
ಮೆಕ್ಸಿಕೋ: ಇಲ್ಲಿನ ಕೋಟ್ಜಾಕೋಲಸ್ ನಗರದ ಬಾರ್ಗೆ ನುಗ್ಗಿದ ದುಷ್ಕರ್ಮಿಗಳು ಅಲ್ಲಿನ ಪ್ರವೇಶ ಹಾಗೂ ನಿರ್ಗಮನದ ಬಾಗಿಲುಗಳನ್ನೆಲ್ಲವನ್ನೂ ಮುಚ್ಚಿ ಒಂದೇ ಸಮ ಗುಂಡಿನ ದಾಳಿ ನಡೆಸಿದ್ದು ಸುಮಾರು 26 ಜನರು ಮೃತಪಟ್ಟಿದ್ದಾರೆ.
ಮಂಗಳವಾರ ತಡರಾತ್ರಿ ಘಟನೆ ನಡೆದಿದ್ದು ಬುಧವಾರ ಅಲ್ಲಿನ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಕ್ಯಾಬಲ್ಲೊ ಬ್ಲಾಂಕೊ ಬಾರ್ ಮೇಲೆ ನಡೆದಿರುವ ಈ ದಾಳಿ ಅತ್ಯಂತ ಭೀಕರವಾಗಿದೆ ಎಂದು ಆಂಡ್ರೆಸ್ ಹೇಳಿದ್ದಾರೆ.
ದಾಳಿಯ10 ಮಹಿಳೆಯರು ಹಾಗೂ 16 ಪುರುಷರು ಮೃತಪಟ್ಟಿದ್ದು 11 ಜನರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನೆಲ್ಲ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೆರಾಕ್ರಜ್ನ ಅಟಾರ್ನಿ ಜನರಲ್ ಕಚೇರಿ ಮಾಹಿತಿ ನೀಡಿದೆ. ತನಿಖೆ ಈಗಾಗಲೇ ಪ್ರಾರಂಭವಾಗಿದ್ದು, ಈ ಮೊದಲು ಇಂತಹ ದಾಳಿ ನಡೆಸಿ ಜೈಲು ಸೇರಿ ನಂತರ ಬಿಡುಗಡೆಗೊಂಡವರೇ ಯಾರೋ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಆಂಡ್ರೆಸ್ ತಿಳಿಸಿದ್ದಾರೆ.
ಎಡಪಂಥೀಯರಾದ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಭೀಕರವಾದ ಸಾಮೂಹಿಕ ಹತ್ಯೆ ನಡೆದಿದೆ ಎನ್ನಲಾಗಿದೆ. ಇವರು ಕಳೆದ ಡಿಸೆಂಬರ್ನಲ್ಲಿ ಅಧಿಕಾರ ವಹಿಸಿಕೊಂಡಿದ್ದು ಈ ವೇಳೆ ಮೆಕ್ಸಿಕೋದಲ್ಲಿರುವ ಅಸಮಾನತೆ ಹಾಗೂ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದಾಗಿ ಹೇಳಿ ಪ್ರಮಾಣವಚನ ಸ್ವೀಕರಿಸಿದ್ದರು.
Comments are closed.