ಕರ್ನಾಟಕ

ಮಧ್ಯ ಪ್ರದೇಶದ ‘ಹನಿಟ್ರ್ಯಾಪ್‌’ಗೆ ಸಿಲಿಕಾನ್ ಸಿಟಿ ನಂಟು

Pinterest LinkedIn Tumblr


ಬೆಂಗಳೂರು: ಮಧ್ಯಪ್ರದೇಶದಲ್ಲಿ ರಾಜಕಾರಣಿಗಳು, ಅಧಿಕಾರಿಗಳ ಬಣ್ಣ ಬಯಲು ಮಾಡಿದ ‘ಹನಿಟ್ರ್ಯಾಪ್‌’ ಪ್ರಕರಣಕ್ಕೆ ಬೆಂಗಳೂರಿನ ನಂಟೂ ಇದೆ! ಹನಿ ಟ್ರ್ಯಾಪ್‌ನ ವೇಳೆ ದಾಖಲಿಸಿದ ವಿಡಿಯೊ, ಫೋಟೊ, ವಾಟ್ಸ್‌ಆ್ಯಪ್‌ ಚಾಟ್‌ ಹಾಗೂ ಇನ್ನಿತರ ರಹಸ್ಯ ಮಾಹಿತಿಗಳನ್ನು ಸಂಗ್ರಹಿಸಿ ಕಾಯ್ದಿಡುವ ಹೊಣೆಯನ್ನು ಬೆಂಗಳೂರಿನ ಖಾಸಗಿ ಕಂಪನಿಯೊಂದಕ್ಕೆ ಆರೋಪಿಗಳು ವಹಿಸಿದ್ದರು!

ಹನಿ ಟ್ರ್ಯಾಪ್‌ನ ಲೀಡರ್‌ ಶ್ವೇತಾ ವಿಜಯ ಜೈನ್‌ ಬೆಂಗಳೂರಿನ ಸೈಬರ್‌ ಫೋರೆನ್ಸಿಕ್‌ ಮತ್ತು ಸೈಬರ್‌ ಸೆಕ್ಯುರಿಟಿ ಕಂಪನಿಗೆ ಈ ಡೇಟಾಗಳನ್ನು ಒದಗಿಸಿ ಸುರಕ್ಷಿತವಾಗಿಡುವ ಜವಾಬ್ದಾರಿಯನ್ನು ವಹಿಸಿದ್ದಳು. ಇದೀಗ ಭೋಪಾಲ್‌ ಪೊಲೀಸರ ತಂಡವೊಂದು ಬೆಂಗಳೂರಿಗೆ ಬಂದು ಮಾಹಿತಿ ಕಲೆ ಹಾಕಲಿದೆ.

ಮಧ್ಯಪ್ರದೇಶವನ್ನೇ ನಡುಗಿಸಿದ ಈ ಹನಿಟ್ರ್ಯಾಪ್‌ ಜಾಲದಲ್ಲಿರುವ ಒಬ್ಬ ಕಾಲೇಜು ಯುವತಿ ಸೇರಿದಂತೆ ಐವರು ಮಹಿಳೆಯರನ್ನು ಬಂಧಿಸಲಾಗಿದೆ. ಸಾವಿರಾರು ರಾಜಕಾರಣಿಗಳು ಮತ್ತು ಅಧಿಕಾರಿಗಳು ಇವರ ಬಲೆಗೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರಿಗೆ ಬೆಂಗಳೂರಿನ ನಂಟು ಕಂಡುಬಂದಿದೆ. ಬೆಂಗಳೂರಿನ ಕಂಪನಿಯ ಕೆಲವು ನೌಕರರು ಹನಿಟ್ರ್ಯಾಪ್‌ ಜಾಲಕ್ಕೆ ನೆರವಾಗುತ್ತಿದ್ದರು ಎನ್ನಲಾಗಿದೆ. ಆದರೆ, ನೇರವಾಗಿ ಅವರ ಪಾತ್ರ ಇದೆಯೇ, ಇಲ್ಲವೋ ಎನ್ನುವುದು ಹೆಚ್ಚಿನ ತನಿಖೆಯ ನಂತರ ಬೆಳಕಿಗೆ ಬರಲಿದೆ. ಶ್ವೇತಾ ಕೂಡಾ ಆಗಾಗ ಬೆಂಗಳೂರಿಗೆ ಬಂದು ಈ ಕಂಪನಿಯಲ್ಲಿಇರುತ್ತಿದ್ದಳು ಎನ್ನಲಾಗಿದೆ.

ಪೆಗಾಸಸ್‌ ಸಾಫ್ಟ್‌ವೇರ್‌ ಬಳಕೆ

ಕಂಪನಿಯು ಫೋನ್‌ಗಳ ಮೇಲೆ ನಿಗಾ ಇಡಲು ಪೆಗಾಸಸ್‌ ಎಂಬ ಸಾಫ್ಟ್‌ವೇರ್‌ ಕುತಂತ್ರಾಂಶವನ್ನು ಬಳಸುತ್ತಿತ್ತು ಎನ್ನಲಾಗಿದೆ. ವಾಟ್ಸ್‌ಆ್ಯಪ್‌, ಎಸ್‌ಎಂಎಸ್‌ ಮತ್ತು ಇತರ ರೀತಿಗಳ ಮೂಲಕ ರಾಜಕಾರಣಿಗಳು ಮತ್ತು ಅಧಿಕಾರಿಗಳ ಫೋನ್‌ಗೆ ಇದನ್ನು ಕಳುಹಿಸಲಾಗುತ್ತದೆ. ಅಲ್ಲಿಆ್ಯಕ್ಟಿವೇಟ್‌ ಆಗುತ್ತಿದ್ದಂತೆಯೇ ಕಾಲ್‌ಗಳು ಗೌಪ್ಯವಾಗಿ ದಾಖಲಾಗಲು ಆರಂಭವಾಗುತ್ತವೆ. ವಾಟ್ಸ್‌ಆ್ಯಪ್‌ ಚಾಟ್‌, ಎಸ್‌ಎಂಎಸ್‌ಗಳು ದಾಖಲಾಗುತ್ತವೆ. ಈ ಸಾಫ್ಟ್‌ವೇರ್‌ ಮೂಲಕ ಅತ್ಯಂತ ಭದ್ರತೆಯ ಐಫೋನ್‌ಗಳನ್ನೂ ಹ್ಯಾಕ್‌ ಮಾಡಬಹುದು ಎನ್ನಲಾಗಿದೆ. ಆದರೆ, ಹ್ಯಾಕ್‌ ಮಾಡಿದ್ದು ಯಾರು ಎನ್ನುವುದು ಗೊತ್ತಾಗುವುದೇ ಇಲ್ಲ.

ಇದೇ ಮೊದಲು

ರಾಜ್ಯದಲ್ಲಿಯೂ ಇಂತಹ ಹನಿಟ್ರ್ಯಾಪ್‌ ಪ್ರಕರಣಗಳು ಬೆಳಕಿಗೆ ಬಂದಿವೆ. ಸಿನಿಮಾ ಹಾಗೂ ಕಿರುತೆರೆ ನಟಿಯರು ಶಾಮೀಲಾಗಿ ವೈದ್ಯರು ಹಾಗೂ ಉದ್ಯಮಿಗಳನ್ನು ಈ ಖೆಡ್ಡಾಕ್ಕೆ ಬೀಳಿಸಿ ನಂತರ ಹಣ ವಸೂಲಿ ಮಾಡಿರುವ ಹಲವು ಪ್ರಕರಣಗಳು ಇವೆ. ಆದರೆ ಯುವತಿಯರೊಂದಿಗಿನ ಖಾಸಗಿ ಕ್ಷಣಗಳ ವಿಡಿಯೊ ಹಾಗೂ ಫೋಟೊಗಳ ಡೇಟಾ ಸಂಗ್ರಹಿಸಿಡಲು ಖಾಸಗಿ ಕಂಪನಿಯೊಂದಕ್ಕೆ ನೀಡಲಾಗುತ್ತಿತ್ತು ಎಂಬುದು ಇದೇ ಮೊದಲು.

ಬೆಂಗಳೂರಿನಲ್ಲಿ ಏಕೆ?

ಶ್ವೇತಾ ವಿಜಯ್‌ ಜೈನ್‌ ತಾಂತ್ರಿಕ ಪರಿಣತೆಯಾಗಿದ್ದು, ಒಂದು ಟೆಕ್‌ ಕಂಪನಿ ಕೂಡಾ ಹೊಂದಿದ್ದಾಳೆ. ಮಧ್ಯ ಪ್ರದೇಶದಲ್ಲೇ ಈ ದಾಖಲೆ ಸಂಗ್ರಹಿಸಿಟ್ಟರೆ ಅದು ಸೋರಿಕೆಯಾಗಬಹುದು ಎಂಬ ಕಾರಣಕ್ಕೆ ಬೆಂಗಳೂರಿನ ಕಂಪನಿಯನ್ನು ಆಯ್ಕೆ ಮಾಡಿದ್ದಾಳೆ ಎನ್ನಲಾಗಿದೆ.

ಬೆಂಗಳೂರು ಮೂಲದ ಕಂಪನಿಯು ಸೈಬರ್‌ ಕಣ್ಗಾವಲಿಗೆ ಹೆಸರಾದ ಸಂಸ್ಥೆಯಾಗಿದ್ದು, ಈ ಹಿಂದೆ ಕೆಲವು ಕೇಂದ್ರೀಯ ತನಿಖಾ ಸಂಸ್ಥೆಗಳಿಗೂ ನೆರವು ನೀಡಿತ್ತು.

Comments are closed.