ಕರ್ನಾಟಕ

ಗಾಂಧಿ ಮತ್ತು ನೆಹರು ಸಲಿಂಗಿಗಳು ಎಂದು ವಿವಾದಾತ್ಮಕ ಟ್ವೀಟ್ ಮಾಡಿದ ಲೇಖಕಿ

Pinterest LinkedIn Tumblr


ಬೆಂಗಳೂರು(ಆಗಸ್ಟ್​.14): ಸದಾ ವಿವಾದಾತ್ಮಕ ಟ್ವೀಟ್ ಮೂಲಕವೇ ಸುದ್ದಿಯಾಗುವ ಪ್ರೊ. ಮಧು ಪೂರ್ಣಿಮಾ ಕಿಶ್ವರ್ ವಿರುದ್ಧ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಕೊನೆಗೂ ಎಫ್​​ಐಆರ್​​ ದಾಖಲಾಗಿದೆ. ಮಹಾತ್ಮಾ ಗಾಂಧಿ ಹಾಗೂ ಜವಾಹರ್ ಲಾಲ್ ನೆಹರು ಸಲಿಂಗಿಗಳು. ಇಬ್ಬರ ನಡುವೆಯೂ ಸಂಬಂಧ ಇತ್ತು ಎಂದು ಟ್ವೀಟ್​​ ಮಾಡಿದ್ದಕ್ಕೆ ಮಧು ಕಿಶ್ವರ್ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್ ಎಂಬ ಸಂಸ್ಥೆಯೂ ದೂರು ದಾಖಲಿಸಿದೆ.

ಮಧು ಕಿಶ್ವರ್ ಓರ್ವ ಲೇಖಕಿ. ಸೆಂಟರ್​​​ ಫಾರ್​​ ದಿ ಸ್ಟಡೀ ಆಫ್​​​ ಡೆವಲಪಿಂಗ್​​ ಸೊಸೈಟಿ ಎಂಬ ಸಂಸ್ಥೆಯಲ್ಲಿ ಪ್ರಾಧ್ಯಾಪಕಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಮಧು ಕಿಶ್ವರ್, 2014ರಿಂದ ಈಚೆಗೆ ಹಲವಾರು ವಿವಾದಿತ ಟ್ವೀಟ್​ಗಳನ್ನು ಮಾಡುತ್ತಲೇ ಬಂದಿದ್ದಾರೆ.

ಜೂನ್ 2019ರಲ್ಲಿ ಮಧು ಕಿಶ್ವರ್ ಅವರ ಈ ಟ್ವೀಟ್ ವಿವಾದ ಸೃಷ್ಟಿಸಿತ್ತು. ಟ್ವೀಟ್​​ನಲ್ಲಿ ಮಧು ಮಹಾತ್ಮಾ ಗಾಂಧಿ ಮತ್ತು ನೆಹರು ಅವರ ನಡುವೇ ಸಲಿಂಗಕಾಮ ಸಂಬಂಧ ಇತ್ತು ಎಂದು ಹೇಳಿದ್ದರು. ಈ ಬಗ್ಗೆ ದಕ್ಷಿಣ ಭಾರತದ ಸ್ನೇಹಿತರೊಬ್ಬರು ಮಧು ಅವರಿಗೆ ಹೇಳಿದ್ದರಂತೆ. ಹೀಗಾಗಿ ಇಬ್ಬರೂ ಒಮ್ಮೆ ಒಂದೇ ಮಂಚದಲ್ಲಿ ಮಲಗಿದ್ದರು ಎಂದು ಟ್ವೀಟ್​​ ಮಾಡಿದ್ದರು ಮಧು. ಈ ಟ್ವೀಟ್​​ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಈ ಬೆನ್ನಲ್ಲೇ ಜನಾಧಿಕಾರ ಸಂಘರ್ಷ ಪರಿಷತ್​​ನ ಆದರ್ಶ್ ಅಯ್ಯರ್, ಮಧು ವಿರುದ್ಧ ದೂರು ದಾಖಲಿಸಿದ್ದರು. ಅಲ್ಲದೇ ಮಧು ಕೀಶ್ವರ್ ಅವರ ಟ್ವೀಟ್ ಅನ್ನು ನಾವು ಜೂನ್ 2019ರಲ್ಲಿ ನೋಡಿದ್ದೆವು. ಇದೊಂದು ಸುಳ್ಳು ಸುದ್ದಿ ಮಾತ್ರವಲ್ಲ, ಬದಲಾಗಿ ಲೈಂಗಿಕ ವಿಷಯದ ಅತಿರೇಕ, ಅತಿರಂಜಿತ ಸುಳ್ಳು. ಅದಕ್ಕೆ ಇಂಗ್ಲಿಷ್ ಭಾಷೆಯಲ್ಲಿ prurient ಎಂದು ಕರೆಯುತ್ತಾರೆ. ರಾಷ್ಟ್ರಪಿತರ ಮತ್ತು ದೇಶದ ಮೊದಲ ಪ್ರಧಾನಿಯ ಬಗ್ಗೆ ಈ ರೀತಿ ಅವಹೇಳನ ಮಾಡುವುದು ಸ್ವಾತಂತ್ರ್ಯ ಹೋರಾಟವನ್ನೇ ಸುಳ್ಳು ಮಾಡಲು ಹೊರಟಂತಿತ್ತು. ಇದರಿಂದ ಮುಂದಿನ ಜನಾಂಗಕ್ಕೆ ತಪ್ಪು ಸಂದೇಶ ಹೋದಂತಾಗುತ್ತದೆ. ಇಂತಹ ಟ್ವೀಟ್ ಮಾಡುವ ಪರಂಪರೆಯನ್ನು ನಿಲ್ಲಬೇಕು ಎಂದು ನಾವು ನಿರ್ಧರಿಸಿ ದೂರು ನೀಡಿದೆವು ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಬಳಿಕ ಈ ಬಗ್ಗೆ ಕ್ರಮಕ್ಕಾಗಿ ಜನಾಧಿಕಾರ ಸಂಘರ್ಷ ಪರಿಷತ್ ಇನ್ನೊಂದು ಹೋರಾಟವನ್ನೇ ಮಾಡಬೇಕಾಯಿತು. ಮೊದಲು ಸೈಬರ್ ಪೊಲೀಸ್ ಸ್ಟೇಶನ್​​ಗೆ ಪರಿಷತ್ ಸದಸ್ಯರು ದೂರು ಕೊಟ್ಟರು. ಬೆಂಗಳೂರು ನಗರದಲ್ಲಿ ಕೇವಲ ಒಂದು ಸೈಬರ್ ಪೊಲೀಸ್ ಸ್ಟೇಶನ್ ಇದೆ. ಈ ಸ್ಟೇಶನ್​​ನ ಅಧಿಕಾರಿಗಳು, ಸಿಬ್ಬಂದಿ ತೀವ್ರ ಕಾರ್ಯದ ಒತ್ತಡದಲ್ಲಿರುತ್ತಾರೆ. ಈ ರೀತಿಯ ಸೋಶಿಯಲ್ ಮೀಡಿಯಾ ಸಂಬಂಧ ದೂರುಗಳು ಬರುತ್ತಲೇ ಇರುತ್ತವೆ. ನಾವು ಏನೂ ಮಾಡಲಾಗುವುದಿಲ್ಲ ಎಂದು ಹೇಳಿದ ಸೈಬರ್ ಪೊಲೀಸರು ದೂರುದಾರರನ್ನು ಸಾಗ ಹಾಕಿದರು.

ಪರಿಷತ್ ಸದಸ್ಯರು ನಂತರ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದರು. “ನಾವು ಯಾವುದೇ ವಕೀಲರಿಲ್ಲದೇ ಖುದ್ದು ವಾದ ಮಂಡಿಸಿದೆವು. ಮ್ಯಾಜಿಸ್ಟ್ರೇಟ್ ಕೂಡ ನಮ್ಮ ಅರ್ಜಿಯನ್ನು ಅಧ್ಯಯನ ಮಾಡಿ, ಬೆಂಬಲಿಸಿದರು. ನಮ್ಮ ವಾದ ಇದ್ದಿದ್ದೇನೆಂದರೆ, ಈ ಮಧು ಕಿಶ್ವರ್ ಗೆ 20 ಲಕ್ಷ ಹಿಂಬಾಲಕರಿದ್ದಾರೆ. ಟ್ವಿಟರ್ ಬಳಕೆ ಆರಂಭಿಸಿದಾಗಿನಿಂದ ಅವರು ಸರಿ ಸುಮಾರು 34,000 ಟ್ವೀಟ್ ಮಾಡಿದ್ದಾರೆ. ಇಂತಹ ಪ್ರಭಾವಶಾಲಿ ವ್ಯಕ್ತಿ ಸಾಮಾಜಿಕ ಜವಾಬ್ದಾರಿಯಿಂದ ವರ್ತಿಸಬೇಕಲ್ಲವೇ. ಅದೂ ಅಲ್ಲದೇ ಇಂತಹ ವರ್ತನೆ Contemporary community Standards Test ಎಂದು ಕರೆಯಲ್ಪಡುವ ಸಾಮಾಜಿಕ ಜವಾಬ್ದಾರಿಯನ್ನು ಉಲ್ಲಂಘಿಸುತ್ತದೆ. ಕೋರ್ಟ್ ನಮ್ಮ ವಾದವನ್ನು ಮನ್ನಿಸಿ FIR ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತು,’’ ಎಂದು ಆದರ್ಶ್ ಹೇಳಿದರು.

ಸದ್ಯ ಕೋರ್ಟ್​ ಆದೇಶದ ಮೇರೆಗೆ ಸೈಬರ್ ಪೊಲೀಸರು, ಮಧು ಕೀಶ್ವರ್ ಅವರ ವಿರುದ್ಧ ಐಪಿಸಿ ಸೆಕ್ಷನ್ 292, 294 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 (A) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Comments are closed.