ರಾಷ್ಟ್ರೀಯ

ನಾನು ಸುಷ್ಮಾ ಸ್ವರಾಜ್​ ಅವರೊಂದಿಗಿನ ಟ್ವಿಟರ್​ ಕಲಹವನ್ನು ಮಿಸ್​ ಮಾಡಿಕೊಳ್ಳುತ್ತೇನೆ; ದುಃಖ ವ್ಯಕ್ತಪಡಿಸಿದ ಪಾಕ್​ ಸಚಿವ

Pinterest LinkedIn Tumblr

ನವದೆಹಲಿ: ಮಾಜಿ ಸಚಿವೆ ಸುಷ್ಮಾ ಸ್ವರಾಜ್​ ನಿಧನಕ್ಕೆ ವಿವಿಧ ದೇಶಗಳ ಗಣ್ಯರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಗೇ ಪಾಕಿಸ್ತಾನ ಸಚಿವರೋರ್ವರು ಟ್ವೀಟ್​ ಮಾಡುವ ಮೂಲಕ ನಾವು ಸುಷ್ಮಾ ಸ್ವರಾಜ್​ ಅವರನ್ನು ತುಂಬ ಮಿಸ್​ ಮಾಡಿಕೊಳ್ಳುತ್ತೇವೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಫವೇದ್​ ಹುಸ್ಸೇನ್​ ಅವರು ಟ್ವೀಟ್​ ಮಾಡಿದ್ದು, ನಾನು ಸುಷ್ಮಾ ಸ್ವರಾಜ್​ ಅವರೊಂದಿಗಿನ ಟ್ವಿಟರ್​ ಕಲಹವನ್ನು ಮಿಸ್​ ಮಾಡಿಕೊಳ್ಳುತ್ತೇನೆ. ಅವರು ತಮ್ಮ ಹಕ್ಕುಗಳಿಗಾಗಿ ಬದ್ಧರಾಗಿ ಹೋರಾಟ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಮಾರ್ಚ್​ನಲ್ಲಿ ಪಾಕಿಸ್ತಾನದಲ್ಲಿ ಇಬ್ಬರು ಹಿಂದು ಹುಡುಗಿಯರ ಅಪಹರಣವಾಗಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಫವೇದ್​ ಹುಸ್ಸೇನ್​ ಹಾಗೂ ಸುಷ್ಮಾ ಸ್ವರಾಜ್​ ನಡುವೆ ಟ್ವಿಟರ್​ನಲ್ಲಿ ವಾದ-ಪ್ರತಿವಾದ, ಕಲಹ ನಡೆದಿತ್ತು.

ಸಿಂಧ್​ನಲ್ಲಿ ಇಬ್ಬರು ಹಿಂದು ಹುಡುಗಿಯರನ್ನು ಅಪಹರಿಸಿ ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ ಎಂದು ಆರೋಪಿಸಿ ಅಲ್ಲಿನ ಹಿಂದು ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆ ಮಾಧ್ಯಮ ವರದಿ ಉಲ್ಲೇಖಿಸಿ ಟ್ವೀಟ್​ ಮಾಡಿದ್ದ ಸುಷ್ಮಾ, ಘಟನೆಯ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನರ್​ಗೆ ಹೇಳಿದ್ದೇನೆ ಎಂದಿದ್ದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಪಾಕ್​ ಸಚಿವ ಫವೇದ್​ ಹುಸ್ಸೇನ್​, ಮೇಡಂ, ಇದು ಪಾಕಿಸ್ತಾನದ ಆಂತರಿಕ ವಿಚಾರ. ಅಲ್ಪಸಂಖ್ಯಾತರನ್ನು ಅಧೀನಕ್ಕೆ ತೆಗೆದುಕೊಂಡು ಅವರಿಗೆ ಕಿರುಕುಳ ನೀಡಲು ನರೇಂದ್ರ ಮೋದಿ ಸರ್ಕಾರವಲ್ಲ, ಇಮ್ರಾನ್​ ಖಾನ್​ ಅವರ ಹೊಸ ಪಾಕಿಸ್ತಾನ. ನಮ್ಮ ಧ್ವಜದಲ್ಲಿರುವ ಬಿಳಿಯ ಬಣ್ಣ ಪ್ರತಿನಿಧಿಸುವಂತೆ ಶಾಂತಿಯನ್ನೇ ಅನುಸರಿಸುತ್ತೇವೆ. ನಿಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತರಿಗೆ ತೊಂದರೆಯಾದಾಗಲೂ ಹೀಗೆ ವರ್ತಿಸುತ್ತೀರಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದರು. ಹೀಗೆ ಅವರಿಬ್ಬರ ನಡುವೆ ಟ್ವಿಟರ್ ವಾರ್​ ನಡೆದಿತ್ತು. ಈಗ ಅದನ್ನೆಲ್ಲವನ್ನೂ ಪಾಕ್ ಸಚಿವ ನೆನಪಿಸಿಕೊಂಡಿದ್ದಾರೆ.

Comments are closed.