ಕರ್ನಾಟಕ

ರಾಜ್ಯದಲ್ಲಿ ಪ್ರವಾಹದಿಂದ ಅಂದಾಜು 30 ಸಾವಿರ ಕೋಟಿ ಹಾನಿ: ನೆರೆ ವೀಕ್ಷಣೆ ಮಾಡಿದ ಅಮಿತ್ ಶಾ

Pinterest LinkedIn Tumblr


ಬೆಳಗಾವಿ: ಪ್ರವಾಹದಿಂದ ನಲುಗಿರುವ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವೈಮಾನಿಕ ಸಮೀಕ್ಷೆ ನಡೆಸಿದರು. ಇವರೊಂದಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರದ ಸಚಿವರಾದ ಪ್ರಲ್ಹಾದ್​ ಜೋಶಿ, ಸುರೇಶ್​ ಅಂಗಡಿ ಮತ್ತು ಪ್ರಭಾಕರ್ ಕೋರೆ, ಅಧಿಕಾರಿಗಳು ಉಪಸ್ಥಿತರಿದ್ದರು.

ವೈಮಾನಿಕ ಸಮೀಕ್ಷೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಮಿತ್ ಶಾ ಅವರು ಬೆಳಗಾವಿ, ಚಿಕ್ಕೋಡಿ, ಕೊಲ್ಹಾಪುರ, ಸಾಂಗ್ಲಿ, ಕೊಯ್ನಾ, ದೂದ್‌ಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ ಜಲಾಶಯಗಳ ಪ್ರವಾಹಪೀಡಿತ ಪ್ರದೇಶಗಳನ್ನು ವೀಕ್ಷಿಸಿ, ಅವಲೋಕನ ಮಾಡಿದ್ದಾರೆ. ಸಾವಧಾನದಿಂದ ನಮ್ಮ‌ಜೊತೆ ಚರ್ಚೆ ನಡೆಸಿದ್ದಾರೆ. ಪ್ರವಾಹದಿಂದ ಸುಮಾರು ಹತ್ತು ಸಾವಿರ ಕೋಟಿಗೂ ಹೆಚ್ಚು ಹಾನಿಯಾಗಿದೆ. ಹಾನಿಯ ಪ್ರಮಾಣ ಮೂವತ್ತು ಸಾವಿರ ಕೋಟಿ ದಾಟಬಹುದು. ಮೂರು ಸಾವಿರ ಕೋಟಿ ಪರಿಹಾರ ಬಿಡುಗಡೆಗೆ ಮನವಿ ಮಾಡಿದ್ದೇವೆ‌. ಹದಿನಾರರಂದು ದೆಹಲಿಗೆ ಬರಲು ಅಮಿತ್ ಶಾ ತಿಳಿಸಿದ್ದಾರೆ. ಅದೇ ದಿನ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ಎರಡು ದಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಲು ಸೂಚನೆ ನೀಡಿದ್ದಾರೆ‌‌. ರಾಜ್ಯದ ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಸರ್ಕಾರದಿಂದ ಸಂಪೂರ್ಣ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ನೆರೆ ಪರಿಹಾರಕ್ಕೆ ಸರ್ಕಾರಿ ನೌಕರರು ಒಂದು ದಿನದ ಸಂಬಳ ಕೊಡುವುದಾಗಿ ಹೇಳಿದ್ದಾರೆ‌. ಕೈಗಾರಿಕೋದ್ಯಮಿಗಳು ಸಹಾಯ ಮಾಡಿದರೆ ಪರಿಹಾರ ವಿತರಣೆಗೆ ಅನುಕೂಲವಾಗುತ್ತದೆ. ಜಾನುವಾರುಗಳ ಮೇವು ಪೂರೈಕೆಗೆ ಆದ್ಯತೆ ನೀಡುತ್ತೇವೆ. ಸಿದ್ದರಾಮಯ್ಯ ಅವರು ಒಂದು ಲಕ್ಷ ಕೋಟಿ ಹಾನಿ ಆಗಿದೆ ಎಂದು ಹೇಳಿದ್ದಾರೆ. ಅವರ ಹೇಳಿಕೆ ಸ್ವಾಗತಿಸುತ್ತೇನೆ. ಮೊದಲ ಹಂತದಲ್ಲಿ ಕೇಂದ್ರದಿಂದ ಮೂರು ಸಾವಿರ ಕೋಟಿ ಸಹಕಾರ ಕೇಳಿದ್ದೇವೆ. ಕೇಂದ್ರ ಸರ್ಕಾರಕ್ಕೆ ಪ್ರವಾಹದ ಗಂಭೀರತೆಯ ಅರಿವಾಗಿದೆ. ಹೆಚ್ಚಿನ ನೆರವು ಸಿಗುವ ನಿರೀಕ್ಷೆಯಿದೆ. ಕುಮಾರಸ್ವಾಮಿ ಆರೋಪಕ್ಕೆ ಉತ್ತರ ಕೊಡಲ್ಲಾ. ನಮ್ಮ‌ಕೆಲಸವೇ ಜನರಿಗೆ ಉತ್ತರ ಕೊಡುತ್ತೆ. ಪ್ರವಾಹ ಸಂತ್ರಸ್ತರ ನೆರವಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದೇವೆ‌ ಎಂದರು.

ವೈಮಾನಿಕ ಸಮೀಕ್ಷೆ ಬಳಿಕ ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳೊಂದಿಗೆ ಕೆಲ ಹೊತ್ತು ಸಭೆ ನಡೆಸಿದರು. ಬಳಿಕ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು.

Comments are closed.