ರಾಷ್ಟ್ರೀಯ

ನೆರೆ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ದೋಣಿ ಪಲ್ಟಿ: 9 ಸಾವು; ನಾಲ್ವರು ಇನ್ನೂ ನಾಪತ್ತೆ

Pinterest LinkedIn Tumblr


ಹೊಸದಿಲ್ಲಿ: ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ಗುಜರಾತ್‌ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮಳೆ ಪ್ರಕೋಪ ಮುಂದುವರಿದಿದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ದೋಣಿ ಮಗುಚಿ 9 ಮಂದಿ ಅಸುನೀಗಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ. ಸಾಂಗ್ಲಿ ಜಿಲ್ಲೆಯ ಬ್ರಮನಾಲ್‌ ಎಂಬಲ್ಲಿ ಈ ದುರಂತ ನಡೆದಿದೆ.

ಸಂತ್ರಸ್ತರ ರಕ್ಷಣೆಗೆಂದು ತೆರಳಿದ್ದಾಗ ಬೋಟ್‌ ಏಕಾಏಕಿ ಪಲ್ಟಿ ಆಗಿದೆ. ದೋಣಿಯಲ್ಲಿ 30- 32ರಿಂದ ಮಂದಿ ಪ್ರಯಾಣಿಸುತ್ತಿದ್ದರು. 15 ಮಂದಿ ಈಜಿ ದಡ ಸೇರಿದ್ದಾರೆ. ಸಿಎಂ ದೇವೇಂದ್ರ ಫ‌ಡ್ನವೀಸ್‌ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ನೀರು ಬಿಡುಗಡೆ: ಆಲಮಟ್ಟಿ ಜಲಾಶಯದಲ್ಲಿ ನೀರು ತುಂಬಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರು ಬಿಡುಗಡೆ ಮಾಡುವ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜತೆಗೆ ಮಹಾರಾಷ್ಟ್ರ ಸಿಎಂ ಫ‌ಡ್ನವಿಸ್‌ ಮಾತನಾಡಿದ್ದಾರೆ. ಹೀಗಾಗಿ, 5 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗುತ್ತದೆ. ಕರ್ನಾಟಕ ಕೈಗೊಳ್ಳಲಿರುವ ಈ ಕ್ರಮದಿಂದ ಪಶ್ಚಿಮ ಮಹಾರಾಷ್ಟ್ರದ ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಲ್ಲಿ ಕೊಂಚ ಸುಧಾರಣೆಯಾಗಲಿದೆ.

ಗೋವಾದಲ್ಲಿ ಭಾರೀ ಮಳೆ: ಗೋವಾದಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿ ರುವಂತೆಯೇ 4 ತಾಲೂಕುಗಳಲ್ಲಿರುವ 150 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ. ಛತ್ತೀಸ್‌ಗಢದಲ್ಲಿ ಮಳೆ ಸಂಬಂಧಿ ದುರಂತದಲ್ಲಿ ಇಬ್ಬರು ಅಸುನೀಗಿ, ಐವರಿಗೆ ಗಾಯಗಳಾಗಿವೆ.

ಬರುವುದು ಬೇಡ ಎಂದರು: ಪ್ರವಾಹ ಪೀಡಿತ ವಯನಾಡ್‌ಗೆ ತೆರಳಬೇಕು ಎಂಬ ಆಶೆ ಇದ್ದರೂ, ತಮ್ಮ ಭೇಟಿಯಿಂದ ಪರಿಹಾರ ಕಾರ್ಯಕ್ಕೆ ಅಡಚಣೆ ಉಂಟಾಗಬಹುದು ಎಂದು ಡಿಸಿ ಸಲಹೆ ಮಾಡಿದ್ದರಿಂದ ಅಲ್ಲಿಗೆ ತೆರಳುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ದುರಂತ ಉಂಟಾಗಿರುವ ರಾಜ್ಯಗಳಲ್ಲಿ ಪರಿಸ್ಥಿತಿ ವಿಷಮಿಸಿದೆ. ಹೀಗಾಗಿ, ನೊಂದವರಿಗೆ ನೆರವು ನೀಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

Comments are closed.