ಭೋಪಾಲ್(ಆ.15): ಇಂದು ದೇಶದಾದ್ಯಂತ 73ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ದೇಶದಲ್ಲಿ 5 ದಿನಗಳ ಮೊದಲೇ ಈ ಸಂಭ್ರಮವನ್ನು ಆಚರಿಸಿದ ನಗರವೂ ಇದೆ. ಮೂರು ದಶಕಗಳಿಂದ ನಡೆದು ಬರುತ್ತಿರುವ ಪರಂಪರೆಯನ್ನು ಮುಂದುವರೆಸಿಕೊಂಡು ಮಧ್ಯಪ್ರದೇಶದ ಮಂದಸೌರ್ ನಗರದ ಪ್ರಸಿದ್ಧ ಪಶುಪತಿನಾಥ ದೇವಸ್ಥಾನದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಗಸ್ಟ್ 10 ರಂದೇ ಆಚರಿಸಲಾಗುತ್ತದೆ. ವಾಸ್ತವವಾಗಿ, ಇಂಧೋರ್ನಿಂದ 250 ಕಿ. ಮೀ ದೂರದಲ್ಲಿರುವ ಮಂದಸೌರ್ನ ಶಿವನಾ ನದಿ ಕಿನಾರೆಯಲ್ಲಿರುವ ಈ ದೇವಸ್ಥಾನದಲ್ಲಿ ಸ್ವಾತಂತ್ರ್ಯೋತ್ಸವವನ್ನು ಹಿಂದೂ ಪಂಚಾಂಗದಂತೆ ಆಚರಿಸಲಾಗುತ್ತದೆ.
ಪಶುಪತಿನಾಥ ದೇವಸ್ಥಾನದ ಪುರೋಹಿತ ಹಾಗೂ ಆಡಳಿತ ಸಂಸ್ಥೆಯ ಅಧ್ಯಕ್ಷ ಉಮೆಶ್ ಜೋಷಿ ಈ ಕುರಿತಾಗಿ ಮಾತನಾಡಿದರು. 1947 ರ ಆಗಸ್ಟ್ 15 ರಂದು ಬ್ರಿಟಿಷ್ ದಾಸ್ಯದಿಂದ ಭಾರತ ಮುಕ್ತವಾದಾಗ, ಹಿಂದೂ ಪಂಚಾಂಗದ ಅನ್ವಯ ಶ್ರಾವಣ ಮಾಸದ ಕೃಷ್ಣಾ ಪಕ್ಷದ ಚತುರ್ದಶಿಯಾಗಿತ್ತು. ಹೀಗಾಗಿ ಶಿವ ಮಂದಿರದಲ್ಲಿ ಪ್ರತಿ ವರ್ಷ ಇದೇ ತಿಥಿಯನ್ವಯ ಪೂಜೆ ಮಾಡಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ ಎಂದಿದ್ದಾರೆ.
ಮಧ್ಯಪ್ರದೇಶದ ಮಂದ್ಸೌರ್ನ ಶಿವನಾ ನದಿ ಕಿನಾರೆಯಲ್ಲಿರುವ ಪಶುಪತಿನಾಥ ದೇವಸ್ಣಾನ ಫೋಟೋ ಕೃಪೆ: ಸುರೆಶ್ ರಾಥೋಡ್(Facebook
ಅಲ್ಲದೇ ಈ ಬಾರಿ ಇದು(ಶ್ರೌವಣ ಕೃಷ್ಣ ಚತುರ್ದಶಿ) ಆಗಸ್ಟ್ 10ಕ್ಕೆ ಬಂದಿದೆ. ಹೀಗಾಗಿ ನಾವು ನಮ್ಮ ಪರಂಪರೆಯಂತೆ ಅಂದು ಪಶುಪತಿನಾಥ ದೇವಸ್ಥಾನದಲ್ಲಿ ಭಗವಂತ ಶಿವನಿಗೆ ವಿಶೇಷ ಪೂಜೆ ಮಾಡಿದೆವು. ಈ ವೇಳೆ ಗರಿಕೆ ಹುಲ್ಲಿನ ನೀರನ್ನು ಅಷ್ಠಮುಖಿ ಶಿವಲಿಂಗಕ್ಕೆ ಅಭಿಷೇಕ ಮಾಡಿ ದೇಶದ ಸಮೃದ್ಧಿಗಾಗಿ ಪ್ರಾರ್ಥಿಸಿದೆವು. ಈ ಪರಂಪರೆ 1987 ರಿಂದಲೇ ಆಚರಣೆಯಲ್ಲಿದೆ ಎಂದೂ ಉಮೇಶ್ ಜೋಷಿ ತಿಳಿಸಿದ್ದಾರೆ.
Comments are closed.