
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೂತನ ಸಚಿವರ ಖಾತೆ ಹಂಚಿಕೆ ಕಗ್ಗಂಟಾಗಿದ್ದರೆ, ಇನ್ನೊಂದೆಡೆ ಅನರ್ಹ ಶಾಸಕರ ತೀರ್ಪು ವಿಳಂಬವಾಗುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿದೆ. ಅಲ್ಲದೆ, ಬಿಎಸ್‌ವೈ ಸಿಎಂ ಆಗಿದ್ದರು, ಯಾವುದೇ ಸ್ವಾತಂತ್ರ್ಯ ನೀಡದೆ ಹೈಕಮಾಂಡ್ ಹಿಡಿತ ಸಾಧಿಸುತ್ತಿರುವುದು ಬಿಎಸ್ವೈಗೆ ಬೇಸರವಾಗಿದೆ. ಇದರ ಮಧ್ಯೆ ಸಿಎಂ ಬಿಎಸ್ವೈಗೆ ಕಡಿವಾಣ ಹಾಕಲು ಬಿಜೆಪಿ ಹೈಕಮಾಂಡ್ ಡಿಸಿಎಂ ಹುದ್ದೆ ಸೃಷ್ಟಿಗೆ ನಿರ್ಧಾರ ಮಾಡಿರುವುದು ಸರ್ಕಾರಕ್ಕೆ ಕಂಟಕ ತರುವ ಲಕ್ಷಣಗಳು ಕಾಣುತ್ತಿವೆ.
ಹೈಕಮಾಂಡ್ ನಿರ್ಧಾರದಿಂದ ರಾಜ್ಯ ಬಿಜೆಪಿ ನಾಯಕರಲ್ಲಿ ಭಿನ್ನಮತ ಸೃಷ್ಟಿಯಾಗುವ ಆತಂಕ ಸಿಎಂ ಬಿಎಸ್ವೈಗೆ ಎದುರಾಗಿದೆ. ಡಿಸಿಎಂ ಹುದ್ದೆ ಮೂಲಕ ಸರ್ಕಾರಕ್ಕೆ ಕಡಿವಾಣ ಹಾಕಲು ಹೈಕಮಾಂಡ್ ನಿರ್ಧಾರ ಮಾಡಿರುವುದರಿಂದಲೇ ಖಾತೆ ಹಂಚಿಕೆ ವಿಳಂಬವಾಗಿದೆ ಎಂಬ ಮಾತುಗಳು ಕೂಡ ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿದೆ. ಇದು ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ.
ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಮೂವರು ಘಟಾನುಘಟಿ ನಾಯಕರಿಗೆ ಸ್ಥಾನ ತಪ್ಪುವ ಸುಳಿವು ದೊರೆತಿರುವುದರಿಂದ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆಯನ್ನು ಸಿಎಂ ಬಿಎಸ್‌ವೈ ಮುಂದೆ ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗಿದೆ. ನಾಯಕರ ಈ ನಿರ್ಧಾರದಿಂದ ಸರ್ಕಾರಕ್ಕೆ ಕಂಟಕ ಎದುರಾದರೂ ಅಚ್ಚರಿ ಪಡಬೇಕಾಗಿಲ್ಲ ಎಂಬ ಚರ್ಚೆ ಶುರುವಾಗಿದೆ.
ಅಸಮಾಧಾನಗೊಂಡಿರುವ ಮೂವರು ಘಟಾನುಘಟಿ ಸಚಿವರೆಂದರೆ, ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್. ನಮಗಿಂತ ಕಿರಿಯರಿಗೆ ಡಿಸಿಎಂ ಕೊಟ್ರೆ ನಾವೇನು ಮಾಡೋದು? ಡಿಸಿಎಂ ಸ್ಥಾನ ಸಿಗದಿದ್ರೆ ಸರ್ಕಾರದಿಂದ ಹೊರಗಿರೋದೆ ಲೇಸು ಎಂದು ರಾಜೀನಾಮೆ ನೀಡುವುದಾಗಿ ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಸಿಎಂ ಬಿಎಸ್‌ವೈ ಅವರನ್ನು ಭೇಟಿ ಮಾಡಿದ ವೇಳೆ ನೇರವಾಗಿ ಈ ವಿಚಾರವನ್ನು ಮೂವರು ನಾಯಕರು ಪ್ರಸ್ತಾಪ ಮಾಡಿದ್ದಾರೆ ಎಂಬುದು ತಿಳಿದುಬಂದಿದ್ದು, ರಾಜೀನಾಮೆ ಮಾತು ಬೇಡ. ಇದೆಲ್ಲಾ ಹೈಕಮಾಂಡ್ ನಿರ್ಧಾರ ಎಂದು ಬಿಎಸ್‌ವೈ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಇದೆಲ್ಲದರ ನಡುವೆ ಹೈಕಮಾಂಡ್‌ಗೂ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರರಾವ್ ಮೂಲಕ ಮೂವರು ನಾಯಕರು ಸಂದೇಶ ರವಾನಿಸಿದ್ದಾರೆ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿದೆ.
Comments are closed.