ರಾಷ್ಟ್ರೀಯ

1947ರ ಆಗಸ್ಟ್ 14, 15ರಂದು ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿತ್ತೇ?

Pinterest LinkedIn Tumblr


ನವದೆಹಲಿ:ಲಕ್ಷಾಂತರ ಜನರ ತ್ಯಾಗ, ಹೋರಾಟ, ಬಲಿದಾನಗಳ ಮೂಲಕ ಭಾರತ 1947ರ ಆಗಸ್ಟ್ 15ರಂದು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಕಳಚಿಕೊಂಡು ಸ್ವಾತಂತ್ರ್ಯ ಪಡೆದಿತ್ತು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಗುರುವಾರ ದೇಶಾದ್ಯಂತ 73ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.

73ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಈ ಬಾರಿ ಜಮ್ಮು-ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿಯೂ ಭಾರತದ ತ್ರಿವರ್ಣ ಧ್ವಜ ರಾರಾಜಿಸಲಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳೇ ಕಳೆದಿದೆ. ಭಾರತದ ಮೊತ್ತ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಪ್ರಥಮ ಬಾರಿಗೆ ಧ್ವಜಾರೋಹಣ ನೆರವೇರಿಸಿದ್ದು ಎಲ್ಲಿ ಎಂಬುದು ಬಹುತೇಕರಿಗೆ ತಿಳಿದಿರದ ವಿಷಯವಾಗಿದೆ!

1947ರ ಆಗಸ್ಟ್ 14, 15ರಂದು ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿತ್ತೇ?

1947ರ ಆಗಸ್ಟ್ 14ರಂದು ಮಧ್ಯರಾತ್ರಿ ಭಾರತ ಸ್ವತಂತ್ರಗೊಂಡಿತ್ತು. ಪಂಡಿತ್ ಜವಾಹರಲಾಲ್ ನೆಹರು ಅವರು ದೇಶದ ಪ್ರಥಮ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅಂದು ನೆಹರು ಮೊತ್ತ ಮೊದಲು ತ್ರಿವರ್ಣ ಧ್ವಜ ಹಾರಿಸಿದ್ದು ಸಂಸತ್ ನ ಸೆಂಟ್ರಲ್ ಹಾಲ್ ನಲ್ಲಿ. ಈ ಸಂದರ್ಭದಲ್ಲಿ ಲಾರ್ಡ್ ಮೌಂಟ್ ಬ್ಯಾಟನ್ ಕೂಡಾ ಹಾಜರಿದ್ದರು.

ಕುತೂಹಲಕಾರಿ ವಿಷಯ ಏನೆಂದರೆ 1947ರ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಸಂಭ್ರಮ ಕೆಂಪುಕೋಟೆಯಲ್ಲಿ ನಡೆದಿರಲಿಲ್ಲ! ಆಗಸ್ಟ್ 15ರಂದು ಇಂಡಿಯಾ ಗೇಟ್ ಬಳಿ ಸಾವಿರಾರು ಜನರು ಈ ಅಮೃತ ಗಳಿಗೆಗೆ ಸಾಕ್ಷಿಯಾಗಿದ್ದರು. ಅದೇನೆಂದರೆ ಪ್ರಧಾನಿ ಜವಾಹರಲಾಲ್ ನೆಹರು, ಭಾರತದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅನೇಕ ಗಣ್ಯರ ಸಮ್ಮುಖದಲ್ಲಿ ಬೆಳಗ್ಗೆ 8.30ಕ್ಕೆ ಭಾರತದ ರಾಷ್ಟ್ರಧ್ವಜ ಹಾಗೂ ಅದರ ಕೆಳಗೆ ಯೂನಿಯನ್ ಜಾಕ್(ಬ್ರಿಟನ್ ಧ್ವಜ) ಜೊತೆ ಧ್ವಜಾರೋಹಣ ನೆರವೇರಿಸಲಾಗಿತ್ತು ಎಂದು ಲೈವ್ ಮಿಂಟ್ ವರದಿ ತಿಳಿಸಿದೆ. ಆಗಸ್ಟ್ 16ರ ಬೆಳಗ್ಗೆ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ರಾರಾಜಿಸಿತ್ತು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಆಗಸ್ಟ್ 14ರ ಮಧ್ಯರಾತ್ರಿ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಜವಾಹರಲಾಲ್ ನೆಹರು ಅಂದು ದೇಶದ ಜನತೆಯನ್ನು ಉದ್ದೇಶಿಸಿ “ಟ್ರಸ್ಟ್ ವಿಥ್ ಡೆಸ್ಟಿನಿ” ಎಂಬ ಜನಪ್ರಿಯ ಭಾಷಣ ಮಾಡಿದ್ದರು.

ಮೊತ್ತ ಮೊದಲು ಹಾರಿದ್ದ ಧ್ವಜ ಎಲ್ಲಿದೆ ಎಂಬುದೇ ಯಕ್ಷಪ್ರಶ್ನೆ!

ದೇಶಕ್ಕೆ ಸ್ವಾತಂತ್ರ್ಯ ಬಂದು 72ವರ್ಷಗಳೇ ಸಂದು ಹೋಗಿದೆ. ಆದರೆ 1947ರ ಆಗಸ್ಟ್ 15, 16ರಂದು ರಾರಾಜಿಸಿದ್ದ ತ್ರಿವರ್ಣ ಧ್ವಜ ಎಲ್ಲಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ದಾಖಲೆಯಿಂದ ಲಭ್ಯವಾಗಿಲ್ಲವಂತೆ!

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದ ಅಂದಿನ ತ್ರಿವರ್ಣ ಧ್ವಜಕ್ಕಾಗಿ ಸಾಕಷ್ಟು ಶೋಧ ನಡೆದಿದ್ದರೂ ಸಹ ಅದು ಪತ್ತೆಯಾಗಿಲ್ಲ. ನ್ಯಾಶನಲ್ ಮ್ಯೂಸಿಯಂ, ಕೆಂಪು ಕೋಟೆಯ ಮ್ಯೂಸಿಯಂ, ನೆಹರು ಮೆಮೋರಿಯಲ್, ರಾಷ್ಟ್ರಪತಿ ಭವನ ಮ್ಯೂಸಿಯಂ, ಸಂಸತ್ ಮ್ಯೂಸಿಯಂ ಸೇರಿದಂತೆ ಎಲ್ಲಿಯೂ ಮೊದಲ ಸ್ವಾತಂತ್ರ್ಯೋತ್ಸವ ದಿನ ನೆಹರು ಹಾರಿಸಿದ್ದ ತ್ರಿವರ್ಣ ಧ್ವಜ ಇಂದಿಗೂ ಎಲ್ಲಿದೆ ಎಂಬುದು ಗೊತ್ತಾಗಿಲ್ಲ ಎಂದು ವರದಿ ವಿವರಿಸಿದೆ.

Comments are closed.