ಕರ್ನಾಟಕ

ಫೋನ್ ಕದ್ದಾಲಿಕೆ ಪ್ರಕರಣ; ಕೊನೆಗೂ ಮೌನ ಮುರಿದ ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು (ಆಗಸ್ಟ್.15); ಕಳೆದ ಕೆಲ ದಿನಗಳಿಂದ ಫೋನ್ ಕದ್ದಾಲಿಕೆ ವಿಚಾರ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅತೃಪ್ತ ಶಾಸಕರು ಸೇರಿದಂತೆ ಮೂರೂ ಪಕ್ಷದ ಪ್ರಮುಖ ನಾಯಕರು ಹಾಗೂ ಅಧಿಕಾರಿಗಳ ಪೋನ್ ಟ್ಯಾಪಿಂಗ್ ಮಾಡಿದ್ದರು ಎಂಬ ಆರೋಪ ಇದೀಗ ರಾಜ್ಯದಲ್ಲಿ ದೊಡ್ಡ ಮಟ್ಟದ ರಾಜಕೀಯ ಆಕ್ರೋಶಕ್ಕೆ ತುತ್ತಾಗಿದೆ.

ಈವರೆಗೆ ಈ ಕುರಿತು ರಾಜ್ಯದ ಎಲ್ಲಾ ಪ್ರಮುಖ ನಾಯಕರು ಪ್ರತಿಕ್ರಿಯೆ ನೀಡಿದ್ದರು, ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಮಾತ್ರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಇಂದು ಟ್ವೀಟ್ ಮೂಲಕ ಈ ಕುರಿತ ವಿಚಾರ ಪ್ರಸ್ತಾಪಿಸಿರುವ ಸಿದ್ದರಾಮಯ್ಯ, “ಫೋನ್ ಕದ್ದಾಲಿಕೆ ಎಂಬುದು ಗಂಭೀರ ಆರೋಪ. ಹೀಗಾಗಿ ಈ ಕುರಿತು ಸೂಕ್ತ ತನಿಖೆಯಾಗಲಿ, ತಪ್ಪು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುಬೇಕು” ಎಂದು ಆಗ್ರಹಿಸಿದ್ದಾರೆ.

ಈ ಪ್ರಕಣದ ಕುರಿತು ಈಗಾಗಲೇ ಬಿ.ಎಸ್. ಯಡಿಯೂರಪ್ಪ, ಈಶ್ವರಪ್ಪ, ಆರ್​. ಅಶೋಕ್, ಶ್ರಿರಾಮುಲು, ಸದಾನಂದಗೌಡ, ಅರವಿಂದ ಲಿಂಬಾವಳಿ, ಎಂಟಿಬಿ ನಾಗರಾಜ್ ಸೇರಿದಂತೆ ಪ್ರಮುಖ ನಾಯಕರು ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಹಾಗೂ ಸಮ್ಮಿಶ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಈ ಕುರಿತು ಬುಧವಾರ ಟ್ವೀಟ್ ಮಾಡುವ ಮೂಲಕ ವಿರೋಧ ಪಕ್ಷಗಳ ಟೀಕೆಗಳಿಗೆ ಸ್ಪಷ್ಟತೆ ನೀಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, “ಮುಖ್ಯಮಂತ್ರಿ ಅಧಿಕಾರ ಶಾಶ್ವತವಲ್ಲ ಎಂದು ಪದೇ ಪದೇ ಹೇಳುತ್ತಿದ್ದವನು ನಾನು, ಈ ಕುರ್ಚಿಗಾಗಿ ಟೆಲಿಪೋನ್ ಕದ್ದಾಲಿಕೆ ಮಾಡಿ ಅಧಿಕಾರ ಉಳಿಸಿಕೊಳ್ಳುವ ಅವಶ್ಯಕತೆ ನನಗಿರಲಿಲ್ಲ. ಈ ವಿಚಾರದಲ್ಲಿ ಕೆಲವರು ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು” ಎಂದು ತಿಳಿಸಿದ್ದರು.

ಇದೀಗ ಈ ಪ್ರಕರಣ ದಿನೇ ದಿನೇ ತನ್ನ ಸ್ವರೂಪವನ್ನು ಬದಲಿಸುತ್ತಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಕೊರಳಿಗೆ ಸುತ್ತಿಕೊಂಡಿರುವ ಈ ಪ್ರಕರಣದ ಕುರಿತು ರಾಜ್ಯ ಬಿಜೆಪಿ ಸರ್ಕಾರ ಹಾಗೂ ಸಿಎಂ ಯಡಿಯೂರಪ್ಪ ಯಾವ ಕ್ರಮ ತೆಗದುಕೊಳ್ಳಲಿದ್ದಾರೆ ಎಂಬ ವಿಷಯದ ಕುರಿತು ಇಡೀ ರಾಜ್ಯದ ರಾಜಕೀಯ ನಾಯಕರು ಕುತೂಹಲದಿಂದ ಎದುರುನೋಡುತ್ತಿದ್ದಾರೆ. ಈ ನಡುವೆ ಈ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು ಎಂಬ ಕೂಗು ಸಹ ಕೇಳಿಬರುತ್ತಿದೆ.

Comments are closed.