ಕರ್ನಾಟಕ

ಸಿದ್ಧಾರ್ಥ್ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್

Pinterest LinkedIn Tumblr


ಬೆಂಗಳೂರು (ಅ.2): ಕೆಫೆ ಕಾಫಿ ಡೇ ಮುಖ್ಯಸ್ಥ ಹಾಗೂ ಹಿರಿಯ ರಾಜಕಾರಣಿ ಎಸ್​ಎಂ ಕೃಷ್ಣ ಅಳಿಯ ಸಿದ್ಧಾರ್ಥ್​ ಸಾವಿನ ಪ್ರಕರಣದ ಸುತ್ತ ಅನುಮಾನದ ಹುತ್ತಗಳೇ ಬೆಳೆದಿವೆ. ಕೆಲವರು ಇದನ್ನು ಆತ್ಮಹತ್ಯೆ ಎಂದು ಬಣ್ಣಿಸಿದರೆ, ಇನ್ನೂ ಕೆಲವರು ಇದು ಕೊಲೆ ಎಂದು ಶಂಕಿಸಿದ್ದಾರೆ. ಈ ಮಧ್ಯೆ ಈ ಪ್ರಕರಣದಲ್ಲಿ ಹೊಸ ಹೊಸ ತಿರುವುಗಳು ಎದುರಾಗುತ್ತಿವೆ.

ಸೋಮವಾರ ಸಂಜೆ ಸಕಲೇಶ್‌ಪುರದಿಂದ ಮಂಗಳೂರು‌ ಬರುವ ದಾರಿ ಮಧ್ಯೆ ಸಿದ್ಧಾರ್ಥ್​ ಕಾರಿನಲ್ಲೇ ಕುಳಿತು‌ ಸುಮಾರು‌ ಅರ್ಧ ಗಂಟೆ ಮಾತುಕತೆ ನಡೆಸಿದ್ದರು. ಇಂಗ್ಲಿಷ್‌ನಲ್ಲಿ ಸಂಭಾಷಣೆ ನಡೆಸಿದ್ದರಿಂದ ಸಿದ್ಧಾರ್ಥ್​ ಏನು ಮಾತನಾಡಿದ್ದಾರೆ ಎಂಬುದು ಕಾರು ಚಾಲಕನಿಗೆ ಅರ್ಥವಾಗಿಲ್ಲ. ಸಿದ್ಧಾರ್ಥ್​​ ಇಂಗ್ಲಿಷ್​ನಲ್ಲಿ ಮಾತನಾಡಿದ್ದು ಯಾರ ಜೊತೆಗೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಅವರು ಯಾರ ಜೊತೆ ಮಾತನಾಡುತ್ತಿದ್ದರು, ಏನು ಮಾತನಾಡುತ್ತಿದ್ದರು ಎಂಬುದು ನನಗೆ ಅರ್ಥವಾಗಿಲ್ಲ ಎಂದು ಸಿದ್ಧಾರ್ಥ್​ ಕಾರು ಚಾಲಕ ಪೊಲೀಸರಿಗೆ ತಿಳಿಸಿದ್ದಾರೆ.

ಇನ್ನು, ಮಂಗಳೂರಿಗೆ ಆಗಮಿಸುವ ದಾರಿ ಮಧ್ಯೆ ಸಿದ್ಧಾರ್ಥ್​ ಲೆಟರ್ ಕೂಡಾ ಪೋಸ್ಟ್ ಮಾಡಿದ್ದಾರೆಂಬ ಮಾಹಿತಿ ಕೂಡ ಲಭ್ಯವಾಗಿದೆ. ಅವರು ಯಾವ ಉದ್ದೇಶಕ್ಕೆ ಪತ್ರ ಬರೆದಿದ್ದರು? ಯಾರಿಗೆ ಕಳುಹಿಸಿದ್ದರು? ಪತ್ರದಲ್ಲಿ ಏನಿತ್ತು? ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದುಕೊಂಡಿದೆ.

ಸಿದ್ಧಾರ್ಥ್​ ನಿತ್ಯ ಬಳಕೆ ಮಾಡುತ್ತಿದ್ದುದು ದುಬಾರಿ ಬೆಲೆಯ ಮೊಬೈಲ್​. ಆದರೆ, ಮಂಗಳೂರಿಗೆ ತೆರಳುವಾಗ ಮಾತ್ರ ಅವರು, ದುಬಾರಿ ಮೊಬೈಲ್​ಅನ್ನು ಕಾರ್​​ನಲ್ಲಿಯೇ ಇಟ್ಟು ಸಣ್ಣ ಮೊಬೈಲ್​ನಲ್ಲಿ ಮಾತುಕತೆ ನಡೆಸುತ್ತಿದ್ದರು ಎನ್ನಲಾಗಿದೆ. ಆತ್ಮಹತ್ಯೆ ಪತ್ರದ ರೀತಿಯಲ್ಲಿ ಸಿಕ್ಕಿರುವ ಲೆಟರ್​ ಬಗ್ಗೆಯೂ ಪೊಲೀಸರಿಗೆ ಸಾಕಷ್ಟು ಅನುಮಾನಗಳು ಕಾಡಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಸೋಮವಾರ ಉದ್ಯಮಕ್ಕೆ ಸಂಬಂಧಿಸಿದ ಕೆಲಸ ಎಂದು ಹೇಳಿ ಡ್ರೈವರ್ ಜೊತೆ ಸಿದ್ಧಾರ್ಥ್​ ಮಂಗಳೂರಿಗೆ ತೆರಳುತ್ತಿದ್ದರು. ಕಾರಿನಲ್ಲಿ ತೆರಳುವಾಗ ಸಿದ್ಧಾರ್ಥ್​ ಮೊಬೈಲ್​ನಲ್ಲಿ ಮಾತನಾಡುತ್ತಲೇ ಇದ್ದರಂತೆ. ಮಂಗಳೂರಿನ ಉಳ್ಳಾಲ ಸಮೀಪ ಇರುವ ಒಂದು ಕಿ.ಮೀ ಉದ್ದದ ಬ್ರಿಡ್ಜ್​ ಮೇಲೆ ಅವರು ಇಳಿದಿದ್ದರು.

ಚಾಲಕನ ಬಳಿ ಕಾರಿನಲ್ಲೇ ಇರುವಂತೆ ಸೂಚಿಸಿದ ಸಿದ್ಧಾರ್ಥ್​ ಮೊಬೈಲ್​ನಲ್ಲಿ ಮಾತನಾಡುತ್ತಾ ಸಾಗಿದ್ದರು. ಬ್ರಿಡ್ಜ್​​ನ ಮತ್ತೊಂದು ತುದಿಯಿಂದ ಬರುವಾಗ ಅವರು ಕಾಣೆಯಾಗಿದ್ದರು. ಬುಧವಾರ ಬೆಳಿಗ್ಗೆ ಅವರ ಶವ ನೇತ್ರಾವತಿ ನದಿ ಹಿನ್ನೀರಿನಲ್ಲಿ ದೊರೆತಿತ್ತು.

Comments are closed.