ಕರ್ನಾಟಕ

ಮನೆಗೆ ಬರದ ಮಕ್ಕಳ ಕುರಿತು ದೂರು ನೀಡಿದ ತಂದೆ: ಮುಂದೇನಾಯ್ತು..?

Pinterest LinkedIn Tumblr


ಚೆನ್ನಾಗಿ ಓದಲಿ ಅಂತ ತಂದೆ ಜೋರು ಮಾಡಿದ್ದಕ್ಕೆ ಇಬ್ಬರು ಮಕ್ಕಳು ಪೋಷಕರಿಗೆ ಶಾಕ್ ಕೊಟ್ಟಿದ್ದಾರೆ. ಮಕ್ಕಳ ಈ ಶಾಕ್ ಗೆ ಕಾಮಾಕ್ಷಿಪಾಳ್ಯ ಪೊಲೀಸರು ಸಹ ತಲೆಕೆಡಿಸಿಕೊಂಡಿದ್ರು. ಕೊನೆಗೆ ಅಪ್ಪ ಮಕ್ಕಳ ಪ್ರಹಸನ ಸುಖಾಂತ್ಯ ಕಂಡಿದೆ.

ಪೋಷಕರಿಗೆ ತಮ್ಮ ಮಕ್ಕಳು ಓದಿ ದೊಡ್ಡವರಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ ಎಂಬ ಆಸೆ ಇರುತ್ತೆ. ಈ ಆಸೆ ಅತಿಯಾದರೆ ಮಕ್ಕಳು ಕಂಗಾಲಾಗ್ತಾರೆ. ಸುಂಕದಕಟ್ಟೆಯ ಸುಬ್ರಹ್ಮಣಿ ಮತ್ತು ಕಾವ್ಯ ದಂಪತಿಗಳ ಇಬ್ಬರು ಗಂಡು ಮಕ್ಕಳಾದ ರಮೇಶ್(8) ಮತ್ತು ತರುಣ್(5) ಇಂದು ಬೆಳಗ್ಗೆ ಶಾಲೆಗೆ ಹೋಗ್ತೇವೆ ಅಂತ ಹೋದವರು ನಾಪತ್ತೆಯಾಗಿದ್ದರು.

ಸುಂಕದಕಟ್ಟೆ ಸರ್ಕಾರಿ ಶಾಲೆಯ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಸುಬ್ರಹ್ಮಣಿ ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದ್ದರು. ತಲೆ ಕೆಡಿಸಿಕೊಂಡ ಪೊಲೀಸರು ಇಬ್ಬರು ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ದೂರು ಪಡೆದ ಎರಡೇ ಗಂಟೆಗಳಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ತಂದೆ ಸುಬ್ರಹ್ಮಣಿ ತಮ್ಮ ದೊಡ್ಮಗ ರಮೇಶ್‌ನನ್ನು ಶಾಲೆಗೆ ಹೋಗುವಂತೆ ಹೊಡೆಯುತ್ತಿದ್ದರು. ಶಾಲೆಗೆ ಹೋಗಲು ಇಷ್ಟವಿಲ್ಲದ ರಮೇಶ್ ತಮ್ಮ ತರುಣ್ ಜೊತೆ ಸೇರಿ ಹೆಗ್ಗನಹಳ್ಳಿಯ ಅಜ್ಜಿ ಮನೆಗೆ ತೆರಳಿದ್ದರು. ಅಪ್ಪನ ಅತಿಯಾದ ಶಿಸ್ತು ಮಕ್ಕಳ ಈ ನಡೆಗೆ ಕಾರಣ ಎಂಬುದು ಪತ್ತೆಯಾಗಿದೆ. ಹೆಗ್ಗನಹಳ್ಳಿಯ ಅಜ್ಜಿ ಮನೆಯಲ್ಲಿದ್ದ ಇಬ್ಬರು ಮಕ್ಕಳು ಈಗ ಪೋಷಕರ ಮಡಿಲು ಸೇರಿವೆ.

ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದು ಈ ಪ್ರಕರಣದಿಂದ ಮತ್ತೆ ಸಾಬೀತಾಗಿದೆ. ಪ್ರೀತಿ ಮತ್ತು ಶಿಸ್ತು ಅತಿಯಾದರೆ ಮಕ್ಕಳು ದುಡುಕಿ ಅನಾಹುತಗಳನ್ನು ಮಾಡಿಕೊಳ್ಳುವುದು ಹೆಚ್ಚು. ಆದ್ದರಿಂದ ಎಲ್ಲಾ ಪೋಷಕರು ಮಕ್ಕಳನ್ನ ಸರಿಯಾಗಿ ತಿಳಿಹೇಳಿ ಬೆಳೆಸಿ. ಇಲ್ಲವಾದರೆ ರಮೇಶ್ ಮತ್ತು ತರುಣ್ ರೀತಿಯಲ್ಲಿ ಏನಾದರು ಹೆಚ್ಚುಕಡಿಮೆ ಮಾಡಿಕೊಂಡಾರು.

Comments are closed.