ಕರಾವಳಿ

ಉಗ್ರ ದಾಳಿ ಶಂಕೆ? : ಮಂಗಳೂರು ಪೊಲೀಸರಿಂದ ನಗರದ ಪ್ರಮುಖ ಸ್ಥಳಗಳಲ್ಲಿ ತೀವ್ರ ಶೋಧ

Pinterest LinkedIn Tumblr

ಮಂಗಳೂರು, ಆಗಸ್ಟ್.17 : ಕರ್ನಾಟಕ ಪೊಲೀಸ್ ಇಲಾಖೆಯು ರಾಜ್ಯಾದ್ಯಂತ ಹೈ ಅಲರ್ಟ್ ಸ್ಥಿತಿ ಘೋಷಣೆ ಮಾಡಿದೆ. ಅದರಂತೆ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವ ಕರಾವಳಿ ಭಾಗದಲ್ಲಿಯೂ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮಂಗಳೂರು ನಗರದ ಆಸ್ಪತ್ರೆ, ಮಾಲ್, ಐಟಿ ಕಂಪೆನಿ ಸೇರಿದಂತೆ ಪ್ರಮುಖ ಸ್ಥಳಗಳು ಹಾಗೂ ಕಟ್ಟಡಗಳಲ್ಲಿ ಭದ್ರತೆಯನ್ನು ಪರಿಶೀಲಿಸಲು ಮಂಗಳೂರು ನಗರ ಪೊಲೀಸರು ಶುಕ್ರವಾರ ದಿಢೀರನೆ ಶೋಧ ಕಾರ್ಯ ನಡೆಸಿದರು.

ಮುಖ್ಯವಾಗಿ ನಗರದಲ್ಲಿರುವ ಮುಡಿಪು ಇನ್ಫೋಸಿಸ್, ಮಂಗಳ ಗಂಗೋತ್ರಿ ಸೂರ್ಯ ಇನ್ಫೋಟೆಕ್, ಕ್ಷೇಮ ಆಸ್ಪತ್ರೆ, ನಿಟ್ಟೆ ಆಸ್ಪತ್ರೆ, ಕಟೀಲು ದೇವಸ್ಥಾನ, ಎಂ.ಎಸ್.ಇ.ಝಡ್., ಬಜ್ಪೆ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ಹಠಾತ್ತನೆ ಪೊಲೀಸ್ ಪಹರೆ ಏರ್ಪಡಿಸಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಬಳಸಿಕೊಂಡು ವ್ಯಾಪಕ ಪ್ರಮಾಣದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದರು.

ಈಗಾಗಲೇ ಮಂಗಳೂರು ಬಂದರು ಪ್ರದೇಶ, ಬಜ್ಪೆ ವಿಮಾನ ನಿಲ್ದಾಣ, ಇನ್ಫೋಸಿಸ್ ಕ್ಯಾಂಪಸ್, ಕೆ.ಎಸ್. ಹೆಗ್ಡೆ ಮೆಡಿಕಲ್ ಆಸ್ಪತ್ರೆ, ಯನಪೋಯಾ ಆಸ್ಪತ್ರೆ, ಸೋಮೇಶ್ವರ ದೇವಸ್ಥಾನ, ಉಳ್ಳಾಲ ಮಸೀದಿ ಸೇರಿದಂತೆ ಕರಾವಳಿ ಭಾಗದ ಪ್ರಮುಖ ಕಟ್ಟಡಗಳು, ಪ್ರಾರ್ಥಾನಾ ಮಂದಿರಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.

ಕಡಲ ತೀರದಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ದೋಣಿ ಅಥವಾ ಇನ್ಯಾವುದೇ ವಸ್ತುಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 100ನ್ನು ಸಂಪರ್ಕಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಮೀನುಗಾರ ಸಮುದಾಯದವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ದೇಶದ ಯಾವುದೇ ಭಾಗದಲ್ಲಿ ಉಗ್ರರ ದಾಳಿ ಸಾಧ್ಯತೆ ಶಂಕೆಯಲ್ಲಿ ಕರಾವಳಿ ಪ್ರದೇಶವಾಗಿರುವ ಕಾರಣ ಇಲ್ಲಿಯೂ ಬಿಗು ತಪಾಸಣೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಹೈ ಅಲಾರ್ಟ್ ಘೋಷಿಸಲಾಗಿದೆ. ಇದೇ ರೀತಿ ಮಂಗಳೂರಿನಲ್ಲಿ ಕಟ್ಟುನಿಟ್ಟಿನ ಭದ್ರತೆಯ ಭಾಗವಾಗಿ ಈ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. “ಮೈ ಬೀಟ್ ಮೈ ಪ್ರೈಡ್” ಅಭಿಯಾನದ ಅಡಿಯಲ್ಲಿ ಈ ತಪಾಸಣೆ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.

Comments are closed.