ರಾಷ್ಟ್ರೀಯ

ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌ ಅಂತ್ಯಕ್ರಿಯೆ

Pinterest LinkedIn Tumblr

ನವದೆಹಲಿ: ಮಂಗಳವಾರ ರಾತ್ರಿ ನಿಧನರಾದ ಕೇಂದ್ರದ ಮಾಜಿ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್(67) ಅವರ ಅಂತ್ಯ ಸಂಸ್ಕಾರವನ್ನು ಹಿಂದು ಸಂಪ್ರದಾಯದಂತೆ ದಯಾನಂದ್ ಘಾಟ್ ಮುಕ್ತಿಧಾಮ ವಿದ್ಯುತ್ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಸುಷ್ಮಾ ಸ್ವರಾಜ್‌ ಅವರ ಪುತ್ರಿ ಬನ್ಸುರಿ ಸ್ವರಾಜ್‌ ಅವರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ಸುಷ್ಮಾ ಸ್ವರಾಜ್​ ಅವರಿಗೆ ತ್ರಿವರ್ಣ ಧ್ವಜ ಹೊದಿಸುವ ಮೂಲಕ ಗೌರವಿಸಲಾಯಿತು.

ಇದಕ್ಕೂ ಮೊದಲು ಬಿಜೆಪಿ ಮುಖ್ಯ ಕಚೇರಿಯಲ್ಲಿ ಸುಷ್ಮಾ ಸ್ವರಾಜ್‌ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಲೋಧಿ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕ ಎಲ್‌ ಕೆ ಅಡ್ವಾನಿ, ಗೃಹ ಸಚಿವ ಅಮಿತ್‌ ಷಾ, ವೆಂಕಯ್ಯ ನಾಯ್ಡು, ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಸೇರಿದಂತೆ ಹಲವು ಬಿಜೆಪಿ ನಾಯಕರು ಅಂತ್ಯ ಸಂಸ್ಕಾರದ ವೇಳೆ ಉಪಸ್ಥಿತರಿದ್ದರು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸದ ರಾಹುಲ್‌ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಕೂಡ ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ರಾತ್ರಿ ತೀವ್ರ ಹೃದಯಾಘಾತಕ್ಕೊಳಗಾಗಿದ್ದರು. ರಾತ್ರಿ 10.15ಕ್ಕೆ ಏಮ್ಸ್‌ನ ಆಸ್ಪತ್ರೆಗೆ ಕರೆತಂದು ತುರ್ತು ನಿಗಾಘಟಕಕ್ಕೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ 10.40ರ ಸುಮಾರಿಗೆ ಮೃತಪಟ್ಟರು.

ಟಿಬೇಟ್​ ಗುರು ದಲಾಯಿ ಲಾಮ, ಆರ್​ಎಸ್ಎಸ್​, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು, ಗಣ್ಯರು ಸುಷ್ಮಾ ಸ್ವರಾಜ್​​ ಅವರಿಗೆ ಸಂತಾಪ ಸೂಚಿಸಿದ್ದಾರೆ.

ಬಿಜೆಪಿ ನಾಯಕರಾದ ನಿತಿನ್ ಗಡ್ಕರಿ, ಹರ್ಷವರ್ಧನ್, ರಾಜನಾಥ್ ಸಿಂಗ್, ಸ್ಮೃತಿ ಇರಾನಿ ಸೇರಿ ಹಲವು ನಾಯಕರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಸುಷ್ಮಾ ಅವರು ಮೋದಿ -1 ಸರ್ಕಾರದಲ್ಲಿ ವಿದೇಶಾಂಗ ಸಚಿವೆಯಾಗಿ ಗಮನ ಸೆಳೆದಿದ್ದರು.

Comments are closed.