ಕರ್ನಾಟಕ

ನನ್ನ ಹೊರತುಪಡಿಸಿ ಕಾಂಗ್ರೆಸ್‌ ಪಕ್ಷ ಕಟ್ಟೋದು ಸಾಧ್ಯವಿಲ್ಲ: ಪರಮೇಶ್ವರ್

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಡಿಸೆಂಬರ್ ನಲ್ಲೇ ಮಧ್ಯಂತರ ಚುನಾವಣೆ ಎದುರಾಗಲಿದೆ. ದೆಹಲಿ ಕಾರಿಡಾರ್ ನಲ್ಲಿ ಈ ಬಗ್ಗೆ ಚರ್ಚೆಯಾಗ್ತಿದೆ. ಅದಕ್ಕೆ ನಾವು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದರು.

ಸದಾಶಿವ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಮೇಶ್ವರ್, ಸೋನಿಯಾ ಭೇಟಿಗೆ ಸಿದ್ದರಾಮಯ್ಯನವರಿಗೆ ಅವಕಾಶ ನಿರಾಕರಿಸಿ ಪರಮೇಶ್ವರ್‌ ಗೆ ಅವಕಾಶ ನೀಡಿದ ವಿಚಾರದಲ್ಲಿ ಸ್ಪಷ್ಟನೆ ನೀಡಿದರು. “ಅಂತಹದ್ದೇನು ಕಲ್ಪಿಸಿಕೊಳ್ಳಬೇಕಿಲ್ಲ. ನನಗೂ ಕೆಲವು ಬಾರಿ ಅವಕಾಶ ಕೊಟ್ಟಿರಲಿಲ್ಲ. ಹಾಗೆ ಸಿದ್ದರಾಮಯ್ಯನವರಿಗೂ ಕೊಟ್ಟಿರಲಿಲ್ಲವೆನ್ನಿಸುತ್ತಿದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲʼʼ ಎಂದರು.

ಶಾಸಕಾಂಗ ಪಕ್ಷದ ಸಭೆ ಇರುವುದು ನಮಗೆ ಗೊತ್ತಿರಲಿಲ್ಲ. ನಾನು ದೆಹಲಿಯಲ್ಲಿ ಇದ್ದೆ ಹಾಗಾಗಿ ಬಂದಿರಲಿಲ್ಲ. ದಿನೇಶ್ ಗುಂಡೂರಾವ್‌ ಫೋನ್ ಮಾಡಿ ಕರೆದ ಮೇಲೆ ಗೊತ್ತಾಯ್ತು. ನನ್ನನ್ನ ದೂರ ಇಟ್ಟು ಪಕ್ಷ ಕಟ್ಟೋಕೆ ಆಗಲ್ಲ. ಪರಮೇಶ್ವರ್ ಬಿಟ್ಟು ಪಕ್ಷ ಕಟ್ಟೋದು ಸುಲಭವಲ್ಲ. ಒಬ್ಬಬ್ಬರಿಗೂ ಒಂದೊಂದು ಶಕ್ತಿಯಿರುತ್ತದೆ. ಹೀಗಾಗಿ ಸಾಮೂಹಿಕ ನಾಯಕತ್ವಕ್ಕೆ ನಮ್ಮ ಪ್ರತಿಪಾದನೆ ಎಂದು ಶಾಸಕಾಂಗ ಪಕ್ಷ ಸಭೆಗೆ ಹಾಜರಾಗದೇ ಇರುವುದಕ್ಕೆ ಸಮರ್ಥನೆ ನೀಡಿದರು.

ನಾನು ಯಾರ ಬಗ್ಗೆಯೂ ಚಾಡಿ ಹೇಳುವವನಲ್ಲ. ಸೋನಿಯಾ ಗಾಂಧಿಯವರ ಮುಂದೆ ಚಾಡಿ ಹೇಳಲ್ಲ. ಹೈಕಮಾಂಡ್ ನಿಂದ ಆದೇಶ ಬಂದರೆ ಮಾಡಲೇ ಬೇಕು. 2018ರಲ್ಲಿ ಸಿದ್ದು ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದೆವು. ಅವರು ಸಿಎಂ ಆಗಿದ್ದರು .ಅದಕ್ಕೆ ಅವರ ನೇತೃತ್ವವಿತ್ತು. ಆದರೂ ನಾನು ಪಕ್ಷದ ಅಧ್ಯಕ್ಷನಾಗಿದ್ದೆ ಎಂದರು.

ಪ್ರವಾಹ ಪರಿಹಾರದಲ್ಲಿ ಸರ್ಕಾರ ಸಂಪೂರ್ಣ ವೈಫಲ್ಯ

ಬಿಜೆಪಿಯವರು ಅವರ ವಾದವನ್ನೇ ಸಮರ್ಥನೆ ಮಾಡಿಕೊಳ್ಳುತ್ತಾರೆ. ಗ್ರೌಂಡ್ ರಿಯಾಲಿಟಿ ಬೇರೆಯೇ ಇದೆ. ಇನ್ನೂ ಸಂತ್ರಸ್ಥರ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಜನ ಅನ್ನ, ನೀರಿಲ್ಲದೆ ಬೀದಿಯಲ್ಲಿದ್ದಾರೆ. ಅವರಿಗೆ ವ್ಯವಸ್ಥೆ ಮಾಡುವ ಕೆಲಸ ನಡೆಯುತ್ತಿಲ್ಲ. 17 ಜಿಲ್ಲೆಗಳಲ್ಲಿ ಬೆಳೆ ಬೆಳೆಯಲೂ ಕಷ್ಟವಾಗಿದೆ ಯುದ್ಧೋಪಾದಿಯಲ್ಲಿ ಸರ್ಕಾರ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು ನಿನ್ನೆಯಷ್ಟೇ 1000 ಕೋಟಿ ಘೋಷಿಸಿದ್ದಾರೆ. ಅದು ಜನರಿಗೆ ತಲುಪುವುದು ಯಾವಾಗ. ಇನ್ನೂ ನಿಯೋಗ ಕೊಂಡೊಯ್ಯುದಕ್ಕೆ ಆಗುತ್ತಿಲ್ಲ. ಅಮಿತ್ ಶಾ, ಸೀತಾರಾಮನ್ ಬಂದರೂ ಒಂದು ಪೈಸೆ ಘೋಷಿಸಿಲ್ಲ. ನಾವು ಸಾಕಷ್ಟು ತೆರಿಗೆಯನ್ನು ಕೇಂದ್ರಕ್ಕೆ ಸಲ್ಲಿಸುತ್ತೇವೆ. ವಿಶ್ವಮಟ್ಟದಲ್ಲಿ ಕರ್ನಾಟಕ ಮೊದಲಿದೆ. ಹೀಗಿದ್ದರೂ ಕೇಂದ್ರಕ್ಕೆ ರಾಜ್ಯದ ಬಗ್ಗೆ ಆಸಕ್ತಿಯಿಲ್ಲ ಅವರಿಗೆ ಇಲ್ಲಿನ ಪರಿಸ್ಥಿತಿ ಬೇಕಾಗಿಯೂ ಇಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಮಾಜಿ ಡಿಸಿಎಂ ಪರಮೇಶ್ವರ್ ಕಿಡಿಕಾರಿದರು.

Comments are closed.