ಕರ್ನಾಟಕ

ಅನರ್ಹ ಶಾಸಕರಿಗೆ ಕೈಕೊಟ್ಟ ಬಿಜೆಪಿ ! ರಮೇಶ್ ಜಾರಕಿಹೊಳಿ ನಿವಾಸದಲ್ಲಿ ನಡೆಯಿತು ಅನರ್ಹ ಶಾಸಕರ ರಹಸ್ಯ ಸಭೆ ! ಮುಂದಿನ ನಡೆ ಏನು…?

Pinterest LinkedIn Tumblr

ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ಶಾಸಕ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಿ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಪತನಗೊಳಿಸಿದ ಕಾಂಗ್ರೆಸ್-ಜೆಡಿಎಸ್ ಅನರ್ಹ ಶಾಸಕರನ್ನು ಬಿಜೆಪಿ ನಾಯಕರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ.

ಇದರಿಂದ ಅಸಮಾಧಾನಗೊಂಡಿರುವ ಶಾಸಕರು ನಿನ್ನೆ ತಡರಾತ್ರಿ ಖಾಸಗಿ ಹೋಟೆಲಿನಲ್ಲಿ ಸಭೆ ನಡೆಸಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದರು. ಇಂದು ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ಸೇರಿ ತಮ್ಮ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಿದರು.

ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಅನರ್ಹ ಶಾಸಕರು ತಮ್ಮ ಅರ್ಜಿ ಇತ್ಯರ್ಥವೂ ಆಗದೆ ಅತ್ತ ಅಧಿಕಾರವೂ ಸಿಗದೆ ಅತಂತ್ರರಾಗಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಹೊರಬೀಳುವವರೆಗೂ ರಾಜಕೀಯ ಬದುಕು ಅತಂತ್ರವಾಗಿಯೇ ಇರಲಿದೆ. ಇತ್ತ ಮಂತ್ರಿ ಹುದ್ದೆ ನೀಡುವುದಾಗಿ ಹೇಳಿದ್ದ ಬಿಜೆಪಿ ನಾಯಕರು ಅನರ್ಹ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಬಿಜೆಪಿ ನಾಯಕರ ನಡೆಯಿಂದ ಆತಂಕಗೊಂಡಿರುವ ಅನರ್ಹರು ಬಿಜೆಪಿ ಹೈಕಮಾಂಡ್​ ರವಾನಿಸಲಿರುವ ಸಚಿವರ ಅಂತಿಮ ಪಟ್ಟಿಗಾಗಿ ಕಾದು ಕುಳಿತಿದ್ದಾರೆ.

ಈ ಎಲ್ಲಾ ಬೆಳವಣಿಗಳಿಂದ ಬೇಸತ್ತು ಭಾನುವಾರ ತಡರಾತ್ರಿ ನಗರದ ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಸಿರುವ ಇವರು, ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚಿಸಿದ್ದಾರೆ. ಸುಪ್ರಿಂ ಕೋರ್ಟ್​ನಲ್ಲಿ ಕಾನೂನು ಹೋರಾಟಕ್ಕೂ ಬಿಜೆಪಿ ನಾಯಕರು ಸಹಕಾರ ನೀಡುತ್ತಿಲ್ಲ. ನಮ್ಮ ರಕ್ಷಣೆಗೂ ಬಿಜೆಪಿ ನಾಯಕರು ಧಾವಿಸುತ್ತಿಲ್ಲ ಎಂದು ರೆಬೆಲ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ಅನರ್ಹರ ಶಾಸಕರು ರಮೇಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡ ಬಿಜೆಪಿ ನಾಯಕರು ಅನರ್ಹ ಶಾಸಕರನ್ನು ಸಮಾಧಾನಪಡಿಸುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಸೂಚನೆ ಹಿನ್ನಲೆಯಲ್ಲಿ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಸಿ.ಪಿ ಯೋಗೇಶ್ವರ್ ಹಾಗೂ ಶೆಶಿಕಲಾ ಜೊಲ್ಲೆ ಆಗಮಿಸಿ ಅಸಮಾಧಾನಿತ ಶಾಸಕರನ್ನು ಸಮಾಧಾನಪಡಿಸಲು ಪ್ರಯತ್ನ ನಡೆಸಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಹೊತ್ತು ಚರ್ಚಿಸಿದ ಯೋಗೇಶ್ವರ್ ಬಳಿಕ ಅಲ್ಲಿಂದ ತೆರಳಿದರು.

Comments are closed.