ಕರ್ನಾಟಕ

ಬಿಜೆಪಿ ಮೇಲೆ ಅನರ್ಹ ಶಾಸಕರ ಆಕ್ರೋಶ; ರೆಬೆಲ್ಸ್​​ ಮುಂದಿನ ನಡೆಯೇನು?

Pinterest LinkedIn Tumblr


ಬೆಂಗಳೂರು(ಆಗಸ್ಟ್​​.24): ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪನವರ ಭೇಟಿ ಬಳಿಕವೂ ಅನರ್ಹ ಶಾಸಕರಿಗೆ ಅತಂತ್ರದ ಭಯ ಕಾಡುತ್ತಿದೆ ಎನ್ನಲಾಗಿದೆ. ಯಾವುದೇ ವಕೀಲರನ್ನೂ ಭೇಟಿ ಮಾಡಿದರೂ, ತಮ್ಮ ಪರವಾಗಿ ಸುಪ್ರೀಂಕೋರ್ಟ್​​ನಲ್ಲಿ ತೀರ್ಪು ನೀಡಲಿದೆ ಎಂಬ ವಿಶ್ವಾಸವೂ ಇಲ್ಲವಾಗಿದೆ. ಇತ್ತ ತಾವು ದೆಹಲಿಗೆ ಬಂದರೂ ಹೈಕಮಾಂಡ್ ಕ್ಯಾರೇ ಎನ್ನಲಿಲ್ಲ. ಅತ್ತ ಭರವಸೆ ಕಳೆದುಕೊಂಡ ಕೆಲವು ಅನರ್ಹ ಶಾಸಕರು ಬೆಂಗಳೂರಿಗೆ ಹೊರಟಿದ್ದಾರೆ. ಇನ್ನೊಂದಷ್ಟು ಜನ ಸೋಮವಾರ ನಡೆಯಲಿರುವ ವಿಚಾರಣೆಗಾಗಿ ಎದುರು ನೋಡುತ್ತಿದ್ದಾರೆ. ಹಾಗಾಗಿ ಸದ್ಯಕ್ಕೀಗ ಮುಖ್ಯಮಂತ್ರಿಯವರಿಗೆ ಅತಂತ್ರ ಸ್ಥಿತಿಯಲ್ಲಿರುವ ಅನರ್ಹ ಶಾಸಕರ ಭಿನ್ನ ನಡೆಯೇನು ಎಂಬುದರ ಬಗ್ಗೆ ಆಂತಕ ಮೂಡಿಸಿದೆ. ಕೋರ್ಟ್​ನಲ್ಲಿ ಅನರ್ಹರ ಕಥ ಏನಾಗುತ್ತೋ ಎಂಬ ಭಯ ಕಾಡುತ್ತಿದೆ. ಒಂದು ವೇಳೆ ಅನರ್ಹರಿಗೆ ಯಾವುದಾದರೂ ತೊಂದರೆಯಾದಲ್ಲಿ, ಸರ್ಕಾರಕ್ಕೂ ಸಂಕಷ್ಟ ಎದುರಾಗಲಿದೆ ಎಂಬ ಭಯದಲ್ಲಿ ಸಿಎಂ ಇದ್ದಾರೆ.

ನೂತನ ಸಚಿವರಿಗೆ ಖಾತೆ ಹಂಚಿಕೆ ಸಂಬಂಧ ಚರ್ಚಿಸಲು ಬಿ.ಎಸ್​​ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್​ ಭೇಟಿಗಾಗಿ ಗುರುವಾರ ರಾತ್ರಿಯೇ ದೆಹಲಿಗೆ ತೆರಳಿದ್ದರು. ಆದರೆ, ಅಮಿತ್​​ ಶಾ ಅವರು ಮಾತ್ರ ಸಿಎಂ ಅವರನ್ನು ಭೇಟಿಯಾಗಿಲ್ಲ ಎಂದು ಮೂಲಗಳು ತಿಳಿಸಿದ್ದವು. ಇನ್ನೊಂದೆಡೆ ದೆಹಲಿಯಲ್ಲೇ ತೀರ್ಪಿಗಾಗಿ ಕಾಯುತ್ತಿರುವ ಅನರ್ಹ ಶಾಸಕರು ಕೂಡ ಸಿಎಂ ಜೊತೆ ಮಾತುಕತೆ ವೇಳೆ ಭಾರೀ ಬೇಡಿಕೆ ಇಟ್ಟಿದ್ದಾರೆ.

ಅನರ್ಹರು ಮತ್ತು ಯಡಿಯೂರಪ್ಪ ನಡುವಿನ ಮಾತುಕತೆಯೂ ತುಸು ಬಿಗುವಿನಿಂದ ಕೂಡಿತ್ತು ಎನ್ನಲಾಗಿದೆ. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ನೀವು ನೀಡಿದ್ದ ಯಾವುದೇ ಭರವಸೆಯಂತೇ ನಡೆದುಕೊಳ್ಳುತ್ತಿಲ್ಲ ಎಂದು ಅನರ್ಹರು ಕ್ಯಾತೆ ತೆಗೆದಿದ್ದಾರಂತೆ.

ಇನ್ನು ಸುಪ್ರೀಂಕೋರ್ಟ್​​ನಲ್ಲಿ ಇರುವ ಅನರ್ಹತೆ ಪ್ರಕರಣಕ್ಕೆ ಬಿಜೆಪಿ ಯಾವುದೇ ಕಾನೂನಾತ್ಮಕ ನೆರವು ನೀಡುತ್ತಿಲ್ಲ. ನಮಗೆ ನೀಡುತ್ತೀರಿ ಎನ್ನಲಾದ ಖಾತೆಗಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಬೇಕು. ಅನರ್ಹತೆ ಪ್ರಕರಣ ಇತ್ಯರ್ಥವಾದ ಬಳಿಕ ನಮ್ಮ ಖಾತೆ ನಮಗೆ ನೀಡಬೇಕೆಂದು ಅನರ್ಹರು ಆಗ್ರಹಿಸಿದ್ದಾರೆ.

ಈ ಮಧ್ಯೆ ಸಚಿವ ಡಾ. ಸಿ.ಎನ್‌ ಅಶ್ವತ್ಥನಾರಾಯಣ ಹಾಗೂ ಸಿಎಂ ಪುತ್ರ ವಿಜಯೇಂದ್ರ ಅವರು ಅನರ್ಹ ಶಾಸಕರ ಜೊತೆಗೆ ಮಾತುಕತೆ ನಡೆಸಿದರೂ ಯಾವುದೇ ಫಲಿತಾಂಶ ಸಿಕ್ಕಿಲ್ಲ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಅಮಿತ್‌ ಶಾರನ್ನು ಭೇಟಿ ಮಾಡಿಸಬೇಕೆಂದು ಪಟ್ಟು ಹಿಡಿದಿದ್ದರು ಎಂದು ತಿಳಿದು ಬಂದಿದೆ.

Comments are closed.