
ದಾವಣಗೆರೆ: ರಾಜಕಾರಣಿಗಳ ಹೇಳಿಕೆಗಳು ಸ್ವಲ್ಪ ವ್ಯತ್ಯಾಸವಾಗಿರಬಹುದು ಅದನ್ನ ವೈಭವಿಕರಿಸಬಾರದು. ಸಚಿವ ಕೆ.ಎಸ್.ಈಶ್ವರಪ್ಪನವರು ಹಿರಿಯರು ಉದ್ದಟತನದ ಹೇಳಿಕೆ ನೀಡುವವರಲ್ಲ ಎಂದು ಶಾಸಕ ರೇಣುಕಾಚಾರ್ಯ ಅವರು ಗ್ರಾಮೀಣಾಭಿವೃದ್ಧಿ ಸಚಿವರನ್ನು ಸಮರ್ಥಿಸಿಕೊಂಡರು.
ಕಾಂಗ್ರೆಸ್ನವರು ಸಿ.ಎಂ ಯಡಿಯೂರಪ್ಪ ಜೈಲಿಗೆ ಹೋದವರು ಎಂದು ಪದೇ ಪದೇ ಹೇಳುತ್ತಿದ್ದಾರೆ. ಮಾಜಿ ರಾಜ್ಯಪಾಲ ಹಂಸರಾಜ್ ಅಲ್ಲ, ಧ್ವಂಸರಾಜ್, ಅಂದಿನ ಲೋಕಾಯುಕ್ತ ಸಂತೋಷ ಹೆಗಡೆ ಕೊಟ್ಟ ವರದಿಗೆ ಪ್ರಾಸಿಕ್ಯುಷನ್ ಗೆ ಅನುಮತಿ ಕೊಟ್ಟರು. ಸಂತೋಷ ಹೆಗಡೆ ವಿಕೃತ ಮನಸ್ಸಿನ ವ್ಯಕ್ತಿ ಸಿ.ಎಂ ಯಡಿಯೂರಪ್ಪನವರ ಮೇಲೆ ದೂರುದ್ದೇಶದಿಂದ ಕೇಸ್ ಹಾಕಿ ಜೈಲಿಗೆ ಹೋಗುವಂತೆ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದರು.
ಯಡಿಯೂರಪ್ಪ ಭ್ರಷ್ಟಾಚಾರ ಮಾಡಿಲ್ಲ. ಲೂಟಿ ಮಾಡಲಿಲ್ಲ. ರಾಜಕೀಯ ಷಡ್ಯಂತ್ರದಿಂದ ಜೈಲಿಗೆ ಹೋದರು. ಇಂದು ಮಾಜಿ ಗೃಹ ಸಚಿವ ಚಿದಂಬರಂ ಜೈಲಿಗೆ ಹೋಗಿದ್ದಾರೆ. ಅಲ್ಲದೇ ಮಾಜಿ ಸಚಿವ ಡಿ.ಕೆ ಶಿವಕುಮಾರ್ ನನಗೆ ಸ್ನೇಹಿತರು, ಅವರು ಕೂಡ ಜೈಲಿಗೆ ಹೋದರು ಅಂತಾ ನಾನು ಖುಷಿ ಪಡಲ್ಲ ಎಂದು ಮಾನವೀಯತೆಯ ಮಾತುಗಳನ್ನು ಸಚಿವರು ಆಡಿದರು.
ಡಿಕೆಶಿ ಬಂಧನವಾದಾಗ, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಜನರ ಆಸ್ತಿಪಾಸ್ತಿಗೆ ಧಕ್ಕೆ ತಂದಿದ್ದಾರೆ. ಬಿಜೆಪಿಯವರು ಸಿಎಂ ಯಡಿಯೂರಪ್ಪ ಜೈಲಿಗೆ ಹೋದಾಗ ಯಾವುದೇ ಗಲಾಟೆ ಮಾಡಲಿಲ್ಲ , ಕಾಂಗ್ರೆಸ್-ಜೆಡಿಎಸ್ ಪಕ್ಷದ ಶಾಸಕರು ಸ್ವಯಂ ರಾಜೀನಾಮೆ ಕೊಟ್ಟು ಬಂದರೆ ಹಿರಿಯರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದ ರೇಣುಕಾಚಾರ್ಯ, ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಪರೋಕ್ಷವಾಗಿ ಬಿಜೆಪಿ ಪಕ್ಷಕ್ಕೆ ಆಹ್ವಾನಿಸಿದರು.
ಅಲ್ಲದೇ ತಮಗೆ ಸಚಿವ ಸ್ಥಾನ ಕೊಡದೇ ಇರುವ ಬಗ್ಗೆ ಮಾತನಾಡಿದ ಅವರು, ನಾನು ಜಾತ್ಯಾತೀತ ವ್ಯಕ್ತಿ. ನಾನು ಯಾವುದೇ ಉಸ್ತುವಾರಿ ಬಯಸಲ್ಲ. ನನಗೂ ನಾಗೇಶ್ಗೂ ಯಾವುದೇ ಅಸಮಾಧಾನವಿಲ್ಲ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಸ್ಪಷ್ಟಪಡಿಸಿದರು.
Comments are closed.