ಕರ್ನಾಟಕ

ಪಶ್ಚಿಮ ಘಟ್ಟದ 9 ಗುಡ್ಡಗಳಲ್ಲಿ ಭಾರಿ ಕುಸಿತ

Pinterest LinkedIn Tumblr


ಪಶ್ಚಿಮ ಘಟ್ಟದ ಪ್ರಮುಖ 9 ಬೆಟ್ಟಗಳಲ್ಲಿ ಬೃಹತ್ ಕುಸಿತ ಪರಿಣಾಮ ಪ್ರದೇಶಗಳ ಮರು ನಿರ್ಮಾಣ ಅಸಾಧ್ಯ ಎನ್ನ್ನುವಷ್ಟರ ಮಟ್ಟಿಗೆ ಸ್ಥಿತಿ ಬಿಗಡಾಯಿಸಿದ್ದು, ಅಲ್ಲಿನ ನಿವಾಸಿಗಳು ಮೂಲಸ್ಥಾನಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಬೆಳ್ತಂಗಡಿ-ಮೂಡಿಗೆರೆ ಪ್ರದೇಶದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಟ್ಟ, ಎಳನೀರು-ಬಂಗ್ರಪಲ್ಕೆ, ಗಾಳಿಗಂಡಿ ಬೆಟ್ಟ, ಇರೆಬೈಲು ಬೆಟ್ಟ, ಮೈದಾಡಿ ಬೆಟ್ಟ, ಬಳ್ಳಾಲರಾಯನ ದುರ್ಗ, ಅಗಲ್ದಬೆಟ್ಟ, ಬಣ್ಣಕಲ್ಲು ಬೆಟ್ಟ, ಕಡ್ತಿಕಲ್ಲು ಬೆಟ್ಟ ನಿರಂತರ ಮಳೆಗೆ ಈಗಲೂ ಕುಸಿಯುತ್ತಲೇ ಇದೆ. ಕುಸಿತದ ಪರಿಣಾಮ ನೇತ್ರಾವತಿಯ ಉಪನದಿಗಳ ಪಥವೂ ಬದಲಾಗಿದೆ. ಹಲವೆಡೆ ಹೊಸ ಜಲಪಾತ, ನದಿಮೂಲಗಳ ಉಗಮವಾಗಿವೆ. ಪರಿಸರ ತಜ್ಞರ ಪ್ರಕಾರ ಪಶ್ಚಿಮಘಟ್ಟದ 9 ಬೆಟ್ಟಗಳಲ್ಲಿ 456 ಪ್ರದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಬಂಡೆ ಸಹಿತ ಮಣ್ಣು ಕುಸಿತವಾಗಿದ್ದು, ಬೆಟ್ಟ ಪ್ರದೇಶಲ್ಲಿ ಬರೆ ಎಳೆದಂತೆ ಕಾಣುತ್ತಿದೆ.

ಜನವಸತಿ ಪ್ರದೇಶಗಳೆಲ್ಲ ಮಣ್ಣುಪಾಲು
ಕುದುರೆಮುಖ ರಾಷ್ಟ್ರೀಯ ಉದ್ಯಾವನ ವ್ಯಾಪ್ತಿಯ ಬೆಟ್ಟ ಪ್ರದೇಶದ ಜನವಸತಿ ಪ್ರದೇಶವಾದ ಪಾಟಾಲಿಗುಟ್ಟ, ಕಬೆಟ್ಟು, ಕುಂಬಪಾಲ, ಪಣಿಂಕಾಲ್‌ಪಾಡಿ, ಕೊರಂಗಲ್ ಗುಡ್ಡಪ್ರದೇಶ, ಎಳನೀರು-ಬಂಗ್ರಪಲ್ಕೆ ಬೆಟ್ಟ ಪ್ರದೇಶದ ಅರಸಿನಮಕ್ಕಿ, ತಿಮ್ಮಯ್ಯಕಂಡ, ಗಾಳಿಗಂಡಿ ಬೆಟ್ಟ ಪ್ರದೇಶದ ಕಜಕ್ಕೆ, ಇರೆಬೈಲು ಬೆಟ್ಟ ಪ್ರದೇಶದ ಇರಬೈಲು, ಚಾರ್ಮಾಡಿ ಘಾಟಿ ಮಧ್ಯ ಭಾಗದ ಮೈದಾಡಿ ಬೆಟ್ಟ ಪ್ರದೇಶ, ಬಳ್ಳಾಲರಾಯನ ದುರ್ಗದ ಪೂರ್ವ ವ್ಯಾಪ್ತಿಯ ನಂದಿಕಾಡು, ಸಿಂಗನೂರು, ಪಲ್ಲ, ಮುಕ್ಕ, ಎರ್ಮಾಯಿ ಅರಣ್ಯ ಪ್ರದೇಶ, ಅಗ್ಗಲ್ದಬೆಟ್ಟ ಪ್ರದೇಶದ ಮಧ್ಯದದಲ್ಲಿರುವ ಪರ್ಲತುಳುಪುಲೆ, ಮಿತ್ತೂರು, ದೇಸಿಲ್, ಚಾವಡಿಗುಡ್ಡ, ಚಾವಡಿತೋಟ, ನೆಕ್ಕಿಲೊಟ್ಟು, ಬಣ್ಣಕಲ್ಲು ಬೆಟ್ಟ ವ್ಯಾಪ್ತಿಯ ಕಾಯಂದೂರು, ಮಲ್ಲಪಲ್ಕೆ, ಹೊಸತೋಟ, ಗುಡಾಲ್, ಕಡ್ತಿಕಲ್ಲು ಬೆಟ್ಟ ವ್ಯಾಪ್ತಿಯ ಮಕ್ಕಿ, ಪಲ್ಲಬೆಟ್ಟ, ಇಲ್ಯಯರ ಗುಡ್ಡ, ಕಡ್ತಿಕುಮೇರು, ದೈಪಿಲ್ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿ ಬೃಹತ್ ಗುಡ್ಡ ಕುಸಿತ, ಪ್ರವಾಹದ ಹೊಡೆತಕ್ಕೆ ಹೆಚ್ಚಿನ ಪ್ರಮಾಣದ ಹಾನಿ ಸಂಭ ವಿಸಿದೆ.

ಪಥ ಬದಲಿಸಿದ ನದಿಮೂಲಗಳು
ನೇತ್ರಾವತಿಯ ಪ್ರಮುಖ ನದಿಮೂಲಗಳಾದ ಮೃತ್ಯುಂಜಯ, ಅಣಿಯೂರುಹಳ್ಳ, ಸುನಾಳಹೊಳೆ, ನೆರಿಯಹೊಳೆ, ಎಳನೀರು ಹೊಳೆಗಳು ಚಾರ್ಮಾಡಿ ಘಾಟಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದ್ದು, ಗುಡ್ಡಕಂಪನದ ಪ್ರಖರತೆಗೆ ಕೆಲವು ಒರತೆಗಳು ಮುಚ್ಚಿ, ಬೇರೊಂದು ಪ್ರದೇಶದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದೆ. ನಂದಿಬೆಟ್ಟ, ಪಾತಾಲಿಕೆ ಅರಣ್ಯ ವ್ಯಾಪ್ತಿಯಲ್ಲಿ ಹೊಸ ಹೊಳೆಯೇ ಸೃಷ್ಟಿಯಾಗಿದ್ದು, ಈ ವ್ಯಾಪ್ತಿಯ 50 ಎಕರೆ ತೋಟ ವ್ಯಾಪ್ತಿಯಲ್ಲಿ ನದಿಯಂತೆ ನೀರು ಹರಿಯುತ್ತಿವೆ.

ದೇವರಮನೆ, ಬಾರಿಮಲೆ ವ್ಯಾಪ್ತಿಯಲ್ಲಿ ಉಗಮವಾಗುವ ಸುನಾಳಹೊಳೆ ಅಣಿಯೂರು ಭಾಗದ ಅಂಬಟ್ಟಿಮಲೆ ಸಮೀಪ ಅಣಿಯೂರು ಹೊಳೆಗೆ ಸೇರ್ಪಡೆಗೊಳ್ಳುತ್ತದೆ. ಸೇರ್ಪಡೆಗೊಳ್ಳುವ ಪ್ರದೇಶ ಹಿಂದಿಗಿಂತ ಹೆಚ್ಚು ವಿಸ್ತಾರವಾಗಿದೆ. ದೇವರ ಕಣಿವೆ ಹಾಗೂ ಕುಂಬಕಲ್ಲುಬೆಟ್ಟ ಮೂಲಕ ಉಗಮವಾಗುವ ನೆರಿಯ ಹೊಳೆ ಗಂಡಿಬಾಗಿಲು ಸಮೀಪ ನೇತ್ರಾವತಿ ನದಿ ಸೇರುತ್ತದೆ. ದೇವರಕಣಿವೆ ಹಾಗೂ ಕುಂಬಕಲ್ಲುಬೆಟ್ಟ ಬಹುತೇಕ ಕಡೆಗಳಲ್ಲಿ ಕುಸಿದಿದ್ದು, ಹಲವು ತೊರೆಗಳು ಸಿದ್ದಕಾಡು ಪ್ರದೇಶದಲ್ಲಿ ಪಥ ಬದಲಿಸಿವೆ. ಎಳನೀರುಹೊಳೆ ಹಿರಿಮರಿಗುಡ್ಡ ಮೂಲಕ ಕೃಷ್ಣಗಿರಿ, ಕುದುರೆಮುಖ, ಕಲ್ಬೆಡ್ಡು ಮೂಲಕ ನೇತ್ರಾವತಿ ಸೇರುತ್ತದೆ. ಈ ನದಿ ಬೊಳ್ಳುಗುಡ್ಡ, ತೇರುಗುಡ್ಡ ಪ್ರದೇಶದಲ್ಲಿ ಹರಿಯುವ ಬದಲಾಗಿ ಕಲ್ಬೆಡ್ಡು ಪೂರ್ವದಲ್ಲೇ ಹೊಸ ಮಾರ್ಗವಾಗಿ ಹರಿಯುತ್ತಿದೆ. ಕಲ್ಬೆಡ್ಡು ಶೇ.60 ಬೆಟ್ಟ ಗುಡ್ಡಗಳು ಆವರಿಸಿದ ಪ್ರದೇಶ ಆಗಿರುವುದರಿಂದ ಗುಡ್ಡ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಕುಸಿತ, ಹೊಸ ಜಲಪಾತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದು.

ಮರು ನಿರ್ಮಾಣ ಕಷ್ಟ
ಪಶ್ವಿಮಘಟ್ಟದ ಪ್ರಮುಖ ಬೆಟ್ಟಗಳಲ್ಲಿ ಬೃಹತ್ ಪ್ರಮಾಣದ ಕುಸಿತ ಸಂಭವಿಸಿದ್ದರಿಂದ ಈ ಪ್ರದೇಶದ ಕೆಲವು ಜನವಾಸ ಪ್ರದೇಶಗಳ ಮರು ನಿರ್ಮಾಣ ಕಷ್ಟಸಾಧ್ಯ. ಚಾರ್ಮಾಡಿ ಘಾಟಿ ಪ್ರದೇಶದ ಬಿದಿರುತಳ, ಅಲೆಕ್ಕಾನ, ಹೊರಟಿ, ಮಲೆಮನೆ, ಬಾವಳೆ, ಬಾಲೂರು, ಮೇಗೂರಿನ 1 ಸಾವಿರ ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಮಣ್ಣು ತುಂಬಿಕೊಂಡಿದ್ದು, ಮನೆಗಳು ಹೂತುಹೋಗಿವೆ. ಈ ಪ್ರದೇಶದ ಸುಮಾರು 171 ಜನರನ್ನು ಮೂಡಿಗೆರೆಗೆ ಸ್ಥಳಾಂತರಿಸಲಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾವನ ವ್ಯಾಪ್ತಿಯ ಪರ್ಲ, ಮಕ್ಕಿ, ಎಲ್ಯರಕಂಡ ಪ್ರದೇಶ ಪೂರ್ಣ ಪ್ರಮಾಣದಲ್ಲಿ ಕುಸಿದಿದ್ದು, ಇಲ್ಲಿನ 17 ಕುಟುಂಬಗಳು ಅಗರಿಮಾರು ಪಾಲನಾ ಕೇಂದ್ರದಲ್ಲಿ ಆಶ್ರಯ ಪಡೆದಿವೆ. ಈ ಪ್ರದೇಶದ ನಿವಾಸಿಗಳ ಪ್ರಕಾರ ಕುಸಿತಗೊಂಡ ಜನವಸತಿ ಪ್ರದೇಶ ಮರು ನಿರ್ಮಾಣ ಅಸಾಧ್ಯ.

ಹಿಮಾಲಯಕ್ಕಿಂತಲೂ ಪುರಾತನ ಪಶ್ಚಿಮ ಘಟ್ಟ
ಪಶ್ಚಿಮಘಟ್ಟ ಹಿಮಾಲಯಕ್ಕಿಂತಲೂ ಪುರಾತನವಾದುದು. 150 ಮಿಲಿಯ ವರ್ಷದಷ್ಟು ಹಳೆಯದು. ಗೊಂಡ್ವಾನ ಭೂಭಾಗ ಪ್ಯಾರೀಸ್‌ನ ಲಾರೇಶಿಯಾದಿಂದ ಬೇರ್ಪಟ್ಟು, ಹಿಮಾಲಯದ ಆ ಕಡೆಯಲ್ಲಿ ಫ್ರಾಂಜಿಯದಿಂದ ಬೇರ್ಪಟ್ಟಾಗ, ಅದು ಉತ್ತರಕ್ಕೆ, ಸರಿದು 100 ಮಿಲಿಯ ವರ್ಷಗಳ ಹಿಂದೆ ಭೂಭಾಗ ಮೇಲೆ ಬರುವಾಗ ಮೊದಲು ಪಶ್ಚಿಮ ಘಟ್ಟ ಬಂದಿದೆ. ನಂತರ ಅದು ಲಾರೇಶಿಯಾಗೆ ಡಿಕ್ಕಿ ಹೊಡೆದು ಹಿಮಾಲಯ ಉದ್ಭವವಾಯ್ತು ಎಂಬುದು ಭೂ ವಿಜ್ಞಾನಿಗಳ ವಾದ. ಒಂದು ವೇಳೆ ಪಶ್ಚಿಮ ಘಟ್ಟ ಕುಸಿದರೆ ಅರಬ್ಬಿ ಸಮುದ್ರ ಹಾಗೂ ಉತ್ತರದಿಂದ ಬೀಸುವ ಶೀತಗಾಳಿಗೆ ದಕ್ಷಿಣ ಪೂರ್ವದದಲ್ಲಿ ಗಾಳಿ ಪ್ರಮಾಣ ಹೆಚ್ಚಳವಾಗಿ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂಬುದು ವಿಜ್ಞಾನಿಗಳ ವಾದ. ಪಶ್ಚಿಮಘಟ್ಟ ಪ್ರದೇಶ ಕುಸಿಯಲು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ.

Comments are closed.