ಕರ್ನಾಟಕ

ಭಾರತದ ಸ್ವಾತಂತ್ರ್ಯ ಚಳವಳಿಯ ಕಥನದ ಹೊಂದಿದ ಈಸೂರು ಗ್ರಾಮ

Pinterest LinkedIn Tumblr


ಭಾರತದ ಸ್ವಾತಂತ್ರ್ಯ ಚಳವಳಿಯ ಕಥನವು ರೋಮಾಂಚನವನ್ನುಂಟು ಮಾಡುವಂತಹ ಚರಿತ್ರೆ. ಆಳರಸರ ದರ್ಪದ ಮತ್ತು ಶೋಷಣೆಯ ವಿರುದ್ಧ ಜನವಾದಿ ಹೋರಾಟವು ಸ್ವಾತಂತ್ರದ ಹಂಬಲಕ್ಕೆ ನೀರೆರದ ಕುತೂಹಲಕಾರಿ ಓದು. ಬಂಡವಾಳಶಾಹಿ ಬ್ರಿಟಿಷ್ ಸರ್ಕಾರವು ಭಾರತದಲ್ಲಿ ಪ್ರಖರವಾಗಿ ಮೂಡುತ್ತಿದ್ದ ರಾಷ್ಟ್ರೀಯತೆಯ ಪರಿಕಲ್ಪನೆಗಳನ್ನು ಅಷ್ಟಾಗಿ ಗಮನಹರಿಸಿದಂತೆ ಕಾಣಲಿಲ್ಲ. ರೈತರು ಮತ್ತು ಕಾರ್ಮಿಕರು, ಓದುಗವರ್ಗವು ತನ್ನೊಳಗೆ ಭಾರತೀಯತೆಯ ಪರಿಕಲ್ಪನೆಗಳನ್ನು ಮೈಗೂಡಿಸಿಕೊಳ್ಳುತ್ತಿದ್ದಾಗ ಇಂಗ್ಲೆಂಡ್ ಸರ್ಕಾರವು ರೈತರ ಮೇಲೆ ದೌರ್ಜನ್ಯವನ್ನು, ಜನಸಾಮಾನ್ಯರ ಮೇಲೆ ಶಸ್ತ್ರಾಧರಿತ ದಮನ ನೀತಿಯನ್ನು ಅನುಸರಿಸತೊಡಗಿತು.

1915 ರಲ್ಲಿ ಭಾರತಕ್ಕೆ ಕಾಲಿಟ್ಟ ಗಾಂಧಿಜಿಗೆ ಇಂತಹದ್ದೊಂದು ಶಕ್ತಿಯಿಂದಾಗಲಿ ಅವರು ಮಹಾತ್ಮರಾಗುತ್ತಾರೆಂದಾಗಲಿ, ಅವರು ರಾಷ್ಟ್ರವನ್ನು ಮುನ್ನೆಡಸುತ್ತಾರೆಂದಾಗಲಿ ಆಳರಸರು ಖಂಡಿತಾ ಊಹಿಸಿರಲಿಕ್ಕಿಲ್ಲ. ಗಾಂಧೀಜಿ ಹಂತ ಹಂತವಾಗಿ ಚಳವಳಿಗಳನ್ನು ಕಟ್ಟಿದರು. ಅದರಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿಯೂ ಒಂದು. ಶಾಂತಿ ಮಂತ್ರ, ಅಸಹಕಾರ ಚಳವಳಿಗಳು, ಅ, ದೇಸಿ ವಸ್ತುಗಳ ಬಳಕೆ ಇವೆಲ್ಲವೂ ಗಾಂಧೀಜಿಯನ್ನು ಮತ್ತು ಅವರ ಹೋರಾಟವನ್ನು ಜನತೆಯ ಅಂತರಾಳಕ್ಕೆ ಕರೆದುಕೊಂಡು ಹೋದವಲ್ಲದೆ, ವಸಾಹತುವಿರೋಧಿ ನೆಲೆಗಳನ್ನು ಗಟ್ಟಿಗೊಳಿಸಿದ್ದವು.

1942ರಲ್ಲಿ ಗಾಂಧಿಜೀ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದರು. ಅವರ ಈ ಧ್ವನಿಯನ್ನು ದೇಶದ ಪ್ರತಿಯೊಂದು ಹಳ್ಳಿಗಳು ಪ್ರತಿಧ್ವನಿಸತೊಡಗಿತ್ತು. ಗಾಂಧಿಯವರ ಆಶಯದಂತೆ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಪ್ರತಿ ಜನರ ಬಾಯಲ್ಲಿ ಕೇಳಿಬರುತ್ತಿತ್ತು.

ಮೈಸೂರು ಸಂಸ್ಥಾನದ ಸಾಮಾನ್ಯ ಹಳ್ಳಿಯಾಗಿದ್ದ ಈಸೂರು ತನ್ನ ಸ್ವಾಭಿಮಾನಿ ಹೋರಾಟದ ಹೆಗ್ಗರತಾಗಿದೆ. ಈ ಮೂಲಕ ಈ ಪುಟ್ಟ ಗ್ರಾಮ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಮುನ್ನೆಲೆಗೆ ಬಂದಿತು.

1942 ಭಾರತ ಬಿಟ್ಟು ತೊಲಗಿ ಚಳವಳಿಯ ಪ್ರೇರಣೆಯಿಂದ ಈಸೂರು ಸ್ವಾತಂತ್ರವನ್ನು ಘೋಷಿಸಿಕೊಂಡಿತು. ತನ್ನ ಊರಿಗೆ ಸ್ವತಂತ್ರ ಹಳ್ಳಿ ಎಂದು ಹೆಸರು ಬದಲಾಯಿಸಿಕೊಂಡರು. ಅಷ್ಟೆ ಅಲ್ಲದೆ ಊರಿನ ಎಲ್ಲ ಜನತೆಯು ಚಳವಳಿಗೆ ಧುಮುಕಿದರು. ಗಾಂಧಿಜೀಯವರ ಕರೆಯೇ ಅವರ ಪ್ರೇರಣೆಯಾದರೂ ನಿಜವಾದರೂ ಅದು ಉಗ್ರ ಸ್ವರೂಪದ್ದಾಗಿತ್ತು.

ಈಸೂರು ದಂಗೆ

ಸೆಪ್ಟೆಂಬರ್ 28 ರಂದು ಈಸೂರಿನ ವೀರಭದ್ರ ದೇವಸ್ಥಾನದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ಸರ್ಕಾರದ ಅಧಿಕಾರಿಗಳಾದ ಶಾನುಭೋಗರು, ಪಟೇಲರಿಂದ ಕಡತಗಳನ್ನು ಕಸಿದುಕೊಂಡರು. ಅವರನ್ನು ದಿನವಿಡೀ ಒಂಟಿಕಾಲಿನಲ್ಲಿ ನಿಲ್ಲಿಸಿ ವಸಾಹತುಶಾಹಿ ಸರ್ಕಾರವನ್ನು ಬೇಜವಬ್ದಾರಿ ಸರ್ಕಾರ ಎಂದು ಘೋಷಣೆ ಮಾಡಿದರಲ್ಲದೆ ಹೊಸ ಜವಾಬ್ದಾರಿ ಸರ್ಕಾರವನ್ನು ತಮ್ಮೊಳಗೆ ರಚಿಸಿಕೊಂಡರು. ಹತ್ತು ವರ್ಷದ ಜಯಪ್ಪ ಎನ್ನುವವರನ್ನು ಅಮಲ್ದಾರರನ್ನಾಗಿ, ಹನ್ನೆರಡು ವರ್ಷದ ಮಲ್ಲಪ್ಪನವರು ಸರ್ವಾಧಿಕಾರಿಯಾದರು. ಎಲ್ಲರು ಖಾದಿ ಟೋಪಿ ಧರಿಸತೊಡಗಿದರು.

ಕಂದಾಯವನ್ನು ಕೊಡಲು ನಿರಾಕರಿಸಿದ ಜನರು ಹೋರಾಟಕ್ಕಿಳಿದ ಸುದ್ಧಿ ತಿಳಿದ ಮೈಸೂರು ಸರ್ಕಾರ ಅಮಲ್ದಾರ್ ಚನ್ನಕೃಷ್ಣಪ್ಪ ಮತ್ತು ಸಬ್ ಇನ್ಸೆಪೆಕ್ಟರ್ ಕೆಂಚೆಗೌಡ ವರನ್ನು ಅಲ್ಲಿಗೆ ಕಳಿಸಿತು. ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳಿಗೆ ಖಾದಿ ಟೋಪಿ ಕೊಟ್ಟು ಧರಿಸಲು ಹಳ್ಳಿಯ ಜನರು ತಾಕಿತು ಮಾಡಿದರು. ಆದರೆ, ಹಾರಿಸಿದ ಸ್ವಾತಂತ್ರ್ಯದ ಧ್ವಜಕ್ಕೆ ಅಧಿಕಾರಿಗಳು ಅಪಮಾನ ಮಾಡಿದರು. ಇದರಿಂದ ಜನರ ಕೆಂಗಣ್ಣಿಗೆ ಗುರಿಯಾದ ಅವರು ಜನರಿಂದ ಹಲ್ಲೆಗೊಳಗಾದರು. ಉದ್ರಿಕ್ತ ಜನರ ಆಕ್ರೋಷಕ್ಕೆ ಬಲಿಯಾದ ಅಧಿಕಾರಿಗಳಿಬ್ಬರು ಸಾವಿಗೀಡಾದರು.

ಇಡೀ ಘಟನೆ ಗಂಭೀರವಾಗಿ ಸ್ವೀಕರಿಸಿದ ಸರ್ಕಾರ ಗ್ರಾಮಕ್ಕೆ ಅರೆ ಮಿಲಟರಿ ಪಡೆಯನ್ನು ಕಳಿಸಿ ಘಟನೆಯನ್ನು ಹತೋಟಿಗೆ ತರಲು ಪ್ರಯತ್ನಿಸಿತು. ಮಿಲಟರಿ ಪಡೆ ಅತ್ಯಂತ ಹೇಯವಾಗಿ ವರ್ತಿಸಿತಲ್ಲದೆ ಗ್ರಾಮವನ್ನು ಲೂಟಿ ಮಾಡಿದರು. 24 ಜನರನ್ನು ಬಂಧಿಸಿ ಶಿವಮೊಗ್ಗ ಜೈಲಿನಲ್ಲಿ ಇಟ್ಟರು. ಅದರಲ್ಲಿ ಹನ್ನೊಂದು ಜನರಿಗೆ ಮರಣದಂಡನೆಯನ್ನು ಉಳಿದ ಹದಿಮೂರು ಜನರಿಗೆ ಜೀವಾವಧಿ ಶಿಕ್ಷೆಗೆ ಗುರಿಯಾದರು.

ಇದರಲ್ಲಿ ಪಾರ್ವತಮ್ಮ, ಸಿದ್ಧಮ್ಮ, ಹಾಲಮ್ಮ ಎಂಬ ಮಹಿಳೆಯರೂ ಇದ್ದರೂ ಎಂಬುದು ಗಮನಾರ್ಹ. ಹೈಕೋರ್ಟ ಈ ಪ್ರಕರಣವನ್ನು ಪುನರ್ ಪರಿಶೀಲಿಸಿ 1943 ಜನವರಿ9 ರಂದು ತೀರ್ಪು ನೀಡಿತು. ಅದರಲ್ಲಿ ಐವರಿಗೆ ಮರಣ ದಂಡನೆಯನ್ನು ವಿಧಿಸಿತು. ಗುರಪ್ಪ. ಮಲ್ಲಪ್ಪ, ಸೂರ್ಯನಾರಾಯಣಾಚಾರ್, ಹಾಲಪ್ಪ, ಶಂಕರಪ್ಪ ಇವರನ್ನು ಅಪರಾಧಿಗಳೆಮದು ಘೋಷಿಸಿತು. ಮಾರ್ಚ್ 8,9,10 ರಂದು ಅವರನ್ನು ಗಲ್ಲಿಗೇರಿಸಲಾಯಿತು. ಉಳಿದವರಿಗೆ ಜೀವಾವಧಿ ಶಿಕ್ಷೆಗೆ ಗುರಿಯಾದರು.

ಏಸೂರು ಕೊಟ್ಟರು ಈಸೂರು ಕೊಡೆವು ಎಂದ ಹೋರಾಟಕ್ಕೆ ನಿಂತ ಶಿಕಾರಿಪುರದ ಈ ಪುಟ್ಟ ಗ್ರಾಮ ಈಗ ಸ್ವಾತಂತ್ರ್ಯ ಹೋರಾಟದ ಪುಟದಲ್ಲಿ ಜನರಿಗೆ ಪ್ರೇರಣೆಯನ್ನು ನೀಡಿತು. ಅಲ್ಲಿನ ಗ್ರಾಮಸ್ಥರಲ್ಲಿ ಹೋರಾಟದ ಕಿಚ್ಚು ಹಚ್ಚಿಸಿರುವ ಈ ಗ್ರಾಮ ನಮ್ಮ ದೇಶದ ಹೆಮ್ಮೆ ಕೂಡ ಆಗಿದೆ.

Comments are closed.