ಕರ್ನಾಟಕ

ಕುಮಾರಸ್ವಾಮಿ ಸರ್ಕಾರ ಉರುಳೋಕೆ ನಿಜವಾದ ಕಾರಣರು ಯಾರು ಗೊತ್ತಾ?!

Pinterest LinkedIn Tumblr


ಒಂದೆಡೆ ಮಾಜಿ ಸಿಎಂ ಸಿದ್ಧರಾಮಯ್ಯ ಮೈತ್ರಿ ಸರ್ಕಾರ ಉರುಳೋಕೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೆಗೌಡರು ಹಾಗೂ ಅವರ ಕುಟುಂಬವೇ ಕಾರಣ ಎಂದು ಕಿಡಿಕಾರುತ್ತಿದ್ದರೇ, ಇತ್ತ ಎಚ್​ಡಿಡಿ ಸಮ್ಮಿಶ್ರ ಸರ್ಕಾರ ಉರುಳಿಸಿದ್ದೇ ಸಿದ್ಧರಾಮಯ್ಯ ಎನ್ನುತ್ತಿದ್ದಾರೆ. ಆದರೆ ಈ ಆರೋಪ ಪ್ರತ್ಯಾರೋಪಗಳಿಗೆ ಇದೀಗ ಮಾಜಿ ಸಚಿವ ಹಾಗೂ ಅನರ್ಹ ಶಾಸಕ, ಮಾಜಿ ಸಿಎಂ ಸಿದ್ಧರಾಮಯ್ಯ ಆಪ್ತ ಎಂ.ಟಿ.ಬಿ.ನಾಗರಾಜ್ ಹೊಸ ಟ್ವಿಸ್ಟ್​ ನೀಡಿದ್ದು ಸರ್ಕಾರ ಉರುಳೋದಿಕ್ಕೆ ಸಿದ್ಧರಾಮಯ್ಯನವರೂ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.

ಕೋಲಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಂಟಿಬಿ, ಕಾಂಗ್ರೆಸ್ ರಾಜ್ಯದಲ್ಲಿ ನೆಲಕಚ್ಚಲು ಹಾಗೂ ಸಂಪೂರ್ಣವಾಗಿ ಹಾಳಾಗಲು ಕಾಂಗ್ರೆಸ್​ ನಾಯಕರ ಸ್ವಾರ್ಥ ಹಾಗೂ ಏಕಪಕ್ಷೀಯ ನಿರ್ಧಾರಗಳೇ ಕಾರಣ. ಒಂದರ್ಥದಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳೋದಿಕ್ಕೆ ದೇವೆಗೌಡರು ಹಾಗೂ ಸಿದ್ಧರಾಮಯ್ಯನವರೇ ಕಾರಣ ಎಂದಿದ್ದಾರೆ.

ನಾನು ರಾಜೀನಾಮೆ ನೀಡುತ್ತೇನೆ. ನನಗೆ ಸಚಿವನಾಗಿದ್ದರೂ ಯಾವುದೇ ಸ್ವಾತಂತ್ರ್ಯವಿಲ್ಲ. ಒಂದು ಜಂಟಿ ಶಾಸಕಾಂಗ ಸಭೆ ಮಾಡಿ ಎಲ್ಲ ಶಾಸಕರ ಅಹವಾಲುಗಳನ್ನು ಕೇಳಿ ಎಂದು ಸಿದ್ಧರಾಮಯ್ಯನವರ ಬಳಿ ಮನವಿ ಮಾಡಿದ್ದೆ. ಆದರೆ ಸಿದ್ಧರಾಮಯ್ಯನವರು ನಮ್ಮನ್ನು ನಿರ್ಲಕ್ಷಿಸಿದರು. ರಾಜೀನಾಮೆ ನೀಡುತ್ತೇನೆ ಎಂದರೂ ಕ್ಯಾರೆ ಎನ್ನಲಿಲ್ಲ. ಇಂತಹುದೇ ಕಾರಣಗಳಿಂದ ನಾವೆಲ್ಲ 40 ವರ್ಷಗಳಿಂದ ಕಾಂಗ್ರೆಸ್ ಕಟ್ಟಿದವರು ಪಕ್ಷ ಬಿಟ್ಟು ಬರುವಂತಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ನಿಷ್ಟಾವಂತ ಕಾಂಗ್ರೆಸ್ಸಿಗ. ಪ್ರಾಮಾಣಿಕತೆಯಿಂದ ವ್ಯಾಪಾರ ಮತ್ತು ರಾಜಕೀಯ ಎರಡನ್ನು ಮಾಡಿದ್ದೇನೆ. ನನ್ನ ಬಗ್ಗೆ ಸುಳ್ಳು ಅರೋಪಗಳು ಮಾಡಿದ್ರೆ ಇವರ ಬಗ್ಗೆ ಬಿಚ್ಚಿಡಬೇಕಾಗುತ್ತದೆ. ಯಾರಾದ್ರೂ ಬೇಕಿದ್ದರೇ ನನ್ನೊಂದಿಗೆ ದೇವಸ್ಥಾನಕ್ಕೆ ಬರಲಿ ನಾನು ಆಣೆ-ಪ್ರಮಾಣ ಮಾಡಲು ಸಿದ್ಧವಿದ್ದೇನೆ. ನನ್ನ ತಂಟೆಗೆ ಬಂದ್ರೇ ಇವರ ಕಥೆಗಳನ್ನ ಹೇಳಬೇಕಾಗುತ್ತದೆ ಎಂದು ಕಾಂಗ್ರೇಸ್ ಮುಖಂಡರಿಗೆ ಎಂಟಿಬಿ ಎಚ್ಚರಿಕೆ ನೀಡಿದ್ದಾರೆ. ನಾವು ಮೂಲ ಕಾಂಗ್ರೆಸಿಗರು ಅಧಿಕಾರಕ್ಕಾಗಿ ಕಾಂಗ್ರೆಸ್​​ಗೆ ಬಂದವರಿಗೆ ನಮ್ಮ ಮಾತನಾಡುವ ಅಧಿಕಾರ ಇಲ್ಲ ಎಂದು ಗುಡುಗಿದ್ದಾರೆ.

Comments are closed.