ಕರ್ನಾಟಕ

ಸಚಿವ ಸಂಪುಟ ರಚನೆ ಮತ್ತೆ ಮುಂದಕ್ಕೆ : ದೆಹಲಿಯಿಂದ ವಾಪಸ್ಸಾದ ಸಿಎಂ ಯಡಿಯೂರಪ್ಪ

Pinterest LinkedIn Tumblr

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಪಕ್ಷದ ವರಿಷ್ಠರ ಒಪ್ಪಿಗೆ ಪಡೆಯಲು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬರಿಗೈಯಲ್ಲಿ ವಾಪಾಸಾಗಿದ್ದು, ನಾಳೆಯಿಂದ ಎರಡು ದಿನಗಳ ಕಾಲ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ರಾಜ್ಯಕ್ಕೆ ಆಗಮಿಸಿ ನೇರವಾಗಿ ಪ್ರವಾಹ ಪೀಡಿತ ಜಿಲ್ಲೆಯಲ್ಲಿ ಪ್ರವಾಸಕೈಗೊಂಡು ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಬಹುನಿರೀಕ್ಷಿತ ಸಚಿವ ಸಂಪುಟ ರಚನೆ ಮತ್ತೆ ಮುಂದಕ್ಕೆ ಹೋಗಿದೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸಲು‌ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದ್ದು, ಮುಂದಿನ ವಾರ ಮತ್ತೆ ದೆಹಲಿಗೆ ತೆರಳಲಿರುವ ಯಡಿಯೂರಪ್ಪ ಸಂಪುಟ ರಚನೆ ಕುರಿತು ವರಿಷ್ಠರ ಜತೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಷ್ಮಾ ಸ್ವರಾಜ್​ ನಿಧನ ಮತ್ತು ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದು, ಸಂಪುಟ ರಚನೆ ಕಸರತ್ತು ಇನ್ನೊಂದು ವಾರ ಮುಂದೂಡುವ ಸಾಧ್ಯತೆಗಳು ಹೆಚ್ಚಾಗಿವೆ.

ನಾಳೆ 9.45ಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು ರಸ್ತೆ ಮಾರ್ಗವಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಅಥಣಿ, ರಾಯಬಾಗ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಾಧ್ಯತೆಗಳಿವೆ.

ಇಂದು ರಾತ್ರಿ 9.30ಕ್ಕೆ ದೆಹಲಿಯಿಂದ ತೆರಳಬೇಕಿದ್ದ ಯಡಿಯೂರಪ್ಪ ಮುಂಚಿತವಾಗಿಯೇ ಇಂದು ಮಧ‍್ಯಾಹ್ನ 1.30ಕ್ಕೆ ಹೊರಟಿದ್ದಾರೆ. ಕಡೆಗೂ ಸಚಿವ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ಪಡೆಯಲು ಅವರು ವಿಫಲರಾಗಿದ್ದಾರೆ ಎನ್ನಲಾಗಿದೆ.

ದೆಹಲಿಯಲ್ಲಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಕೂಡಲೇ ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿ ಎಂದು ಪಕ್ಷದ ಅಧ್ಯಕ್ಷ ಅಮಿತ್ ಶಾ ದೂರವಾಣಿ ಕರೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೊರಟಿದ್ದೇನೆ. ಎರಡು ದಿನಗಳ ಕಾಲ ಪ್ರವಾಹ ಪೀಡಿತ ಪ್ರದೇಶ ವೀಕ್ಷಣೆ ಮಾಡಲಿದ್ದೇನೆ. ಬಳಿಕ ದೆಹಲಿಗೆ ಆಗಮಿಸಲು ಹೇಳಿದ್ದಾರೆ ಎಂದು ಹೇಳಿದರು. ಈ ಮೂಲಕ ಸಚಿವ ಸಂಪುಟ ರಚನೆ ಸದ್ಯಕ್ಕಿಲ್ಲ ಎಂಬುದು ಸ್ಪಷ್ಟವಾಗಿದೆ.

ಈ ಮಧ್ಯೆ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ರಾಜ್ಯದಲ್ಲಿ ಅತಿವೃಷ್ಟಿಯಿಂದ ಜನ ಸಂಕಷ್ಟದಲ್ಲಿದ್ದರೆ ಮುಖ್ಯಮಂತ್ರಿ ದೆಹಲಿ ಪ್ರವಾಸದಲ್ಲಿದ್ದಾರೆ. ಸಚಿವ ಸಂಪುಟ ರಚನೆಗೆ ಇನ್ನೆಷ್ಟು ದಿನ ಬೇಕು? ಎಂದು ಉಭಯ ಪಕ್ಷಗಳ ನಾಯಕರು ಟ್ವೀಟ್ ಮೂಲಕ ಮುಖ್ಯಮಂತ್ರಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಯಡಿಯೂರಪ್ಪ ರಾಜ್ಯಕ್ಕೆ ಹಿಂದಿರುಗಿದ್ದಾರೆ ಎನ್ನಲಾಗಿದೆ.

Comments are closed.