
ಬೆಂಗಳೂರು(ಆ. 31): ತೆಂಗಿನಕಾಯಿಯನ್ನು ಸಾಮಾನ್ಯವಾಗಿ ಅಡುಗೆಗೆ ಬಳಸುತ್ತಾರೆ. ಆದ್ರೆ ಜೆಪಿ ನಗರದ ಪುಟ್ಟೇನಹಳ್ಳಿಯ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದ ಆವರಣದಲ್ಲಿ 9 ಸಾವಿರ ತೆಂಗಿನಕಾಯಿ, 3 ಸಾವಿರ ಎಳನೀರು ಬಳಸಿ ಬರೋಬ್ಬರಿ 30 ಅಡಿ ಎತ್ತರದ ಪರಿಸರ ಸ್ನೇಹಿ “ತೆಂಗಿನಕಾಯಿ ಗಣಪತಿ”ಯನ್ನು ನಿರ್ಮಿಸಲಾಗ್ತಿದೆ.
ದೇವಸ್ಥಾನದ ಆಡಳಿತ ಮಂಡಳಿ ಕಳೆದ 6 ವರ್ಷದಿಂದ ವಿಭಿನ್ನ ರೀತಿಯಲ್ಲಿ ಪರಸರ ಸ್ನೇಹಿ ಗಣಪನನ್ನು ಕೂರಿಸುವ ಪರಿಪಾಟ ಇಟ್ಕೊಂಡಿದ್ದಾರೆ. ಈ ಬಾರಿ ತೆಂಗಿನಕಾಯಿ ಹಾಗೂ ಎಳನೀರು ಬಳಸಿ ಏಕದಂತನನ್ನು ನಿರ್ಮಾಣ ಮಾಡ್ತಿದ್ದಾರೆ.
ಇನ್ನು, ಗಣೇಶನ ದೇವಸ್ಥಾನ ಒಳಗೆ ಕ್ಯಾರೇಟ್, ಬದನೆಕಾಯಿ, ಬೆಂಡೇಕಾಯಿ, ಸಿಹಿ ಗುಂಬಳಕಾಯಿ, ದೊಡ್ಡಮೆಣಸಿನ ಕಾಯಿ ಸೇರಿದಂತೆ 21 ಬಗೆಯ 30 ಟನ್ ತರಕಾರಿಗಳನ್ನು ಬಳಸಿ ಅಲಂಕಾರ ಮಾಡಲಾಗಿದೆ. ಒಟ್ಟು ನಾಲ್ಕು ದಿನಗಳ ಕಾಲ ಭಕ್ತರಿಗಾಗಿ ತೆಂಗಿನಕಾಯಿ ಗಣಪನನ್ನು ದರ್ಶನಕ್ಕೆ ವ್ಯವಸ್ಥೆ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಇದಾದ ಬಳಿಕ ಇದೇ ತೆಂಗಿನಕಾಯಿ, ಎಳನೀರನ್ನು ಭಕ್ತರಿಗೆ ಹಂಚಲಿದ್ದಾರೆ. ಇದೇ ರೀತಿ ತರಕಾರಿಗಳನ್ನು ವಿತರಿಸಲಿದ್ದಾರೆ. 21 ಬಗೆಯ ತರಕಾರಿಗಳಿಂದ ದೇವಸ್ಥಾನದ ಒಳಾಂಗಣದಿಂದ ವಿನ್ಯಾಸ ಮಾಡಲಾಗುತ್ತಿದ್ದು ನೋಡಲು ಆಕರ್ಷಕವಾಗಿದೆ.
ಈ ಬಾರಿ ತೆಂಗಿನಕಾಯಿ ಗಣಪನನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳ್ತಿದ್ದಾರೆ ಶ್ರೀ ಸತ್ಯಗಣಪತಿ ದೇವಸ್ಥಾನ ಆಡಳಿತ ಮಂಡಳಿ. ಪ್ರತಿ ಬಾರಿಯೂ ಸಿಲಿಕಾನ್ ಸಿಟಿಯಲ್ಲಿ ತರೇಹವಾರಿ ಗಣೇಶನನ್ನು ಕೂರಿಸ್ತಿದ್ದಾರೆ. ಈ ಸಲವೂ ವಿಭಿನ್ನ ರೂಪಗಳಲ್ಲಿ ಗಣೇಶ ನಗರಕ್ಕೆ ಬರ್ತಾನೆ ಅಂತ ಎಲ್ಲರೂ ಕಾಯ್ತಿದ್ದಾರೆ.
Comments are closed.