
ಮಂಡ್ಯ: ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗುವವರೆಗೆ ಕಾಲಿಗೆ ಚಪ್ಪಲಿ ಹಾಕಲ್ಲ ಎಂದು ಶಪಥ ಮಾಡಿದ್ದ ಅಭಿಮಾನಿ ಕಾರ್ಯಕರ್ತನೊಬ್ಬನಿಗೆ ಸಿಎಂ ಯಡಿಯೂರಪ್ಪ ಸ್ವತಃ ಚಪ್ಪಲಿ ತೆಗೆಸಿಕೊಟ್ಟಿದ್ದಾರೆ.
ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿಯ ಬಿಜೆಪಿ ಕಾರ್ಯಕರ್ತ, ಕೆರೆಗೋಡು ಶಕ್ತಿಕೇಂದ್ರದ ಅಧ್ಯಕ್ಷರಾಗಿರುವ ಶಿವಕುಮಾರ್ ಆರಾಧ್ಯ ಅವರಿಗೆ ಸ್ವತಃ ಸಿಎಂ ಯಡಿಯೂರಪ್ಪ ಚಪ್ಪಲಿ ತೆಗೆಸಿ ಕೊಟ್ಟಿದ್ದಾರೆ.
ಕಳೆದ ವರ್ಷ ಯಡಿಯೂರಪ್ಪ ಸಿ.ಎಂ ಸ್ಥಾನದಿಂದ ಕೆಳಗಿಳಿದಾಗ, ಅವರು ಮತ್ತೆ ಸಿಎಂ ಆಗೋವರೆಗೂ ಚಪ್ಪಲಿ ತೊಡುವುದಿಲ್ಲವೆಂದು ಶಿವಕುಮಾರ್ ಶಪಥ ಮಾಡಿದ್ದರು. ಇದೀಗ ವರ್ಷದ ನಂತರ ಯಡಿಯೂರಪ್ಪ ಮತ್ತೆ ಸಿಎಂ ಆಗಿದ್ದು ತಮ್ಮ ಅಭಿಮಾನಿಗೆ ಶಪಥ ಪೂರೈಸಿದ್ದಕ್ಕಾಗಿ ಹೊಸ ಚಪ್ಪಲಿಯ ಉಡುಗೊರೆ ನಿಡಿದ್ದಾರೆ.
ಕಳೆದ 14 ತಿಂಗಳಿಂದ ಚಪ್ಪಲಿ ಇಲ್ಲದೆ ಬರಿಗಾಲಲ್ಲಿ ತಿರುಗಾಡ್ತಿದ್ದ ಶಿವಕುಮಾರ್ ಆರಾಧ್ಯ ಸೋಮವಾರ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಅವರನ್ನು ಭೇಟಿಯಾಗಿದ್ದಾರೆ. ಆಗ ಅವರ ಕಾಲಲ್ಲಿ ವ್ಚಪ್ಪಲಿ ಇಲ್ಲದ್ದು ಕಂಡ ಯಡಿಯೂರಪ್ಪ ಹಾಗೂ ಸಂಸ್ದೆ ಶೋಭಾ ಕರಂದ್ಲಾಜೆ ಅವರ ಅಭಿಮಾನಕ್ಕೆ ಸಂತಸಗೊಂಡಿದ್ದು ಕಡೆಗೆ ಶೋಭಾ ಅವರೇ ಯಡಿಯೂರಪ್ಪ ಅವರಿಗೆ ಅಭಿಮಾನಿಗೆ ಚಪ್ಪಲಿ ಕೊಡಿಸುವಂತೆ ಮನವಿ ಮಾಡಿದ್ದಾರೆ. ನಂತರ ತಮ್ಮ ಕಾರಿನಲ್ಲೇ ಶಿವಕುಮಾರ್ ಅವರನ್ನು ಕರೆದೊಯ್ದು ಚಪ್ಪಲಿ ಕೊಡಿಸಿದ್ದಾರೆ. ಬಳಿಕ ಯಡಿಯೂರಪ್ಪ ಸಮ್ಮುಖದಲ್ಲೇ ಕಾಲಿಗೆ ಹಾಕಿಸಿದ್ದಾರೆ.
“ನನಗೆ ಆದ ಸಂತಸಕ್ಕೆ ಪಾರವಿಲ್ಲ, ಅಪ್ಪಾಜಿ (ಯಡಿಯೂರಪ್ಪ) ಪ್ರೀತಿಯಿಂದ ನನಗೆರಡು ಏಟು ಹೊಡೆದು ಮುಂದೆ ಹೀಗೆಲ್ಲಾ ಮಾಡಬೇಡ ಎಂದರು. ಮತ್ತು ಅವರ ಸಮ್ಮುಖದಲ್ಲೇ ನನಗೆ ಚಪ್ಪಲಿ ಹಾಕಿಸಿದರು. ಆದರೆ ನಾನು ಈ ಚಪ್ಪಲಿ ಬಳಸಲ್ಲ, ಅದನ್ನು ನನ್ನ ಮನೆಯ ಶೋ ಕೇಸ್ ನಲ್ಲಿ ಜೋಪಾನಾಗಿ ಇರಿಸುವೆ” ಶಿವಕುಮಾರ್ ಹೇಳಿದ್ದಾರೆ.
Comments are closed.