ಕರ್ನಾಟಕ

ಮೋದಿ ಈ ಹಿಂದೆಯೂ ಕಪ್ಪು ಹಣ ತರದಿದ್ದರೆ ಸುಟ್ಟುಬಿಡಿ ಅಂದಿದ್ರು; ದಿನೇಶ್ ಗುಂಡೂರಾವ್

Pinterest LinkedIn Tumblr


ಬೆಂಗಳೂರು (ಆಗಸ್ಟ್.09); ಪ್ರಧಾನಿ ನರೇಂದ್ರ ಮೋದಿ ಈ ಹಿಂದೆಯೂ ಆಗಾಗ್ಗೆ ಪ್ರೈಂ ಟೈಂನಲ್ಲಿ ಬಂದು ಭಾಷಣ ಮಾಡುತ್ತಿದ್ದರು. ವಿದೇಶದ ಕಪ್ಪು ಹಣ ತರದಿದ್ದರೆ ನನ್ನನ್ನು ಜೀವಂತ ಸುಟ್ಟುಬಿಡಿ ಅಂದಿದ್ದರು. ಆದರೆ ಹಳೆ ನೋಟುಗಳು ಕಸದ ಬುಟ್ಟಿ ಸೇರಿದ್ದರ ಹೊರತಾಗಿ ಬೇರೇನೂ ಉಪಯೋಗವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗುರುವಾರದ ಮೋದಿ ಭಾಷಣವನ್ನು ಲೇವಡಿ ಮಾಡಿದ್ದಾರೆ.

ಕಾಶ್ಮೀರಕ್ಕೆ ವಿಶೇಷ ಸವಲತ್ತು ನೀಡುತ್ತಿದ್ದ ಕಲಂ 370 ರದ್ಧತಿ ಕುರಿತು ಗುರುವಾರ ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ದೂರದರ್ಶನದ ಮೂಲಕ ಭಾಷಣ ಮಾಡಿದ್ದರು. ಈ ವೇಳೆ ತಾವು ಇಂತಹ ಕಠಿಣ ನಿರ್ಧಾರ ಏಕೆ ತೆಗೆದುಕೊಳ್ಳಬೇಕಾಯಿತು ಎಂಬ ವಿವರಣೆಯನ್ನೂ ನೀಡಿದ್ದರು. ಆದರೆ, ಮೋದಿಯವರ ಈ ಭಾಷಣವನ್ನು ಹೀಯಾಳಿಸಿರುವ ಮಾಜಿ ಸಚಿವ ದಿನೇಶ್ ಗುಂಡೂರಾವ್,

“ಈ ಹಿಂದೆಯೂ ದೂರದರ್ಶನದ ಪ್ರೈಂ ಟೈಂನಲ್ಲಿ ಭಾಷಣ ಮಾಡಿದ್ದ ನರೇಂದ್ರ ಮೋದಿ, ವಿದೇಶದಿಂದ ಭಾರತದ ಕಪ್ಪು ಹಣ ವಾಪಸ್ ತರದೇ ಇದ್ದಲ್ಲಿ ನನ್ನನ್ನು ಜೀವ ಸಹಿತ ಸುಟ್ಟುಬಿಡಿ ಎಂದಿದ್ದರು. ಆದರೆ, ವಿದೇಶದಿಂದ ಕಪ್ಪು ಹಣ ಬರಲಿಲ್ಲ. ಬದಲಿಗೆ ಸಾಮಾನ್ಯ ಜನರ ಹಳೆ ನೋಟುಗಳು ಕಸದ ಬುಟ್ಟಿ ಸೇರಿದವು. ಅಲ್ಲದೆ, ನೋಟು ಅಮಾನ್ಯೀಕರಣದಿಂದ ದೇಶದಲ್ಲಿ ಕಪ್ಪು ಹಣವನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಮೋದಿ ಹೇಳುವುದೇ ನಿಜವಾದರೆ, ಇಂದು ಯಡಿಯೂರಪ್ಪ ಅವರ ಆಪರೇಷನ್ ಕಮಲಕ್ಕೆ ಕೋಟಿ ಕೋಟಿ ಹಣ ಎಲ್ಲಿಂದ ಬಂತು?” ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನೂ ಜಮ್ಮು-ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ ಅವರು, “ಭಾರತದಿಂದ ಪಾಕಿಸ್ತಾನ ಬೇರೆಯಾಗಬೇಕು ಅಂತ ಹೋರಾಟ ಮಾಡಿದ್ದೆ ಹಿಂದೂ ಮಹಾಸಭಾ, ಪಾಕ್ ಭಾಗದಲ್ಲಿರುವ ಸಿಂಧ್ ರಾಜ್ಯದಲ್ಲಿರೋ ಹಿಂದೂ ಮಹಾಸಭಾದವರು ನಾವು ಭಾರತದ ಜೊತೆ ಸೇರಲ್ಲ ಅಂತಾ ಹೇಳಿದ್ದರು. ಆದ್ರೆ, ಷೇಕ್ ಅಬ್ದುಲ್ಲಾ ಸೇರಿ ಇತರೆ ನಾಯಕರು ಕಾಶ್ಮೀರ ಭಾರತದಲ್ಲೇ ಇರಲಿ ಎಂದು ಪ್ರತಿಪಾದಿಸಿದ್ದರು. ಕೊನೆಗೆ ಕಾಶ್ಮೀರ ಭಾರತದ ಜೊತೆ ಬಂದರು. ಸಿಂಧ್ ಮಾತ್ರ ಈಗಲೂ ಪಾಕಿಸ್ತಾನದಲ್ಲೇ ಇದೆ .

ಇನ್ನೂ ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿಯವರು ಹಿಂದೂ ಮಹಾಸಭಾದವರು ಯಾವ ತ್ಯಾಗವನ್ನೂ ಮಾಡಿಲ್ಲ, ಇವರದ್ದೇನೂ ಕೊಡುಗೆ ಇಲ್ಲ. ಅದಕ್ಕಾಗಿಯೇ ಯಾರಾದ್ರೂ ಬೇಕಲ್ಲ ಎಂದು ಬಿಜೆಪಿಯವರು ವಲ್ಲಭಬಾಯಿ ಪಟೇಲರನ್ನು, ನೇತಾಜಿಯನ್ನು, ಭಗತ್​ ಸಿಂಗ್ ಅವರನ್ನು ಹಿಡಿದುಕೊಂಡಿದ್ದಾರೆ. ಆದರೆ, ಬಿಜೆಪಿಯವರಿಗೂ ಭಗತ್​ ಸಿಂಗ್, ಪಟೇಲರಿಗೂ ಏನು ಸಂಬಂಧ?” ಎಂದು ಗುಂಡೂರಾವ್ ಹೀಯಾಳಿಸಿದ್ದಾರೆ.

Comments are closed.