ಕ್ರೀಡೆ

26 ವರ್ಷದ ಹಿಂದೆ ಪಾಕ್ ದಿಗ್ಗಜ ಕ್ರಿಕೆಟರ್ ಜಾವೇದ್ ಮಿಯಾಂದಾದ್ ನಿರ್ಮಿಸಿದ್ದ ದಾಖಲೆ ಮುರಿದ ಕೊಹ್ಲಿ

Pinterest LinkedIn Tumblr


ಪೋರ್ಟ್ ಆಫ್ ಸ್ಪೇನ್: ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು 26 ವರ್ಷದ ಹಿಂದೆ ಪಾಕಿಸ್ತಾನದ ದಿಗ್ಗಜ ಕ್ರಿಕೆಟರ್ ಜಾವೇದ್ ಮಿಯಾಂದಾದ್ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

ವಿರಾಟ್ ಕೊಹ್ಲಿ ಅವರು ವೆಸ್ಟ್ ಇಂಡೀಸ್ ವಿರುದ್ಧ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಒಟ್ಟು 1930 ರನ್ ಗಳಿಸಿದ್ದ ಪಾಕ್ ತಂಡದ ಮಾಜಿ ಆಟಗಾರ ಜಾವೇದ್ ಮಿಯಾಂದರ್ ಅವರ ಹೆಸರಿನಲ್ಲಿ ಈ ದಾಖಲೆ ಇತ್ತು. ಆದರೆ ವೆಸ್ಟ್ ಇಂಡೀಸ್ ವಿರುದ್ಧ ಸಾಗುತ್ತಿರುವ ಏಕದಿನ ಸರಣಿಯ ದ್ವಿತೀಯ ಪಂದ್ಯದಲ್ಲಿ 19 ರನ್ ಗಳಿಸಿದ ಸಂರ್ಭದಲ್ಲಿ ಕೊಹ್ಲಿ ಅವರು ಮಿಯಾಂದರ್ ದಾಖಲೆ ಪುಡಿಗಟ್ಟಿದರು.

ಜಾವೇದ್ 1930 ರನ್ ಗಳಿಸಲು 64 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದು, ಕೊಹ್ಲಿ 34ನೇ ಇನ್ನಿಂಗ್ಸ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಇದುವರೆಗೂ ವಿಂಡೀಸ್ ವಿರುದ್ಧ ಕೊಹ್ಲಿ 8 ಶತಕ, 10 ಅರ್ಧ ಶತಕಗಳನ್ನ ಸಿಡಿಸಿದ್ದಾರೆ. ಆದರೆ ಜಾವೇದ್ ಕೇವಲ 1 ಶತಕ ಮಾತ್ರ ಸಿಡಿಸಿದ್ದರು. 1993ರಲ್ಲಿ ಜಾವೇದ್ ತಮ್ಮ ಅಂತಿಮ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.

ಏಕದಿನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್‍ಗಳಲ್ಲಿ ವಿರಾಟ್ ಕೊಹ್ಲಿ 2032* ರನ್ ಗಳಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಉಳಿದಂತೆ ಜಾವೇದ್ ಮಿಯಾಂದಾದ್ 1930 ರನ್ ಹಾಗೂ ಮಾರ್ಕ್ ವಾ 1708 ರನ್ ದಾಖಲಿಸಿದ್ದಾರೆ. ಜಾಕ್ ಕ್ಯಾಲಿಸ್ 1666 ರನ್, ರಮೀಜ್ ರಾಜಾ 1624 ರನ್ ಹಾಗೂ ಸಚಿನ್ ತೆಂಡೂಲ್ಕರ್ 1573 ರನ್ ಗಳಿಸಿದ್ದಾರೆ.

ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಹಿರಿಮೆಗೆ ಪಾತ್ರರಾಗಿದ್ದಾರೆ. ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್ ಮನ್ ಸಾಧನೆಯನ್ನು ವಿರಾಟ್ ಮಾಡಿದ್ದಾರೆ. ಈ ಮೂಲಕ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಮುರಿದಿದ್ದಾರೆ.

ವೀಂಡಿಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 120 ರನ್ (125 ಎಸೆತ, 14 ಬೌಂಡರಿ, 1 ಸಿಕ್ಸ್) ಗಳಿಸುವ ಮೂಲಕ ವಿಶ್ವ ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ವಿರಾಟ್ ಕೊಹ್ಲಿ ಎಂಟನೇ ಸ್ಥಾನಕ್ಕೆ ನೆಗೆದಿದ್ದಾರೆ. 238ನೇ ಪಂದ್ಯ ಆಡುತ್ತಿರುವ ಕೊಹ್ಲಿ 229ನೇ ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದಾರೆ. ಮಾಜಿ ನಾಯಕ ಗಂಗೂಲಿ ಏಕದಿನದಲ್ಲಿ 311 ಪಂದ್ಯಗಳ 300 ಇನ್ನಿಂಗ್ಸ್ ಗಳಲ್ಲಿ 11,363 ರನ್ ಗಳಿಸಿದ್ದರು. ಅಗ್ರಸ್ಥಾನದಲ್ಲಿರುವ ಸಚಿನ್ 463 ಪಂದ್ಯಗಳ 452ನೇ ಇನ್ನಿಂಗ್ಸ್ ನಲ್ಲಿ 18,426 ರನ್ ಪೇರಿಸಿದ್ದಾರೆ.

ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ 0 ಅಂತರದಲ್ಲಿ ಜಯ ಪಡೆದ ಕೊಹ್ಲಿ ಬಾಯ್ಸ್, ಏಕದಿನ ಟೂರ್ನಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೆ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.

Comments are closed.