ಕರ್ನಾಟಕ

ಯೋಜನೆ ಕಡಿತ: ಸರ್ಕಾರಕ್ಕೆ ಕಾಂಗ್ರೆಸ್ ನಾಯಕರ ಎಚ್ಚರಿಕೆ..!

Pinterest LinkedIn Tumblr


ಬೆಂಗಳೂರು: ಅಧಿಕಾರಕ್ಕೆ ಬಂದ ಹುರುಪಿನಲ್ಲಿ ಯಡಿಯೂರಪ್ಪ, ರೈತರಿಗೆ 4 ಸಾವಿರ ರೂಪಾಯಿ ಘೋಷಣೆ ಮಾಡಿದರು. ಆದರೆ, ಈಗ ಹಣಕಾಸು ಹೊಂದಿಸೋದೆ ಕಷ್ಟವಾಗಿದೆ.

ಇದಕ್ಕಾಗಿ ಬಿಎಸ್‌ವೈ ಪರದಾಡ್ತಿದ್ದಾರೆ. ಸಿದ್ದರಾಮಯ್ಯ ಅವರ ಯೋಜನೆಗಳ ಕಡಿತಕ್ಕೆ ಚಿಂತಿಸಿದ್ದಾರೆ. ಆದರೆ, ಇದಕ್ಕೆ ಕಾಂಗ್ರೆಸ್ ಗರಂ ಆಗಿದೆ. ಅದೆಲ್ಲಾ ಆದರೆ, ಸರಿ ಇರಲ್ಲ ಅಂತ ಎಚ್ಚರಿಕೆ ನೀಡಿದೆ.

ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆ ಜಾರಿಗೆ ತಂದಿದೆ. ಅರ್ಹ ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂಪಾಯಿ ಜಮೆಯಾಗಲಿದೆ. ರಾಜ್ಯ ಸರ್ಕಾರ ಕೂಡ ಹೆಚ್ಚುವರಿ 4 ಸಾವಿರ ರೂಪಾಯಿ ಘೋಷಿಸಿದೆ. ಆದರೆ, ಸಿಎಂ ಆಗಿ ಅಧಿಕಾರ ಸ್ಪೀಕರಿಸುತ್ತಿದ್ದಂತೆಯೇ ತರಾತುರಿಯಲ್ಲಿ ಬಿಎಸ್‌ವೈ ಘೋಷಿಸಿದ ಯೋಜನೆಗೆ ಹಣ ಹೊಂದಿಸೋದೇ ಕಷ್ಟವಾಗಿದೆ. ಈ ಬಗ್ಗೆ ಆರ್ಥಿಕ ಇಲಾಖೆ ಕೂಡ ಎಚ್ಚರಿಕೆ ರವಾನಿಸಿದೆ. ಹಣ ಹೊಂದಿಸೋದು ಹೇಗೆಂದು ಬಿಎಸ್​ವೈ ಪೇಚಿಗೆ ಸಿಲುಕಿದ್ದಾರೆ.

ಹೇಗಾದರು ಮಾಡಿ ವಿತ್ತೀಯ ಕೊರತೆ ಸರಿದೂಗಿಸುವಂತೆ ಆರ್ಥಿಕ ಇಲಾಖೆಗೆ ಸೂಚಿಸಿದ್ದು, ಇಲಾಖೆ ಹಲವು ಸಲಹೆ ಮುಂದಿಟ್ಟಿದೆ. ಅದರಂತೆ ಸಿದ್ದರಾಮಯ್ಯ ಜಾರಿಗೆ ಮಾಡಿರೋ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಮೀಸಲಿಟ್ಟಿರುವ ಆವರ್ತನಿಧಿ ಬಳಸಿಕೊಂಡರೆ ಸರಿದೂಗಿಸಬಹುದೆಂಬ ಸಲಹೆ ನೀಡಿದೆ. ಹೀಗಾಗಿ, ಕಾಂಗ್ರೆಸ್​ ಹಾಗೂ ಮೈತ್ರಿ ಸರ್ಕಾರದ ಅವಧಿಯ ಕೆಲವು ಯೋಜನೆ ಕೈಬಿಡಲು ಬಿಜೆಪಿ ಸರ್ಕಾರ ಚಿಂತಿಸಿದೆ ಎಂದು ತಿಳಿದುಬಂದಿದೆ.

ರೈತರಿಗೆ 4 ಸಾವಿರ ರೂಪಾಯಿ ಘೋಷಣೆಯಿಂದಾಗಿ ಸರ್ಕಾರಕ್ಕೆ 2,200 ಕೋಟಿ ಹೊರೆ ಬಿದ್ದಿದೆ. ಇಷ್ಟು ಹಣ ಹೊಂದಿಸೋದು ಕಷ್ಟವಾಗ್ತಿದೆ. ಅನ್ನಭಾಗ್ಯ ಅಕ್ಕಿಯಲ್ಲಿ ಕೇಂದ್ರ ಸರ್ಕಾರ 5 ಕೆಜಿ ನೀಡಿದರೆ, ರಾಜ್ಯ 2 ಕೆಜಿ ಸೇರಿಸಿ ಒಟ್ಟು 7 ಕೆಜಿ ನೀಡುತ್ತಿದೆ. ರಾಜ್ಯದ ಪಾಲಿನ 2 ಕೆಜಿ ಅಕ್ಕಿ, 1 ಕೆಜಿ ತೊಗರಿ ರದ್ದುಪಡಿಸಿದರೆ ವಾರ್ಷಿಕ 500 ಕೋಟಿ ರೂಪಾಯಿ ಉಳಿತಾಯವಾಗಲಿದೆ.

ಹಾಗೆಯೇ, ವಿವಿಧ ಸಮುದಾಯಗಳಿಗೆ ಮೀಸಲಿಟ್ಟ 134 ಕೋಟಿ, ದಾಳಿಂಬೆ ಮತ್ತು ದ್ರಾಕ್ಷಿ ಬೆಳಗಾರರಿಗೆ ಮೀಸಲಿಟ್ಟ 150 ಕೋಟಿ, ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಮೀಸಲಿಟ್ಟ 150 ಕೋಟಿ ರದ್ದು ಗೊಳಿಸಿದರೆ 1,434 ಕೋಟಿ ಉಳಿತಾಯವಾಗಲಿದೆ. ಅಲ್ಲದೆ, ಇಂದಿರಾ ಕ್ಯಾಂಟೀನ್ ಮುಚ್ಚಿದರೆ ಸಾವಿರ ಕೋಟಿ ರೂಪಾಯಿ ಉಳಿಸಬಹುದು ಎಂಬ ಲೆಕ್ಕಾಚಾರ ಆರ್ಥಿಕ ಇಲಾಖೆ ನೀಡಿದೆ. ಹೀಗಾಗಿ, ಸಿದ್ದರಾಮಯ್ಯ ಹಾಗೂ ಮೈತ್ರಿ ಸರ್ಕಾರದ ಕೆಲವು ಯೋಜನೆ ಕೈಬಿಡುವ ಚಿಂತನೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಲಾಗ್ತಿದೆ.

ಆದರೆ, ಬಿಜೆಪಿ ಸರ್ಕಾರದ ಚಿಂತನೆಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಜಾರಿಗೊಳಿಸಿದ್ದ ಹಲವು ಯೋಜನೆ ಕೈಬಿಡೋದು ಸರಿಯಲ್ಲ. ಹಾಗೆ ಮಾಡಿದರೆ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.

Comments are closed.