ರಾಷ್ಟ್ರೀಯ

ಪಾಕ್ ನಂತರ ಸಂಜೋತಾ ಎಕ್ಸ್​ಪ್ರೆಸ್​ ರೈಲು ಸೇವೆ ರದ್ದುಗೊಳಿಸಿದ ಭಾರತ

Pinterest LinkedIn Tumblr


ನವದೆಹಲಿ: ಸಂಜೋತಾ ರೈಲು ಸೇವೆಯನ್ನು ಪಾಕಿಸ್ತಾನ ರದ್ದು ಮಾಡಿದ ಬಳಿಕ ಭಾರತದ ರೈಲ್ವೆ ಇಲಾಖೆ ಕೂಡ ಸಂಜೋತಾ ರೈಲು ಓಡಾಟವನ್ನು ರದ್ದುಗೊಳಿಸಿ ಭಾನುವಾರ ಆದೇಶ ಹೊರಡಿಸಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಗಡಿವರೆಗೆ ಚಲಿಸುತ್ತಿದ್ದ ಸಂಜೋತಾ ರೈಲು ಸೇವೆ ಅಂತ್ಯಗೊಂಡಿದೆ.

ಭಾರತದ ರೈಲು ದೆಹಲಿಯಿಂದ ಅಟ್ಟಾರಿ ಗಡಿ ತಲುಪಿ ಅಲ್ಲಿಂದ ವಾಪಸ್ಸಾಗುತ್ತಿತ್ತು. ಪಾಕಿಸ್ತಾನದ ರೈಲು ಲಾಹೋರ್​ನಿಂದ ಅಟ್ಟಾರಿ ನಡುವೆ ಚಲಿಸುತ್ತಿದ್ದು, ಪ್ರಯಾಣಿಕರು ಅಲ್ಲಿಯೇ ರೈಲುಗಳನ್ನು ಬದಲಿಸಿಕೊಳ್ಳುತ್ತಿದ್ದರು.

ಲಾಹೋರ್ ಮತ್ತು ಅತ್ತಾರಿ ನಡುವೆ ಸಂಚರಿಸುತ್ತಿದ್ದ ಸಂಜೋತಾ ಎಕ್ಸ್​ಪ್ರೆಸ್​ ರೈಲು 14607/14608 ಸೇವೆಯನ್ನು ಪಾಕಿಸ್ತಾನ ರದ್ದು ಮಾಡಿತ್ತು. ಈ ರೈಲು ಹಳಿ ಅತ್ತಾರಿಯಿಂದ ದೆಹಲಿಗೆ ಸಂಚರಿಸುತ್ತಿದ್ದ 14001/14002 ರೈಲಿಗೆ ಸಂಪರ್ಕ ಒದಗಿಸುತ್ತಿತ್ತು. ಇದೀಗ ಪಾಕಿಸ್ತಾನದ ನಿರ್ಧಾರದ ನಂತರ ಭಾರತ ಕೂಡ ದೆಹಲಿ ಮತ್ತು ಅಟ್ಟಾರಿ ನಡುವಿನ ರೈಲು ಓಡಾಟ ಸೇವೆಯನ್ನು ರದ್ದುಗೊಳಿಸಿದೆ ಎಂದು ಉತ್ತರ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ದೀಪಕ್​ ಕುಮಾರ್​ ತಿಳಿಸಿದ್ದಾರೆ.

ಭಾನುವಾರದ ಓಡಾಟಕ್ಕೆ ಇಬ್ಬರು ಪ್ರಯಾಣಿಕರು ಟಿಕೆಟ್ ಕಾಯ್ದಿರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರವನ್ನು ಮೊಟಕುಗೊಳಿಸಿದ ಕೇಂದ್ರ ಸರ್ಕಾರ ಈ ಎರಡು ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿದ ಬಳಿಕ ಸಂಜೋತಾ ಎಕ್ಸ್​ಪ್ರೆಸ್​ ರೈಲು ಸೇವೆಯನ್ನು ಪಾಕಿಸ್ತಾನ ರದ್ದುಗೊಳಿಸಿತ್ತು.

ಸಂಜೋತಾ ಎಕ್ಸ್​ಪ್ರೆಸ್​ ರೈಲನ್ನು ಪಾಕಿಸ್ತಾನ ಗುರುವಾರ ಬೆಳಗ್ಗೆ ವಾಘಾ ಗಡಿಯಲ್ಲಿ ತಡೆದು ನಿಲ್ಲಿಸಿತ್ತು. ಆ ಬಳಿಕ ರೈಲು ಶುಕ್ರವಾರ ಬೆಳಗ್ಗೆ ನಿಗದಿತ ವೇಳೆಗಿಂತ ನಾಲ್ಕೂವರೆ ಗಂಟೆ ಬೇಗನೇ ದೆಹಲಿಗೆ ವಾಪಸ್ಸಾಗಿತ್ತು.

ನಾನು ರೈಲ್ವೆ ಸಚಿವರಾಗಿರುವವರೆಗೆ ಪಾಕಿಸ್ತಾನ ಮತ್ತು ಭಾರತದ ನಡುವೆ ಯಾವುದೇ ರೈಲು ಸಂಚರಿಸುವುದಿಲ್ಲ ಎಂದು ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಹೇಳಿಕೆ ನೀಡಿದ್ದರು.

Comments are closed.