ಕರಾವಳಿ

ಶಿರಸಿ: ಬೇಡ್ತಿ ನದಿಯ ಪ್ರವಾಹಕ್ಕೆ ನಲುಗಿದ ಯಲ್ಲಾಪುರ-ಅಂಕೋಲಾ

Pinterest LinkedIn Tumblr


ಶಿರಸಿ,(ಆ.11): ನೆಲಕ್ಕುರುಳಿರುವ ಮನೆಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಸೋಫಾ, ಟಿವಿ, ಮೊಬೈಲ್, ಬಟ್ಟೆಬರೆಗಳು, ರಸ್ತೆಗಳೇ ಕಾಣದಂತೆ ಮುಚ್ಚಿದ ಕೆಸರು. ಅಕ್ಷರಶಃ ಹರಿದು ಮೂರಾಬಟ್ಟೆಯಾಗಿರುವ ಈ ಮನಕಲಕುವ ಚಿತ್ರಣ ಕಂಡುಬಂದದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಅಂಕೋಲಾ ಗಡಿಯಲ್ಲಿರುವ ಬೇಡ್ತಿ ನದಿ ತಟದಲ್ಲಿ. ಹೌದು.. ಮಹಾಪ್ರವಾಹವೇನೋ ಬಂದು ಹೋಯಿತು. ಆದರೆ ಪ್ರವಾಹಕ್ಕೆ ಸಿಕ್ಕಿ ನಲುಗಿದವರ ಸಂಕಷ್ಟದ ಪ್ರವಾಹ ಇಮ್ಮಡಿಸಿದೆ.

ವಾರದಿಂದ ಸುರಿದ ರಣಭೀಕರ ಮಳೆಗೆ ಬೇಡ್ತಿ ನದಿ ಉಕ್ಕಿ ಹರಿದಿದೆ. ನದಿಯ ಆಪೋಷನಕ್ಕೆ ಸಿಲುಕಿದ ಹೆಗ್ಗಾರ್, ಕೈಗಾಡಿ, ಕೋನಾಳ, ಕಲ್ಲೇಶ್ವರ ಭಾಗ ಅಕ್ಷರಶಃ ನಜ್ಜು ಗುಜ್ಜಾಗಿದೆ. ಇಲ್ಲಿ 50ಕ್ಕೂ ಹೆಚ್ಚು ಮನೆಗಳಿದ್ದು, ಬಹುತೇಕ ಜಖಂಗೊಂಡಿವೆ. ಒಡವೆ, ಹಣ ಸೇರಿದಂತೆ ಮನೆಯ ಎಲ್ಲಾ ಸಾಮಾಗ್ರಿಗಳೂ ನೀರಲ್ಲಿ ಕೊಚ್ಚಿಹೋಗಿವೆ.

ಕೆಲವು ಕಡೆ ಮನೆ ಇತ್ತು ಎನ್ನುವ ಕುರುಹು ಸಹ ಸಿಗದಂತಾಗಿದೆ. ಮಧ್ಯರಾತ್ರಿ ಬಂದ ಪ್ರವಾಹಕ್ಕೆ ಸಿಲುಕಿದ ಇಲ್ಲಿನ ಜನ ಕಷ್ಟದಿಂದ ಕಾಲ ಕಳೆದಿದ್ದಾರೆ. ಜೀವ ಉಳಿದರೆ ಸಾಕೆಂದು ಮನೆ ಬಿಟ್ಟು ಬೆಟ್ಟದ ಮೇಲೆ ದಿನ ಕಳೆದಿದ್ದಾರೆ. ಸುತ್ತ ನೀರು ಆವರಿಸಿ ನಡುಗಡ್ಡೆ ಆಗಿದ್ದರಿಂದ ಯಾವುದೇ ಸಂಪರ್ಕ ಇಂದಿಗೂ ಇಲ್ಲ. ನೆಟ್​​ವರ್ಕ್​​​ ಸಹ ಇಲ್ಲದೆ ಬದುಕಿದ ಇಲ್ಲಿನವರ ಸಂಕಷ್ಟ ಹೇಳತೀರದು.

ಕೆಲವರು ತಾವು ಸಾಕಿದ ಜಾನುವಾರುಗಳಾದರೂ ಬದುಕಿಕೊಳ್ಳಲೆಂದು ಅವುಗಳನ್ನು ಬಿಟ್ಟಿದ್ದಾರೆ. ಈಗ ಅವು ಎಲ್ಲಿವೆ ಹೇಗಿವೆ ಎನ್ನುವುದೇ ಅವರಿಗೆ ತಿಳಿದಿಲ್ಲ. ಮೂರುದಿನಗಳ ಹಿಂದೆ ಮನೆ ಬಿಟ್ಟು ಹೋದವರು ಹೆಚ್ಚಿನವರು ಇನ್ನೂ ಮನೆಗೆ ಬಂದಿಲ್ಲ. ನೀರು ಇಳಿದಿದೆಯಾದರೂ ಗ್ರಾಮಕ್ಕೆ ಹೋಗುವ ರಸ್ತೆಗಳೆಲ್ಲಾ ಬಂದ್ ಆಗಿವೆ. ಮರಗಳು ಬಿದ್ದು, ಮಣ್ಣು ಕುಸಿದ ಪರಿಣಾಮ ಹೆಗ್ಗಾರ್ ಸೇರಿದಂತೆ ಇಲ್ಲಿನ ಕಳಸೆ, ಕೋನಾಳ, ರಾಮನಗುಳಿ, ಕಲ್ಲೇಶ್ವರ, ಕೈಗಾಡಿ, ದೊರಣಗಿರಿ ಭಾಗಕ್ಕೆ ರಸ್ತೆ ಸಂಪರ್ಕವೇ ಇಲ್ಲವಾಗಿದೆ.

ಪ್ರವಾಹದ ಪರಿಣಾಮ ಮನೆ, ರಸ್ತೆಗಳ ಮೇಲೆ ಮೊಣಕಾಲೆತ್ತರ ಹೂಳು ತುಂಬಿದೆ. ಇದರಿಂದ ಇನ್ನೂ ಜನ ಸಂಚಾರ ಇಲ್ಲಿ ಆರಂಭವಾಗಿಲ್ಲ. ರಸ್ತೆ ಸಂಪರ್ಕ ಇಲ್ಲದೆ ಗ್ರಾಮದ ಹಿರಿಯರೊಬ್ಬರ ಶವವನ್ನು ಮೂರು ದಿನಗಳಕಾಲ ಶಿರಸಿಯ ಆಸ್ಪತ್ರೆಯಲ್ಲೇ ಇಡಲಾಯಿತು. ವಿದ್ಯುತ್, ಪೋನ್ ಯಾವುದೇ ಸಂಪರ್ಕ ಇಲ್ಲದೆ ತತ್ತರಿಸಿ ಹೋದೆವು ಎ‌ನ್ನುತ್ತಾರೆ ಸ್ಥಳೀಯರು.

ಪ್ರವಾಹಕ್ಕೆ ತುತ್ತಾದ ಮನೆಗಳು ವಾಸಿಸಲೂ ಯೋಗ್ಯವಾಗಿಲ್ಲ. ಕೆಲ ಮನೆಗಳು ಪುನರ್ ನಿರ್ಮಾಣ ಆಗಬೇಕು. ಇನ್ನೂ ಹಲವು ಮನೆಗಳು, ಕೃಷಿ ಭೂಮಿಗಳು ಜಲಾವೃತವಾಗಿಯೇ ಇವೆ. ಸುಮಾರು 150 ಕೋಟಿಗೂ ಹೆಚ್ಚು ಹಾನಿ ಈ ಗ್ರಾಮಗಳಲ್ಲಿ ಸಂಭವಿಸಿದ್ದು, ಸರ್ಕಾರ ಇಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.

ದುರದೃಷ್ಟ ಎಂದರೆ ಹೆಗ್ಗಾರ್ ಭಾಗದಲ್ಲಿ ವಾಸಿಸಿರುವ 50ಕ್ಕೂ ಹೆಚ್ಚು ಕುಟುಂಬ ಈ ಮೊದಲು ಕಾಳಿ ಹಿನ್ನೀರಿನ ನಿರಾಶ್ರಿತರು. ಈಗ ಬೇಡ್ತಿ ನದಿಯೂ ಇವರನ್ನು ನಿರಾಶ್ರಿತರನ್ನಾಗಿಸಿರುವುದು ದುರಂತವೇ ಸರಿ. ಒಟ್ಟಿನಲ್ಲಿ ಬೇಡ್ತಿ ನೆರೆಗೆ ಸಿಲುಕಿದ ಕುಟುಂಬಗಳ ಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಾಗಿದ್ದು, ಇವರ ಕಷ್ಟಕ್ಕೆ ಸರ್ಕಾರ ಆದಷ್ಟು ಬೇಗ ಸ್ಪಂದಿಸಬೇಕಿದೆ.

Comments are closed.