ರಾಷ್ಟ್ರೀಯ

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಿಗೆ ನನ್ನ ಸಲಾಂ; ಮೋದಿ ಭಾಷಣ

Pinterest LinkedIn Tumblr


ನವದೆಹಲಿ (ಆ.15): 73ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಈ ವೇಳೆ ದೇಶ ಉದ್ದೇಶಿಸಿ ಅವರು ಮಾತನಾಡಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪ್ರತಿಯೊಬ್ಬರಿಗೂ ನನ್ನ ಸಲಾಂ ಎಂದಿದ್ದಾರೆ.

“ದೇಶದ ಜನರಿಗೆ ಸ್ವಾತಂತ್ರೋತ್ಸವದ ದಿನದ ಹಾಗೂ ರಕ್ಷಾಬಂಧನ ಶುಭಾಶಯ. ಕನಸನ್ನು ಸಾಕಾರ ಮಾಡುವವರಿಗೆ ಶುಭಾಶಯ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪ್ರತಿಯೊಬ್ಬರಿಗೂ ನನ್ನ ಸಲಾಂ . ಬಲಿದಾನ ಮಾಡಿದವರಿಗೆ, ತ್ಯಾಗಿಗಳಿಗೆ, ತಪಸ್ವಿಗಳಿಗೆ ನನ್ನ ನಮನ. ಈ ದೇಶದ ಉನ್ನತಿಗಾಗಿ ಹಿಂದೆ ಹಲವರ ತ್ಯಾಗ, ಬಲಿದಾನಗಳಿವೆ.ಇಂದು ನಾವು ಸ್ವಾತಂತ್ರದ ಪವಿತ್ರ ದಿನವನ್ನು ಆಚರಿಸುತ್ತೇದ್ದೇವೆ. ಇಂದು ಭಯೋತ್ಪಾದನೆಯ ಸಂಪೂರ್ಣ ನಿರ್ಮೂಲನೆ ಪಣ ತೊಡಬೇಕಿದೆ,” ಎಂದು ಮೋದಿ ಹೇಳಿದರು.

ದೇಶದಲ್ಲಿ ಉಂಟಾದ ಅತಿವೃಷ್ಟಿಯನ್ನು ಮೋದಿ ನೆನೆದರು. “ದೇಶದ ಅನೇಕ ರಾಜ್ಯಗಳಲ್ಲಿ ಅತಿವೃಷ್ಟಿ ಆಗಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಎನ್​ಡಿಆರ್​ಎಫ್​ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಭವಿಷ್ಯದ ಜಲ ಸಂಕಟ ನಿರ್ಮೂಲನೆ ಆಗಬೇಕಿದೆ. ಜಲಶಕ್ತಿ ವೃದ್ಧಿಗೆ ಪ್ರತಿಯೊಬ್ಬ ಪ್ರಜೆ ಶ್ರಮಿಸಬೇಕು,” ಎಂದು ಮೋದಿ ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತ್ರಿವಳಿ ತಲಾಕ್ ಹಾಗೂ ಕಲಂ 370ಅನ್ನು​ ರದ್ದು ಮಾಡಿದೆ. ಈ ವಿಚಾರವನ್ನು ಮೋದಿ ಉಲ್ಲೇಖ ಮಾಡಿದರು. “ಸಂವಿಧಾನದ 370 ಹಾಗೂ 35(ಎ) ರದ್ದಾಗಿದೆ. ಸರ್ದಾರ್ ಪಟೇಲ್ ಕನಸು ನನಸು ಮಾಡಿದ್ದೇವೆ. ತ್ರಿವಳಿ ತಲಾಖ್ ನಿಷೇಧದ ಮೂಲಕ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಿದ್ದೇವೆ. ಎನ್‌ಐಎ, ಯುಎಪಿಎ ಕಾಯ್ದೆಗಳನ್ನು ತಿದ್ದುಪಡಿ ಮಾಡಿದ್ದೇವೆ. ದೇಶದ ರಕ್ಷಣೆಗೆ ಇನ್ನಷ್ಟು ಬಲ ನೀಡಿದ್ದೇವೆ,” ಎಂದು ಮೋದಿ ತಮ್ಮ ಸಾಧನೆಯನ್ನು ನೆನದರು.

ಮತ್ತೊಮ್ಮೆ ಎನ್​ಡಿಎ ಸರ್ಕಾರವನ್ನು ಆಯ್ಕೆ ಮಾಡಿದ್ದಕ್ಕೆ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. “2014-19ರವರೆಗೆ ನಿಮ್ಮ ಸೇವೆ ಮಾಡಲು ಅವಕಾಶ ನೀಡಿದಿರಿ. ಆದಿವಾಸಿಗಳು, ಶೋಷಿತರನ್ನು ಮುನ್ನೆಲೆಗೆ ತರಲು ಶ್ರಮಿಸಿದ್ದೇವೆ. ಅವಶ್ಯಕತೆಗಳನ್ನು ಪೂರೈಸುವ ಅನಿವಾರ್ಯತೆ ಇತ್ತು. ನಿಮ್ಮ ಕನಸು ಸಾಕಾರಗೊಳಿಸುವ ಸಮಯ ಬಂದಿದೆ. 5 ವರ್ಷಗಳಲ್ಲಿ ದೇಶದ ಚಿತ್ರಣ ಬದಲಾಗುತ್ತಿದೆ. ದೇಶದ ಜನರ ನಿರಾಸೆ ಆಸೆಯಾಗಿ ಬದಲಾಗಿದೆ. ಪ್ರತಿ ಕ್ಷಣ ಅವರಿಗೋಸ್ಕರ ಶ್ರಮಿಸಿದ್ದೇವೆ,” ಎಂದು ಮೋದಿ ನುಡಿದರು.

ಕಿಸಾನ್ ಸಮ್ಮಾನ್ ಯೋಜನೆ:

ಕೇಂದ್ರ ಸರ್ಕಾರ ರೈತರಿಗೋಸ್ಕರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಬಗ್ಗೆ ಮೋದಿ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. “ನಾವು ಜಾರಿಗೆ ತಂದ ಕಿಸಾನ್ ಸಮ್ಮಾನ್ ರೈತರಿಗೆ ತಲುಪಿದೆ. ರೈತರ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಆಗುತ್ತಿದೆ. ಮುಂದಿನ 5 ವರ್ಷಗಳಲ್ಲಿ ಸಮೃದ್ಧ ಭಾರತ ನಿರ್ಮಾಣವಾಗಲಿದೆ. ಭ್ರೂಣ ಹತ್ಯೆ ತಡೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ದೇಶದ ಜನರಲ್ಲಿ ಹೊಸ ವಿಶ್ವಾಸ ಮೂಡಿದೆ,” ಎಂದರು ಅವರು.

ಕಲಂ 370 ರದ್ದು ಮಾಡಿದ್ದೇವೆ:

“ಸಂವಿಧಾನದ ಕಲಂ 370 ಹಾಗೂ 35(ಎ) ರದ್ದಾಗಿದೆ. ಸರ್ದಾರ್ ಪಟೇಲ್ ಕನಸು ನನಸು ಮಾಡಿದ್ದೇವೆ. ಒಂದು ದೇಶ ಒಂದೇ ತಿರಂಗ ಕಲ್ಪನೆ ಸಾಕಾರ. 70 ವರ್ಷದಲ್ಲಿ ಬಗೆಹರಿಸಲಾಗದ ಸಮಸ್ಯೆ ಬಗೆ ಹರಿಸಿದ್ದೇವೆ. ಪ್ರತಿ ಸಮಸ್ಯೆಯನ್ನು ಬುಡದಿಂದ ಸರಿಪಡಿಸಲು ಪ್ರಯತ್ನ ಮಾಡುತ್ತಿದ್ದೇವೆ. ಮುಸ್ಲಿಂ ಮಹಿಳೆಯರ ಮೇಲೆ ತ್ರಿವಳಿ ತಲಾಕ್ ತೂಗುಗತ್ತಿ ಇತ್ತು. ಆ ಮಹಿಳೆಯರು ಆತಂಕದಲ್ಲೇ ಜೀವನ ಸಾಗಿಸುತ್ತಿದ್ದರು. ಇದು ಮುಸ್ಲಿಂ ಮಹಿಳೆಯರನ್ನು ಅಸಹಾಯಕರನ್ನಾಗಿಸಿತ್ತು. ತ್ರಿವಳಿ ತಲಾಕ್​ ರದ್ದು ಮಾಡುವ ಮೂಲಕ ಅವರ ಕಷ್ಟ ದೂರ ಮಾಡುವ ಪ್ರಯತ್ನ ಮಾಡಿದ್ದೇವೆ,” ಎಂದು ಮೋದಿ ತ್ರಿವಳಿ ತಲಾಕ್​ ರದ್ದು ಮಾಡಿದ ಕ್ರಮವನ್ನು ಸಮರ್ಥಿಸಿಕೊಂಡರು.

“ದೇಶದ ಏಕೀಕರಣಕ್ಕೆ ಎಲ್ಲರ ಶ್ರಮ ಇದೆ. ಒಂದು ದೇಶ ಒಂದೇ ಸಂವಿಧಾನ ಎನ್ನುವ ಕಲ್ಪನೆ 70 ವರ್ಷಗಳ ಬಳಿಕ ಇದು ಸಾಕಾರ ಆಗಿದೆ. ಇದನ್ನು ಸಾಕಾರಗೊಳಿಸಿದ ಹೆಮ್ಮೆ ನಮಗಿದೆ. ಒಂದು ದೇಶ ಒಂದೇ ಚುನಾವಣೆಯನ್ನು ಜಾರಿಗೊಳಿಸಬೇಕಿದೆ. ಒಂದೇ ಭಾರತ, ಶ್ರೇಷ್ಠ ಭಾರತ,” ಎಂದು ಪ್ರಧಾನಿ ಹೆಮ್ಮೆ ವ್ಯಕ್ತಪಡಿಸಿದರು.

ಬಡತನ ನಿರ್ಮೂಲನೆಗೆ ಪಣ ತೊಡಲಿದ್ದೇವೆ ಎಂದ ಮೋದಿ, “ಬಡತನ ನಿರ್ಮೂಲನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಬಡತನಕ್ಕೆ ಮುಕ್ತಿಹಾಡುವ ಸಾಮರ್ಥ್ಯ ಇದೆ. ಈ ದಿನಗಳು ಬಹಳ ದೂರ ಇಲ್ಲ. ಇದಕ್ಕಾಗಿ ಹಗಲಿರುಳು ಶ್ರಮಿಸಲು ನಾನು ಸಿದ್ಧ,” ಎಂದರು ಮೋದಿ.

ಜಲ್ ಜೀವನ್ ಮಿಷನ್‌ಗಾಗಿ 3.5 ಲಕ್ಷ ಕೋಟಿ:

ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಮೋದಿ ಹೇಳಿದರು. ಇದಕ್ಕಾಗಿ ಅವರು ಜಲಜೀವನ ಮಿಷನ್ ಘೋಷಣೆ ಮಾಡಿದರು. “ಹನಿ ಹನಿ ನೀರು ಉಳಿಸುವ ಕೆಲಸ ಆಗಬೇಕಿದೆ. ಜಲ ಸಂರಕ್ಷಣೆ ಒಂದು ತಪಸ್ಸು ಆಗಬೇಕು. ದೇಶದ ಬಹುತೇಕ ಕಡೆಗಳಲ್ಲಿ ನೀರಿನ ಸಮಸ್ಯೆ ಇದೆ. ಹನಿ ನೀರಿಗೆ ಕಿಲೋ ಮೀಟರ್‌ಗಟ್ಟಲೆ ಹೋಗುತ್ತಿದ್ದಾರೆ. ಜಲ ಸಮಸ್ಯೆ ವಿರುದ್ಧ ನಾವು ಹೋರಾಡಬೇಕು. ಜಲ್ ಜೀವನ್ ಮಿಷನ್‌ಗಾಗಿ 3.5 ಲಕ್ಷ ಕೋಟಿ ಮೀಸಲಿಟ್ಟಿದ್ದೇವೆ. ಶತಮಾನದ ಹಿಂದೆಯೇ ತಿರುವಳ್ಳುವರ್ ಈ ಸಮಸ್ಯೆ ಬಗ್ಗೆ ಹೇಳಿದ್ದರು. ಈಗಿನಿಂದಲೇ ಎಲ್ಲರೂ ಸ್ವಯಂಪ್ರೇರಣೆಯಿಂದ ಶ್ರಮಿಸಿ. ಜಲ ಅಭಿಯಾನ ಪ್ರತಿಯೊಬ್ಬರ ಅಭಿಯಾನ ಆಗಬೇಕು,” ಎಂದು ಪ್ರಧಾನಿ ಕರೆನೀಡಿದರು.

“ದಿನೇ ದಿನೇ ದೇಶದ ಜನಸಂಖ್ಯೆ ಹೆಚ್ಚುತ್ತಿದೆ. ಈಗಿನಿಂದಲೇ ಮುಂದಿನ ಪೀಳಿಗೆಗೆ ನೀರು ಉಳಿಸಬೇಕಿದೆ. ಜಲ ಸಂರಕ್ಷಣೆಗೆ ಸಾಮಾಜಿಕ ಜಾಗೃತಿ ಆಗಬೇಕು. ಸಮಾಜದ ಎಲ್ಲರೂ ಇದಕ್ಕಾಗಿ ಶ್ರಮ ವಹಿಸಬೇಕು. ಕೇಂದ್ರ, ರಾಜ್ಯ ಸರ್ಕಾರಗಳ ಜೊತೆ ಕೈಜೋಡಿಸಿ. ಶಿಕ್ಷಿತ ಸಮಾಜ ನಮ್ಮದು ಜಲ ಸಂರಕ್ಷಣೆಗೆ ಶ್ರಮಿಸಿ,” ಎಂದು ಮೋದಿ ಕೋರಿದರು.

ಭ್ರಷ್ಟಾಚಾರ ನಿರ್ಮೂಲನೆಗೆ ಕರೆ:

ಮೋದಿ ಆರಂಭದಿಂದಲೂ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡುತ್ತಾ ಬಂದವರು. ಇಂದಿನ ಭಾಷಣದಲ್ಲೂ ಅದನ್ನೇ ಪುನರುಚ್ಚರಿಸಿದ್ದಾರೆ. “ಭ್ರಷ್ಟಾಚಾರ ಬೇರುಸಮೇತ ಕಿತ್ತು ಹಾಕಬೇಕಿದೆ. ಇದು ಸಾಧ್ಯವಾಗಲು ನೀವೆಲ್ಲಾ ಕೈಜೋಡಿಸಬೇಕು. ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇದು ಕೇವಲ ಸರ್ಕಾರಗಳಿಂದ ಮಾತ್ರ ಸಾಧ್ಯವಿಲ್ಲ. ನಿಮ್ಮ ಇಚ್ಛಾಶಕ್ತಿ ಕೂಡ ಇದಕ್ಕೆ ಸಹಕಾರಿ,” ಎಂದು ಜನರ ಸಹಕಾರ ಕೋರಿದರು.

“ವಿಶ್ವಮಟ್ಟದಲ್ಲಿ ಭಾರತಕ್ಕೆ ಉತ್ತಮ ಸ್ಥಾನಮಾನ ಸಿಗಬೇಕು. ಭಾರತದ ಶಕ್ತಿಮೇಲೆ ಇಡೀ ವಿಶ್ವವೇ ನಂಬಿಕೆ ಇಟ್ಟಿದೆ. ಅಗ್ರಪಂಥಿ 50 ರಾಷ್ಟ್ರಗಳ ಸಾಲಿನಲ್ಲಿ ಭಾರತ ನಿಲ್ಲಬೇಕು. ಈ ಕನಸು ಸಾಕಾರಗೊಳಿಸಲು ಹಗಲಿರುಳು ಶ್ರಮಿಸ್ತೇವೆ,” ಎಂದರು ಮೋದಿ.

“ಯಾರಿಗೆ ಏನು ಸಿಕ್ಕಿದೆ? ಯಾವಾಗ ಸಿಕ್ಕಿದೆ? ನಾವೆಲ್ಲರೂ ಸೇರಿ ದೇಶವನ್ನು ಎಲ್ಲಿಗೆ ಕೊಂಡೊಯ್ಯಬೇಕು. ದೇಶಕ್ಕಾಗಿ ಏನು ಮಾಡಬೇಕು ಎನ್ನುವ ಕನಸಿರಬೇಕು. 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಕಷ್ಟವಿಲ್ಲ. 2 ಟ್ರಿಲಿಯನ್‌ನಿಂದ 3 ಟ್ರಿಲಿಯನ್‌ ಡಾಲರ್‌ಗೆ ತಲುಪಿದ್ದೇವೆ. 70 ವರ್ಷಗಳಲ್ಲಿ ಆಗದ್ದನ್ನು 5 ವರ್ಷಗಳಲ್ಲಿ ಸಾಧಿಸಿದ್ದೇವೆ,” ಎಂದರು.

ಪ್ರವಾಸೋದ್ಯಮಕ್ಕೆ ಒತ್ತು:

ದೇಶದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು ಎಂದ ಅವರು, “ಪ್ರವಾಸೋದ್ಯಮಕ್ಕೆ ಪ್ರಾಮುಖ್ಯತೆ ನೀಡಬೇಕು. ಇದರಿಂದ ಜನರಿಗೆ ಕೆಲಸ ಸಿಗುತ್ತದೆ. ನಾವು ಅದನ್ನು ಯೋಚನೆ ಮಾಡಬೇಕು. ವಿದೇಶಿಯರು ನಮ್ಮ ದೇಶಕ್ಕೆ ಹೇಗೆ ಬರಬೇಕು, ಹೇಗೆ ಅಭಿವೃದ್ಧಿಗೊಳಿಸಿದರೆ ಅವರನ್ನು ಆಕರ್ಷಿಸಬಹುದು ಎನ್ನುವುದರ ಬಗ್ಗೆ ಆಲೋಚಿಸಬೇಕಿದೆ,” ಎಂದರು ಮೋದಿ.

“ಪ್ರತಿ ಜಿಲ್ಲೆ ರಫ್ತು ಜಿಲ್ಲೆಯಾಗಿ ಮಾರ್ಪಾಡಾಗಬೇಕು. ಎಲ್ಲರಲ್ಲಿಯೂ ಈ ರೀತಿಯ ಸಾಮರ್ಥ್ಯವಿದೆ. ಅದರ ಬಳಕೆಯಾಗಬೇಕು,” ಎಂದ ಅವರು, “ಶಾಂತಿ, ಸುರಕ್ಷತೆಗೆ ನಮ್ಮ ಆದ್ಯತೆ. ಇದರಿಂದ ದೇಶದ ವಿಕಾಸ ಸಾಧ್ಯ. ವಿಶ್ವ ಶಾಂತಿ, ಸಮೃದ್ಧಿಗೆ ಭಾರತ ಮುಕುಟ ಆಗಬೇಕು,” ಎಂದರು.

ಭಯೋತ್ಪಾದನೆ ನಿರ್ಮೂಲನೆ ಮಾಡಿ:

“ಭಯೋತ್ಪಾದನೆ ಅನ್ನೋದನ್ನ ಬೇರುಸಮೇತ ಕಿತ್ತಾಕಬೇಕು. ಭಯೋತ್ಪಾದನೆ ವಿರುದ್ಧ ಭಾರತ ಉಗ್ರ ಹೋರಾಟ ಮಾಡ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಅಂತ್ಯ ಹಾಡುತ್ತೇವೆ. ಆಫ್ಘನಿಸ್ತಾನ, ಶ್ರೀಲಂಕಾದಲ್ಲಿ ಏನಾಯ್ತು ಗೊತ್ತಿದೆ. ಅಮಾಯಕರು ಪ್ರಾಣ ಕಳೆದುಕೊಳ್ಳಬೇಕಾಯ್ತು. ಈ ಪರಿಸ್ಥಿತಿ ಯಾರಿಗೂ ಬೇಡ. ಇದರ ವಿರುದ್ಧ ಹೋರಾಟ ಮಾಡಬೇಕು. ದೇಶದ ಶಾಂತಿ ಕಾಪಾಡಾಲು ಎಲ್ಲರೂ ಯೋಧರಾಗಬೇಕು. ಸಾಮಾನ್ಯರೂ ಸಮವಸ್ತ್ರ ಇಲ್ಲದ ಯೋಧರಾಗಬೇಕು. ದೇಶಕ್ಕಾಗಿ ಪ್ರಾಣ ಪಟಕ್ಕಿಟ್ಟ ಯೋಧರಿಗೆ ನನ್ನ ಧನ್ಯವಾದ, ಎಂದರು ಮೋದಿ.

Comments are closed.