ಹಾವೇರಿ: ಇಲ್ಲಿನ ವರದಾ ನದಿಯ ಕರಜಗಿ ಸೇತುವೆ ಬಳಿ ಬೈಕ್ ಸಹಿತ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಪೊಲೀಸ್ ಪೇದೆಯೊಬ್ಬರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಇಂದು ರಕ್ಷಿಸಿದ್ದಾರೆ.
ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಕರ್ತವ್ಯ ಮುಗಿಸಿಕೊಂಡು ತನ್ನ ಮನೆಗೆ ಹಿಂತಿರುಗುತ್ತಿದ್ದ ವೇಳೆ ಪೊಲೀಸ್ ಪೇದೆ ಯಲ್ಲಪ್ಪ ಕೊರವಿ ಅವರು ವರದಾ ನದಿ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದರು.
ವಿಷಯ ತಿಳಿದ ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿ ಸ್ಥಳೀಯರೊಡನೆ ಸೇರಿಕೊಂಡು ಯಲ್ಲಪ್ಪ ಅವರನ್ನು ಹುಡುಕಲು ಪ್ರಾರಂಭಿಸಿದರು. ಸೇತುವೆಯಿಂದ ಸ್ವಲ್ಪ ದೂರದಲ್ಲಿ ನೀರಿನಲ್ಲೇ ಪೇದೆ ಸಿಕ್ಕಿಹಾಕಿಕೊಂಡಿದ್ದರು. ಅವರ ಕೂಗಾಟ ಕೇಳಿ ಸ್ಥಳಕ್ಕೆ ಧಾವಿಸಿದ ಸಿಬಂದಿ ಮತ್ತು ಜನರು ಯಲ್ಲಪ್ಪ ಅವರನ್ನು ರಕ್ಷಿಸಿದರು.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸಂತಿಸಿಗ್ಲಿ ಗ್ರಾಮದ ನಿವಾಸಿಯಾಗಿರುವ ಯಲ್ಲಪ್ಪ ಅವರು ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಮಾರು ನಾಲ್ಕು ತಾಸುಗಳಿಗೂ ಅಧಿಕ ಸಮಯ ಯಲ್ಲಪ್ಪ ಅವರು ಪ್ರವಾಹದಲ್ಲಿ ಸಿಲುಕಿಕೊಂಡು ಪಾರಾಗಲು ಒದ್ದಾಡುತ್ತಿದ್ದರು.
Comments are closed.