾ ಮಾವಾ ಪ್ರದೇಶದ ಕೃನಾಲ್ ಮೆಹ್ತಾ (39) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮರುದಿನ ಬಾವಿಯಲ್ಲಿ ಆತನ ಶವ ತೇಲುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೊಬೈಲ್ ಫೋನ್‌ನಲ್ಲಿ ಪೋಕರ್ ಗೇಮ್ ಆಡಿ 78 ಲಕ್ಷ ರೂ. ಕಳೆದುಕೊಂಡ ಬಳಿಕ ಹತಾಶನಾಗಿ ಆತ್ಮಹತ್ಯೆಗೆ ಶರಣಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಇನ್‌ಸ್ಪೆಕ್ಟರ್ ವಿಕ್ರಮ್ ವಂಝಾರಾ ಹೇಳಿದ್ದಾರೆ. ಮನೆಯಿಂದ ಆತ್ಮಹತ್ಯೆ ಟಿಪ್ಪಣಿ ವಶಪಡಿಸಿಕೊಳ್ಳಲಾಗಿದ್ದು, “ಪೋಕರ್‌ ಬಾಜಿ” ಆಟವಾಡುವ ಸಲುವಾಗಿ ಸ್ನೇಹಿತರು ಹಾಗೂ ಸಂಬಂಧಿಕರಿಂದ 78 ಲಕ್ಷ ರೂ. ಸಾಲ ಪಡೆದಿದ್ದಾಗಿ ಇದರಲ್ಲಿ ಉಲ್ಲೇಖಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಈತ ಪೋಕರ್ ಗೇಮ್ ಆಡುವ ಸಲುವಾಗಿ ಸಾಲ ಪಡೆಯುತ್ತಿದ್ದ ಹಾಗೂ ದೊಡ್ಡ ಮೊತ್ತವನ್ನು ಸತತವಾಗಿ ಕಳೆದುಕೊಳ್ಳುತ್ತಿದ್ದ ಎನ್ನುವುದು ವಿಚಾರಣೆಯಿಂದ ತಿಳಿದುಬಂದಿದೆ.

“ಈ ಮೊಬೈಲ್ ಗೇಮಿಂಗ್ ಆಪ್ ಜತೆ ತನ್ನ ಬ್ಯಾಂಕ್ ಖಾತೆ ವಿವರ ಹಂಚಿಕೊಂಡಿದ್ದಾನೆ. ಮೆಹ್ತಾ ಸಾವಿನ ಬಳಿಕ ಆತನ ಸಹೋದರನಿಗೆ ಬ್ಯಾಂಕ್ ವ್ಯವಹಾರ ವಿವರಗಳ ಇ-ಮೇಲ್ ಬಂದಿದೆ. ಸತತವಾಗಿ ಹಲವು ಆಟಗಳನ್ನು ಸೋತಾಗ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸಲಾದ ವಿವರಗಳು ಇದರಲ್ಲಿವೆ. ಸೈಬರ್ ಪೊಲೀಸರು ಕೂಡಾ ತನಿಖೆ ನಡೆಸುತ್ತಿದ್ದಾರೆ” ಎಂದು ವಿವರಿಸಿದ್ದಾರೆ.

Comments are closed.