ಕರ್ನಾಟಕ

ಕರ್ನಾಟಕ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಇಲ್ಲ; ಆತಂಕದಲ್ಲಿ ರೆಬೆಲ್ ಶಾಸಕರು

Pinterest LinkedIn Tumblr

ಬೆಂಗಳೂರು: ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂಬ ಸ್ಪಷ್ಟ ಸಂದೇಶ ಬಿಜೆಪಿಯಿಂದ ರವಾನೆಯಾದ ಬೆನ್ನಲ್ಲೇ ರೆಬೆಲ್ ಶಾಸಕರಲ್ಲಿ ಆತಂಕ ಮನೆ ಮಾಡಿದ್ದು, ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆ ದಿನಾಂಕ ಘೋಷಣೆ ಮಾಡುತ್ತಿದ್ದಂತೆಯೇ ಇತ್ತ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಕಾದಾಟ ರಂಗೇರಿದ್ದು, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ದೋಸ್ತಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ರೆಬೆಲ್ ಶಾಸಕರ ಸ್ಥಿತಿಯೇ ಇದೀಗ ಅದೋಗತಿ ಎಂಬಂತಾಗಿದೆ. ಬಿಜೆಪಿ ಟಿಕೆಟ್‌ ನಿರೀಕ್ಷೆಯಲ್ಲಿ ಉಪಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದ 17 ಅನರ್ಹ ಶಾಸಕರಿಗೆ ಆ ಪಕ್ಷದ ವಿವಿಧ ನಾಯಕರು ಭಾನುವಾರ ನೀಡಿದ ಸರಣಿ ಹೇಳಿಕೆಗಳು ಆಘಾತವನ್ನುಂಟು ಮಾಡಿದ್ದು, ತಮ್ಮ ರಾಜಕೀಯ ಭವಿಷ್ಯ ತ್ರಿಶಂಕು ಸ್ಥಿತಿಗೆ ಒಳಗಾಗಬಹುದೇನೋ ಎಂಬ ಆತಂಕವ ಮೂಡಿಸಿವೆ.

ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಶಾಸಕರ ಉಮೇಶ್ ಕತ್ತಿ ಮಾಧ್ಯಮಗಳಿಗೆ ನೀಡುತ್ತಿರುವ ಸರಣಿ ಹೇಳಿಕೆಗಳು ಅಕ್ಷರಶಃ ರೆಬೆಲ್ ಶಾಸಕರ ಜಂಗಾಬಲವನ್ನು ಉಡುಗುವಂತೆ ಮಾಡಿದೆ. ಇನ್ನು ಅನರ್ಹ ಶಾಸಕರಿಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಅವರು ಪ್ರತಿನಿಧಿಸಿದ್ದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಕಾರ್ಯಕರ್ತರಿಂದ ಪ್ರತಿರೋಧ ವ್ಯಕ್ತವಾಗಿದ್ದು, ಮೂಲ ಬಿಜೆಪಿ ನಾಯಕರನ್ನೇ ಕಣಕ್ಕಿಳಿಸಬೇಕು ಎಂಬ ಕೂಗು ಜೋರಾಗಿದೆ.

ಇದು ಸಿಎಂ ಬಿಎಸ್ ಯಡಿಯೂರಪ್ಪ ತಲೆನೋವಿಗೆ ಕಾರಣವಾಗಿದ್ದು, ಇದಕ್ಕೆ ಇಂಬು ನೀಡುವಂತೆ ತಮ್ಮದೇ ಪಕ್ಷದ ನಾಯಕರ ಸರಣಿ ಹೇಳಿಕೆಗಳು ಬಿಎಸ್ ವೈ ತಲೆನೋವು ಹೆಚ್ಚಾಗುವಂತೆ ಮಾಡಿದೆ.

ಒಟ್ಟಾರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಪರೋಕ್ಷವಾಗಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದ ರೆಬೆಲ್ ಶಾಸಕರು ಇದೀಗ ತಮ್ಮ ಸ್ಥಾನವನ್ನೇ ಉಳಿಸಿಕೊಳ್ಳಲು ಪರದಾಡುವಂತಾಗಿದೆ.

Comments are closed.