ಕರ್ನಾಟಕ

ಮೊಬೈಲ್‌ ನಲ್ಲಿ ಪಬ್​ಜಿ ಗೇಮ್​ ಆಡಬೇಡ ಎಂದು ಬುದ್ಧಿವಾದ ಹೇಳಿದ ತಂದೆಯನ್ನೇ ಭೀಕರವಾಗಿ ಕೊಂದ ಮಗ

Pinterest LinkedIn Tumblr

ಬೆಳಗಾವಿ: ನಿರಂತರವಾಗಿ ಮೊಬೈಲ್‌ ನಲ್ಲಿ ಪಬ್ ಜಿ ಗೇಮ್ ಆಡುತ್ತಿದ್ದ ಮಗನಿಗೆ ಬುದ್ದಿವಾದ ಹೇಳಿದ ತಂದೆಯನ್ನೇ ಪುತ್ರ ಭೀಕರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಬೆಳಗಾವಿಯ ಕಾಕತಿಯ ಸಿದ್ದೇಶ್ವರ ನಗರದಲ್ಲಿ ನಡೆದಿದೆ.

ಕಾಕತಿಯ ನಿವಾಸಿ ಶಂಕರಪ್ಪ ದೇವಪ್ಪ ಕುಂಬಾರ (59) ಮಗನಿಂದ ಹತ್ಯೆಗೀಡಾದ ತಂದೆ. ಆರೋಪಿ ರಘುವೀರ ಶಂಕರ ಕುಂಬಾರ (21) ತಂದೆಯನ್ನು ಕೊಲೆಗೈದಿರುವ ಪುತ್ರ. ಪೊಲೀಸ್ ಇಲಾಖೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಂಕರಪ್ಪ ಮೂರು ತಿಂಗಳ ಹಿಂದೆ ನಿವೃತ್ತಿ ಹೊಂದಿದ್ದರು.

ಪುತ್ರ ರಘುವೀರ ಇತ್ತೀಚೆಗೆ ಮೊಬೈಲ್‌ನಲ್ಲಿ ಹೆಚ್ಚಾಗಿ ಆಟವಾಡಿ ಸುಮ್ಮನೆ ಕಾಲಹರಣ ಮಾಡುತ್ತಿದ್ದ ಎಂದು ಬೇಸರಗೊಂಡಿದ್ದ ತಂದೆ ರಾತ್ರಿ ಹೊತ್ತು ಹೆಚ್ಚು ಮೊಬೈಲ್ ಬಳಸದಂತೆ ಹಲವು ಬಾರಿ ಬುದ್ದಿವಾದ ಹೇಳಿದ್ದರು. ಆದರೆ ಪುತ್ರ ಯಾರ ಮಾತನ್ನೂ ತಲೆಗೆ ಹಾಕಿಕೊಂಡಿರಲಿಲ್ಲ. ಹೀಗೆ ಬುದ್ಧಿ ಹೇಳಿದ್ದಕ್ಕೆ ಮಗ ಒಮ್ಮೆ ಕುಪಿತಗೊಂಡು ಅಕ್ಕಪಕ್ಕದ ಮನೆಯವರ ಕಿಟಕಿ ಗಾಜುಗಳನ್ನು ಒಡೆದುಹಾಕಿದ್ದ. ಆತನನ್ನು ಠಾಣೆಗೆ ಕರೆದೊಯ್ದಿದ್ದ ಕಾಕತಿ ಪೊಲೀಸರು ತಂದೆಯ ಸಮ್ಮುಖದಲ್ಲಿ ಬುದ್ಧಿವಾದ ಹೇಳಿ ಕಳುಹಿಸಿದ್ದರು.

ಕಳೆದ ರಾತ್ರಿ ಕೂಡ ಮೊಬೈಲ್ ಆಡುತ್ತಿದ್ದಾಗ ತಂದೆ ಆತನ ಮೊಬೈಲ್‌ ಅನ್ನು ಕಿತ್ತುಕೊಂಡಿದ್ದರು. ಇದರಿಂದ ತೀವ್ರ ಕೋಪಗೊಂಡು ಮಗ ರಘುವೀರ್, ತಾಯಿಯನ್ನು ಕೋಣೆಯೊಂದರಲ್ಲಿ ಕೂಡಿಹಾಕಿ ಇಳಿಗೆಮಣೆಯಿಂದ ಶಂಕ್ರಪ್ಪನವರ ಕೈಕಾಲು ಹಾಗೂ ಕುತ್ತಿಗೆ ಭಾಗವನ್ನು ಕತ್ತರಿಸಿ ಭೀಕರವಾಗಿ ಕೊಲೆಗೈದಿದ್ದಾನೆ.

ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

Comments are closed.