ಕರ್ನಾಟಕ

ಇನ್ನೂ ಗಾಂಧಿ ಕನಸಿನ ಸ್ವಾತಂತ್ರ್ಯ ದೊರೆತಿಲ್ಲ: ಸ್ವತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ

Pinterest LinkedIn Tumblr


ಬೆಂಗಳೂರು(ಆಗಸ್ಟ್​.15): 1947 ಆಗಸ್ಟ್ 15 ರಂದು ದೇಶಕ್ಕೆ ಸ್ವಾತಂತ್ರ ಸಿಕ್ಕಿದ ಮಹತ್ವದ ದಿನ. ಒಂದೆಡೆ ಸುಭಾಷ್​ ಚಂದ್ರ ಬೋಸ್​, ಚಂದ್ರಶೇಖರ್​ ಆಜಾದ್​, ಭಗತ್​ ಸಿಂಗ್​ ನೇತೃತ್ವದಲ್ಲಿ ಕ್ರಾಂತಿಕಾರಕ ಹೋರಾಟಗಳು, ಇನ್ನೊಂದಡೆ ಬಾಪು ಗಾಂಧೀಜಿ ಅವರ ಮುಂದಾಳತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಸಾಲುಸಾಲು ಅಹಿಂಸಾತ್ಮಕ ಹೋರಾಟಗಳು ನಡೆದವು. ಬಾಪು ಹೋರಾಟಗಳಿಂದ ಪ್ರೇರಣಗೊಂಡು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅನೇಕ ಹೋರಾಟಗಾರು ಧುಮುಕಿದರು. ಗಾಂಧಿ ಮಾರ್ಗದಲ್ಲಿ ಸ್ವಾತಂತ್ರ್ಯಕ್ಕಾಗಿ ಜೀವನವಿಡೀ ಹೋರಾಟ ನಡೆಸಿದ ಪ್ರಮುಖರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್​.ಎಸ್​. ದೊರೆಸ್ವಾಮಿಯೂ ಒಬ್ಬರು. ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕೊನೆಯ ಕೊಂಡಿ ಎಂದು ಹೇಳಬಹುದು.

ನಮ್ಮ ನ್ಯೂಸ್​18 ತಂಡ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಶತಾಯುಷಿ, ಹಿರಿಯ ಗಾಂಧಿವಾದಿ ಎಚ್​.ಎಸ್​. ದೊರೆಸ್ವಾಮಿ ಅವರ ವಿಶೇಷ ಸಂದರ್ಶನವನ್ನು ನಡೆಸಿತು. ದೊರೆಸ್ವಾಮಿ ಅವರು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಇಂದಿಗೂ ಪ್ರಸ್ತುತ ಹೋರಾಟಗಳಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದಾರೆ. ಈ ಕ್ರಿಯಾಶೀಲ ಹಿರಿಯ ವ್ಯಕ್ತಿತ್ವವಾಗಿರುವ ಎಚ್​.ಎಸ್​. ದೊರೆಸ್ವಾಮಿ ಅವರ ವಿಶೇಷ ಸಂದರ್ಶನ ಇಲ್ಲಿದೆ.

1. ನೀವು ಸ್ವಾತಂತ್ರ್ಯ ಹೋರಾಟಕ್ಕೆ ಪ್ರವೇಶಿಸಲು ಕಾರಣವೇನು?

ಉತ್ತರ: ನನಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಬೇಕೆಂಬ ಭಾವನೆಯಿತ್ತು. ಸ್ವಾತಂತ್ರ್ಯ ಹೋರಾಟ ಸಂಘಟಿಸುವ ನಿಟ್ಟಿನಲ್ಲಿ ಗಾಂಧಿಜೀ, ಮದುವೀರ್​ ಕೃಷ್ಣರಾಯರು ಸೇರಿದಂತೆ ಪಟ್ಟಾಬಿ ಸೀತರಾಮಯ್ಯ​ನಂತಹ ಒಳ್ಳೆಯ ವಾಗ್ಮಿ ಹಾಗೂ ಹೋರಾಟಗಾರರು ಬೆಂಗಳೂರಿಗೆ ಆಗಮಿಸಿ ಸಾರ್ವಜನಿಕ ಸಭೆಯನ್ನು ಆಯೋಜಿಸುತ್ತಿದ್ದರು. ಸಭೆಯಲ್ಲಿ ಭಾಗಿಯಾಗಲು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದೆವು. ನಾಯಕರ ಭಾಷಣ ಕೇಳಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂಬ ಹುರುಪು ಸಿಕ್ಕಿತು. ಇವರ ಪ್ರೇರಣೆಯಿಂದ ಹೋರಾಟಕ್ಕೆ ಧುಮುಕಿದೆವು ಎಂದರು.

ನಾವು ಕನಸು ಕಂಡ ರೀತಿಯ ಸ್ವಾತಂತ್ರ್ಯ ಸಿಕ್ಕಿಲ್ಲ. ಬಿಳಿಯರ ಬದಲು ಕರಿಯರ ಆಡಳಿತ ಬಂದಿದೆ. ಅಭಿವೃದ್ಧಿ ಹೆಸರಲ್ಲಿ ಭೂಮಿ ಬಗೆದಿದ್ದೇವೆ. ಬೆಟ್ಟ ಕರಗಿಸಿದ್ದೇವೆ. ಚಂದ್ರಲೋಕಕ್ಕೆ ಹೋಗಿದ್ದೇವೆ. ಆದರೆ, ಗಾಂಧಿ ಆಶಿಸಿದ ಕೆಲಸಗಳು ಆಗಿಲ್ಲ.
— – ಎಚ್.ಎಸ್. ದೊರೆಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ

2. ನಿಮಗೆ ಮೊದಲ ಲಾಠಿ ಏಟಿನ ಪರಿಚಯವಾಗಿದ್ದು ಎಲ್ಲಿ? ಹೇಗೆ?

ಉತ್ತರ: ನಾನು ಇಂಟರ್​ಮೀಡಿಯೇಟ್​(ದ್ವಿತೀಯ ಪಿಯುಸಿ) ಓದುವಾಗ ಮುಂಬೈ ಮೂಲದ ಮೇಯರ್ ನಾರಿಮನ್ ಎಂಬಾತ ಕಾಲೇಜಿಗೆ ಆಗಮಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ನಾರಿಮನ್ ಅವರೊಂದಿಗೆ​ ನಾವು ಮಾತಾಡುತ್ತಿದ್ದಾಗ ಪೊಲೀಸ್​ ಬಸಪ್ಪ ಎಂಬಾತ ನಮ್ಮ ರಟ್ಟೆ ಹಿಡಿದು ಎಳೆದು ಅರೆಸ್ಟ್​ ಮಾಡಿದರು.

ಈ ಸಂದರ್ಭದಲ್ಲಿ ನಮಗೂ ಮತ್ತು ಪೊಲೀಸರಿಗೂ ಗಲಾಟೆ ನಡೆಯಿತು. ಮಾರನೇ ದಿನವೇ ನಾವು ಇಂಟರ್​ಪಿಟಿಯೇಟ್​ ಕಾಲೇಜು ಬಂದ್​ ಮಾಡೋದು ಎಂದು ನಿರ್ಧರಿಸಿದೆವು. ಬಂದ್​ ಮಾಡಿದ ನಂತರ ಪೊಲೀಸರು ಬಂದು ನಮ್ಮನ್ನು ಎಳೆದೊಯ್ದು ಲಾಠಿಯಿಂದ ಹೊಡೆದರು. ಲಾಠಿ ಏಟಿನ ಮೊದಲ ಪರಿಚಯ ಅಲ್ಲಿಯಾಯ್ತು.

3. ಗಾಂಧಿಜೀ ಅವರು ತಂದ ಹರಿಜನ ಪತ್ರಿಕೆ ನಿಮ್ಮ ಹೋರಾಟಕ್ಕೆ ಹೇಗೆ ಸಹಾಯವಾಯ್ತು?

ಗಾಂಧೀಜಿ ಅವರ ಹರಿಜನ ಪತ್ರಿಕೆಯಲ್ಲಿ ಸ್ವಾತಂತ್ರ ಹೋರಾಟಗಳ ಕುರಿತು ಲೇಖನಗಳು ಬರೆಯಲಾಗುತ್ತಿತ್ತು. ಈ ಪತ್ರಿಕೆಯನ್ನು ನಾವು ಪ್ರತಿನಿತ್ಯ ಓದುತ್ತಿದ್ದೆವು, ನಮ್ಮ ಮುಂದಿನ ಹೋರಾಟಕ್ಕೂ ಪ್ರೇರಣೆಯಾಗಿತ್ತು. ಬಳಿಕ ಚಳವಳಿಯ ಭಾಗವಾಗಬೇಕೆಂದು ಅನಿಸಿತು. 1942 ರ ಹೊತ್ತಿಗೆ ಬಿಎಸ್​ಸಿ ಮುಗಿಸಿ ಚಳುವಳಿಯಲ್ಲಿ ಪೂರ್ಣಾವಧಿ ಕಾರ್ಯಕರ್ತನಾಗಿ ತೊಡಗಿಸಿಕೊಂಡೆನು.

4. ನೀವು ಕಂಡ ನೈಜ ಸ್ವಾತಂತ್ರ್ಯ ಸಿಕ್ಕಿದೆಯಾ?

ನಮ್ಮ ಕನಸಿನ ಸ್ವಾತಂತ್ರ್ಯ ಸಿಕ್ಕಿಲ್ಲ. ಬದಲಿಗೆ ಬಿಳಿಯರ ರಾಜ್ಯ ಹೋಗಿ ಕರಿಯರ ರಾಜ್ಯವಾಗಿದೆ. ದೇಶದಲ್ಲಿ ಅಭಿವೃದ್ದಿಯಾಗಿದೆ, ಭೂಮಿಯನ್ನ ಬಗೆದಿದ್ದೇವೆ, ಬೆಟ್ಟಗಳನ್ನು ಕರಗಿಸಿದ್ದೇವೆ ಮತ್ತು ಚಂದ್ರಲೋಕಕ್ಕೆ ಹೋಗಿದ್ದೇವೆ. ಆದರೆ, ಗಾಂಧಿ ಅವರು ಆಶಿಸಿದಂತಹ ಕೆಲಸಗಳು ಆಗಿಲ್ಲ.

5. ಗಾಂಧೀಜಿ ಮತ್ತು ನಿಮ್ಮೆಲ್ಲರ ಸ್ವಾತಂತ್ರ್ಯದ ಆಶಯ ಏನಾಗಿತ್ತು?

ಉತ್ತರ: ಗಾಂಧೀ ಮನಸಿನಲ್ಲಿದ್ದ ಮೊದಲ ಕೆಲಸ ಆದ್ಯತೆಯ ಮೇರೆಗೆ ಬಡತನ ನಿರ್ಮೂಲನವಾಗಬೇಕಿತ್ತು. ಸರ್ಕಾರವು ಅನ್ನವನ್ನ ಕಲಿಸಿಕೊಡ್ತಿದೆ, ಆದರೆ ಅನ್ನ ಬೆಳೆಯುವುದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಉದ್ಯೋಗ, ಸಮರ್ಪಕ ಶಿಕ್ಷಣ, ಮೂಲಭೂತ ಸೌಕರ್ಯಗಳು, ಭೂಮಿ ವಸತಿ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕಿತ್ತು. ಆದರೆ ಇವೆಲ್ಲ ಆಗಿಲ್ಲ. ಸ್ವಾತಂತ್ರ್ಯ ಸಿಕ್ಕ ನಂತರದಲ್ಲೂ ಬಡವ ಮತ್ತಷ್ಟು ಬಡವನಾಗಿದ್ದಾನೆ, ಶ್ರೀಮಂತ ಮತ್ತಷ್ಟು ಶ್ರೀಮಂತನಾಗಿದ್ದಾನೆ.

6. ​ಗಾಂಧೀಜಿ ಅವರ ಜತೆಗೆ ನಿಮ್ಮ ಒಡನಾಟ ಹೇಗಿತ್ತು?

ನಾವು ಅಖಿಲ ಭಾರತ ಮೈಸೂರು ಕಾಂಗ್ರೆಸ್​ ಸಮಿತಿಯ ಭಾಗವಾಗಿದ್ದೆವು. ಸಮಿತಿಯಲ್ಲಿ ಉಡಾಫೆ ವ್ಯಕ್ತಿತ್ವದವರು ನಮ್ಮಂತಹ ರೆಬೆಲ್​ಗಳು ಇದ್ದೆವು. ನಮಗೆ ಸ್ವಾತಂತ್ರ್ಯ ಬೇಗ ಸಿಗಬೇಕು ಎಂದು ಭಾವಿಸಿದ್ದೆವು ಅದಕ್ಕಾಗಿ ಗಾಂಧೀಜಿ ಅವರನ್ನು ಕರೆಸಿ ಸಭೆಯನ್ನು ಕರೆಯಿರಿ ಎಂದೆವು. ನೀವೂ ಕರೆಯಲಿಲ್ಲ ಎಂದರೆ ನಾವು ಕರೆಯುತ್ತೇವೆ ಎಂದು ಬೆದರಿಕೆ ಹಾಕಿದೆವು. ಬಳಿಕ ಅವರು ಕರಿಯಲ್ಲಿಲ್ಲ ನಮ್ಮ 50 ಜನರ ಸಮಿತಿಯೊಳಗಿನ ಗುಂಪು ಕಾರ್ಯಕ್ರಮಕ್ಕೆ ಕರೆ ನೀಡಿದೆವು. ಮೈಸೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು. ಗಾಂಧಿ ಅವರ ಭಾಷಣ ಕೇಳಲು ತುದಿಗಾಲಿನಲ್ಲಿ ನಿಂತಿದ್ದರು ಜನರು.

ಮೈಸೂರು ಮಹಾರಾಜರು ಗಾಂಧಿ ಅವರನ್ನು ನಂದಿ ಬೆಟ್ಟದ ಅತಿಥಿ ಗೃಹಾಲಯಕ್ಕೆ ಕಳಿಸಿದರು. ನಾನು ಮತ್ತು ನನ್ನ ಸ್ನೇಹಿತರು ಬಾಪು ಅವರ ದರ್ಶನ ಪಡೆದು ಬರುತ್ತಿದ್ದೆವು. ಅವರನ್ನು ಹತ್ತಿರದಿಂದ ನೋಡುವುದೇ ಅದೃಷ್ಟ. ನಾವು ಅವರನ್ನು ಬಹಳ ಹತ್ತಿರದಿಂದ ನೋಡಿ, ಭೇಟಿಯಾಗಿ ಹಲವಾರು ಪ್ರಶ್ನೆಗಳನ್ನು ಕೇಳಿ ಪ್ರಿಯರಾಗಿದ್ದೆವು. ಎರಡು ಬಾರಿ ನಾನು ಗಾಂಧಿ ಅವರೊಂದಿಗೆ ಮಾತಾಡಿದ ಅನುಭವ.

ಈಗಿನ ಪೀಳಿಗೆಯವರು ಸ್ವಾತಂತ್ರ್ಯ ದಿನೋತ್ಸವವೆಂದರೆ ರಜೆ ದಿನವೆಂದಷ್ಟೇ ಸಂಭ್ರಮಿಸುತ್ತಾರೆ. ಅವರಿಗೆ ಈ ದಿನದ ಮಹತ್ವ ಗೊತ್ತಿಲ್ಲ.
— – ಎಚ್.ಎಸ್. ದೊರೆಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ

7. ಪತ್ರಕರ್ತೆ ಗೌರಿ ಹತ್ಯೆ, ಉಮರ್​ ಖಾಲಿದ್​ ಮೇಲೆ ಗುಂಡಿನ ದಾಳಿ ರೀತಿಯ ಘಟನೆಗಳ ಬಗ್ಗೆ ನಿಮ್ಮ ಅಭಿಪ್ರಾಯ?

ಪ್ರಜಾಪ್ರಭುತ್ವದ ದೇಶದಲ್ಲಿ ಎಲ್ಲ ಯೋಚನೆಗಳಿಗೂ ಮುಕ್ತ ಅವಕಾಶವಿದೆ. ನಾವು ವೈಚಾರಿಕವಾಗಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕೇ ಹೊರತು, ಈ ರೀತಿಯ ಅಮಾನವೀಯ ದಾಳಿಗಳಿಂದ ವೈಯಕ್ತಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸಲ್ಲದು. ಜಾತಿ, ಧರ್ಮದ ಹೆಸರಿನಲ್ಲಿ ಗಲಭೆಗಳನ್ನು ಸೃಷ್ಟಿಸಲಾಗುತ್ತಿದೆ. ಇದರೆಲ್ಲರ ಹೊರತು ಮನಸಿನ ಮೂಲಕ ಭಾರತೀಯರೆಲ್ಲ ಒಂದೇ ಎಂಬ ಭಾವನೆ ಮೂಡಿಸಬೇಕು

8. ಇಂದಿನ ಸ್ವಾತಂತ್ರ್ಯ ಆಚರಣೆ ಬಗ್ಗೆ ನಿಮ್ಮ ಅನಿಸಿಕೆ?

ದೇಶದ ಜನತೆಗೆ ಇಂದಿನ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವೇ ತಿಳಿದಿಲ್ಲ. ಸ್ವಾತಂತ್ರ್ಯ ದಿನಾಚರಣೆಯ ವರ್ಷಕ್ಕೊಮ್ಮೆ ಆಚರಿಸುವ ಹಬ್ಬವಾಗಿದೆ. ಜನಕ್ಕೆ ದಿನದ ಮಹತ್ವ, ಸ್ವಾತಂತ್ರ್ಯ ಹೋರಾಟಗಾರ ತ್ಯಾಗ ಬಲಿದಾನಗಳ ಬಗ್ಗೆ ಅರಿವಿಲ್ಲದೆ, ಒಂದು ದಿನ ನಮಗೆ ರಜೆ ಸಿಗುತ್ತದೆ ಎಂದು ಆಚರಿಸುತ್ತಾರೆ. ಇದು ಸ್ವಾತಂತ್ರ್ಯ ದಿನಾಚರಣೆಯ ರೀತಿಯಲ್ಲ.

9. ಕೊನೆಯದಾಗಿ ಸಮಾಜಕ್ಕೆ ಏನು ಸಂದೇಶ ಕೊಡಲು ಬಯಸುತ್ತೀರಿ?

ಉತ್ತರ: ನಮ್ಮ ಕಾಲದಲ್ಲಿ ಯುವಕರಿಗೆ ಒಬ್ಬ ಗುರು ಜತೆಗೆ ಒಂದು ಗುರಿಯಿತ್ತು. ಆದರೆ ಇಂದಿನ ಜನತೆಗೆ ಒಂದು ಜವಾಬ್ದಾರಿಯಿಲ್ಲ. ವರ್ಷಕ್ಕೊಮ್ಮೆ ಚುನಾವಣೆಯಲ್ಲಿ ಮತಚಲಾಯಿಸಿ ಕುಂಭಕರ್ಣನ ಹಾಗೆಯೇ ಮಲಗುತ್ತಾರೆ. ಜನ ದೇಶದ ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ತಿಳಿಯಬೇಕು. ನಂತರ ಸರ್ಕಾರದ ಅಧಿಕಾರಿ ಮತ್ತು ರಾಜಕಾರಣಿಗಳನ್ನು ತಮ್ಮ ಹಕ್ಕುಗಳು ಒದಗಿಸುವಂತೆ ಗಟ್ಟಿಯಾಗಿ ಕೇಳಬೇಕು.

10. ಸದ್ಯ ನೀವು ಕೈಗೊಂಡಿರುವ ಹೋರಾಟಗಳು?

ನಾವು ಭೂಮಿ ಮತ್ತು ವಸತಿ ವಂಚಿತರ ಹಕ್ಕು ಹೋರಾಟ ಸಮಿತಿ ಎಂಬ ಹೆಸರಿನಲ್ಲಿ ಇಬ್ಬರು ಬಡವರಿಗಾಗಿ ಹೋರಾಟ ನಡೆಸುತ್ತಿದ್ದೇವೆ. ನಾನು ಈ ಹೋರಾಟ ನೇತೃತ್ವವಹಿಸಿದ್ಧೇನೆ. ಸರ್ಕಾರ ರಾಜ್ಯ ಪ್ರತಿ ಪ್ರಜೆಗೂ 2 ಎಕರೆ ಜಮೀನು ಒಂದು ವಸತಿ ನೀಡಲು ಒಪ್ಪಿಕೊಂಡಿದೆ. ಈ ಸಂಬಂಧ ಉನ್ನತಿ ಸಮಿತಿಯೊಂದನ್ನು ರಚಿಸಿದ್ದು, ನಾನು ಇದ್ದೇನೆ. ಈ ಹೋರಾಟ ಮುಂದುವರಿಯಲಿದೆ ಎಂದರು.

Comments are closed.