ಮುಂಬೈ: ಟೀಂ ಇಂಡಿಯಾದ ಮಹಾನ್ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೋಟಿಸ್ ನೀಡಿದ್ದು ಇದಕ್ಕೆ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತು ಹರ್ಭಜನ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಫ್ಯಾಷನ್… ಸ್ವಹಿತಾಸಕ್ತಿ ಸಂಘರ್ಷ…ಸುದ್ದಿಯಲ್ಲಿ ಉಳಿಯಲು ಉತ್ತಮ ಮಾರ್ಗ… ಡು… ದ್ರಾವಿಡ್ ರಂತವರೂ ಬಿಸಿಸಿಐನಿಂದ ಸ್ವಹಿತಾಸಕ್ತಿ ಸಂಘರ್ಷ ನೋಟಿಸ್ ಪಡೆಯುತ್ತಾರೆ ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಹರ್ಭಜನ್ ಸಿಂಗ್ ಸಹ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ನಿಜವಾಗಿಯೂ??? ಇದು ಎಲ್ಲಿಗೆ ಹೋಗುತ್ತಿದೆ ಎಂದು ತಿಳಿಯುತ್ತಿಲ್ಲ…ಇಂತರ ಅದ್ಭುತ ವ್ಯಕ್ತಿಯನ್ನು ಭಾರತೀಯ ಕ್ರಿಕೆಟ್ ಪಡೆಯಲು ಸಾಧ್ಯವಿಲ್ಲ. ಇಂತಹ ದಂತಕಥೆಗಳಿಗೆ ನೋಟಿಸ್ ಕಳುಹಿಸುವುದು ಅವರನ್ನು ಅವಮಾನಿಸಿದಂತೆ.. ಕ್ರಿಕೆಟ್ ಉತ್ತಮವಾಗಲು ಇಂತಹವರ ಸೇವೆ ಬೇಕು. . ಹೌದು ದೇವರೆ ಭಾರತೀಯ ಕ್ರಿಕೆಟ್ ಗೆ ಸಹಾಯ ಮಾಡು ಎಂದು ಟ್ವೀಟಿಸಿದ್ದಾರೆ.
ಬಿಸಿಸಿಐ ರಾಹುಲ್ ದ್ರಾವಿಡ್ ಅವರಿಗೆ ಸ್ವಹಿತಾಸಕ್ತಿ ಸಂಘರ್ಷ ಆರೋಪದ ಹಿನ್ನೆಲೆಯಲ್ಲಿ ನೋಟಿಸ್ ನೀಡಿದೆ. ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಸದಸ್ಯ ಸಂಜೀವ್ ಗುಪ್ತಾ ರಾಹುಲ್ ದ್ರಾವಿಡ್ ವಿರುದ್ಧ ದೂರು ನೀಡಿದ್ದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಸಿಎ) ನಿರ್ದೇಶಕರಾಗಿ ರಾಹುಲ್ ದ್ರಾವಿಡ್ ಆಯ್ಕೆಯಾಗಿದ್ದಾರೆ. ಇನ್ನು ಇಂಡಿಯಾ ಸಿಮೆಂಟ್ ಗ್ರೂಪ್ ನಲ್ಲಿ ದ್ರಾವಿಡ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಬಿಸಿಸಿಐ ಸ್ವಹಿತಾಸಕ್ತಿ ನಿಮಯಕ್ಕೆ ವಿರುದ್ಧವಾಗಿದೆ ಎಂದು ಸಂಜೀವ್ ದೂರಿದ್ದರು.
ಈ ಸಂಬಂಧ ಬಿಸಿಸಿಐ ರಾಹುಲ್ ದ್ರಾವಿಡ್ ಅವರಿಗೆ ನೋಟಿಸ್ ನೀಡಿದ್ದು 2 ವಾರದಲ್ಲಿ ಉತ್ತರಿಸುವಂತೆ ಸೂಚಿಸಿದೆ. ದ್ರಾವಿಡ್ ಉತ್ತರಿಸಿದ ಬಳಿಕ ಪ್ರಕರಣವನ್ನು ಪರಿಶೀಲಿಸಲಿದ್ದೇವೆ ಎಂದು ಬಿಸಿಸಿಐ ಹೇಳಿದೆ. ಈ ಹಿಂದೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ವಿರುದ್ದ ದೂರುದಾರ ಸಂಜೀವ್ ಗುಪ್ತಾ ಸ್ವಹಿತಾಸಕ್ತಿ ಸಂಘರ್ಷದ ಆರೋಪ ಮಾಡಿದ್ದರು.
Comments are closed.