ರಾಷ್ಟ್ರೀಯ

ಅನುಚಿತ ವರ್ತನೆ ಆರೋಪ: ಸಲಿಂಗಿ ದಂಪತಿಯನ್ನು ತಡರಾತ್ರಿ ಹೊರದಬ್ಬಿದ ಹೋಟೆಲ್‌

Pinterest LinkedIn Tumblr


ಚೆನ್ನೈ: ಚೆನ್ನೈ ಹೋಟೆಲ್‌ವೊಂದರಲ್ಲಿ ತಮ್ಮನ್ನು ಹೋಮೋಫೋಬಿಕ್‌ (ಸಲಿಂಗಕಾಮಿ ಜನರನ್ನು ಇಷ್ಟಪಡದಿರುವುದು/ಪೂರ್ವಾಗ್ರಹ ಪೀಡಿತರಾಗಿರುವುದು)ಗೆ ಸಿಲುಕಿಸಿ ಆವರಣದಿಂದ ಶನಿವಾರ ತಡರಾತ್ರಿ ಹೊರಹೋಗುವಂತೆ ಒತ್ತಾಯಿಸಲಾಯಿತು ಎಂದು 20ರ ಹರೆಯದ ಸಲಿಂಗಿ ಯುವತಿಯರು ಆರೋಪಿಸಿದ್ದಾರೆ.

ಯುವತಿಯರ ಈ ಆರೋಪವನ್ನು ನಿರಾಕರಿಸಿರುವ ಹೋಟೆಲ್‌, ಹುಡುಗಿಯರು ‘ಅನುಚಿತ ವರ್ತನೆ’ಯಲ್ಲಿ ತೊಡಗಿದ್ದರು ಎಂದು ಆರೋಪಿಸಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ರಸಿಕಾ ಗೋಪಾಲಕೃಷ್ಣನ್ ಮತ್ತು ಶಿವಾಂಗಿ ಸಿಂಗ್ ಸಲಿಂಗಿ ದಂಪತಿ ಮಾತನಾಡಿ, ಅವರು ಹೇಳುವಂತೆ ನಾವು ಯಾವುದೇ ಅನುಚಿತ ವರ್ತನೆಯಲ್ಲಿ ತೊಡಗಿರಲಿಲ್ಲ. ನಮ್ಮನ್ನು ಗುರಿಯಾಗಿಸಿಕೊಂಡೇ ಆರೋಪ ಮಾಡುತ್ತಿದ್ದಾರೆ. ಬಹುಶಃ ಅವರು ನಮ್ಮನ್ನು ವಿಚಿತ್ರವಾಗಿ ನೋಡುತ್ತಿರಬೇಕು. ಅಂದರೆ, ಸಾಂಪ್ರದಾಯಿಕ ಲಿಂಗ ಮಾನದಂಡಗಳೊಂದಿಗೆ ನಮ್ಮನ್ನು ನೋಡಿಲ್ಲ ಎಂದು ದೂರಿದ್ದಾರೆ.

ನಮಗೆ ತಿಳಿದಿರುವಂತೆ, ನಾವು ಇತರ ಭಿನ್ನಲಿಂಗೀಯ ಜೋಡಿಗಳು ಹೇಗೆ ನೃತ್ಯ ಮಾಡುತ್ತಿದ್ದರೋ ಹಾಗೆಯೇ ಮಾಡುತ್ತಿದ್ದೆವು ಹೊರತು ಅವರಿಗಿಂತ ಭಿನ್ನವಾಗಿ ಏನನ್ನೂ ಮಾಡುತ್ತಿರಲಿಲ್ಲ. ಸಾಂದರ್ಭಿಕವಾಗಿ ಕೈ ಹಿಡಿಯುವುದು, ತಬ್ಬಿಕೊಳ್ಳುವುದು ಇತ್ಯಾದಿಗಳನ್ನು ಮಾಡಿದ್ದೆವು. ನಾವು ಸಾರ್ವಜನಿಕ ಸ್ಥಳದಲ್ಲಿದ್ದೇವೆ ಎಂಬುದು ನಮಗೆ ಚೆನ್ನಾಗಿ ತಿಳಿದಿತ್ತು ಮತ್ತು ಆದಷ್ಟು ಅಲ್ಲಿ ಸಭ್ಯತೆಯಿಂದಿರಲು ಪ್ರಯತ್ನಿಸಿದ್ದೆವು ಎಂದು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಗೋಪಾಲಕೃಷ್ಣನ್ ಹೀಗೆ ಬರೆದಿದ್ದು, ನನ್ನ ಸ್ನೇಹಿತೆ ಮತ್ತು ನಾನು ಶನಿವಾರ ರಾತ್ರಿ ದಿ ಸ್ಲೇಟ್ ಹೊಟೇಲ್ ಎಂಬ ಬಾರ್‌ಗೆ ಹೋಗಲು ನಿರ್ಧರಿಸಿದೆವು. ನೃತ್ಯ ಮಾಡುವಾಗ ಬಾರ್‌ನಲ್ಲಿ 4 ರಿಂದ 5 ಪುರುಷರು ನಿಂತಿದ್ದರು ಮತ್ತು ನಿರಂತರವಾಗಿ ನಮ್ಮನ್ನೇ ದಿಟ್ಟಿಸುತ್ತಿದ್ದರು. ಇದು ನಮಗೆ ತುಂಬಾ ಕಿರಿಕಿರಿ ಉಂಟು ಮಾಡಿತ್ತು.

ನಮಗೆ ತಿಳಿದ ಮಟ್ಟಿಗೆ, ಉಳಿದವರೆಲ್ಲರೂ ನಾವು ಮಾಡಿದಂತೆಯೇ ಮಾಡುತ್ತ ತಾವು ಆನಂದಿಸುತ್ತಿದ್ದರು. ಆದರೆ, ನಾವು ಮಾತ್ರ ಯಾಕೆ ಎಲ್ಲರ ಅನಗತ್ಯ ಗಮನ ಸೆಳೆದಿದ್ದೇವೆ? ಒಂದೇ ಲಿಂಗದ ಇಬ್ಬರು ಒಟ್ಟಿಗೆ ನೃತ್ಯ ಮಾಡುತ್ತಿದ್ದೇವೆ ಎಂಬುದನ್ನು ಜೀರ್ಣಿಸಿಕೊಳ್ಳಲು ಯಾಕೆ ಕಷ್ಟವಾಯಿತು? ನಮ್ಮ ಸುತ್ತಮುತ್ತಲಿನ ಜನರಿಂದ ನಾವು ಉಪಚರಿಸಲ್ಪಟ್ಟ ರೀತಿಗೆ ನಾನು ಆತಂಕಕ್ಕೊಳಗಾದೆ ಎಂದು ಬರೆದುಕೊಂಡಿದ್ದಾರೆ.

ಬಳಿಕ ನಾವಿಬ್ಬರು ವಾಶ್‌ರೂಂಗೆ ತೆರಳಿದೆವು. ಕೆಲಕಾಲದ ನಂತರ ಬಾಗಿಲನ್ನು ಬಡಿಯುತ್ತಿರುವ ಮತ್ತು ಹೊರಗೆ ಬರುವಂತೆ ಕೂಗಿದ್ದು ಕೇಳಿಸಿತು. ಬಾಗಿಲು ತೆರೆಯುತ್ತಿದ್ದಂತೆ ಒರ್ವ ಮಹಿಳೆ ಮತ್ತು ಇಬ್ಬರು ಪುರುಷ ಬೌನ್ಸರ್ಸ್​ ಹೊರಗೆ ನಿಂತಿದ್ದರು. ಅವರಲ್ಲೊಬ್ಬ ಕಿರುಚುತ್ತಾ ಒಳಗಡೆ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದ. ಅದಕ್ಕೆ ನಾನು ನನ್ನ ಸ್ನೇಹಿತೆಗೆ ಹುಷಾರಿರಲಿಲ್ಲ ಹಾಗಾಗಿ ಸಹಾಯ ಮಾಡುತ್ತಿದ್ದೆ ಎಂದೆ. ಅದಕ್ಕಾತ ನಿನ್ನ ಸ್ನೇಹಿತೆಗೆ ಸಹಾಯ ಮಾಡುತ್ತಿದ್ದೋ ಅಥವಾ ಬೇರೇನಾದರೂ ಮಾಡುತ್ತಿದ್ದಿರೋ ಎಂದು ಹೇಳಿದ.

ಹೋಟೆಲ್‌ನಲ್ಲಿನ ಹಲವಾರು ಅತಿಥಿಗಳಿಂದ ನಮಗೆ ನಿಮ್ಮ ಮೇಲೆ ದೂರುಗಳು ಬಂದಿವೆ. ಹಾಗಾಗಿ ಈ ಕೂಡಲೇ ನೀವು ಹೋಟೆಲ್ ಖಾಲಿ ಮಾಡಿ ಎಂದು ತಿಳಿಸಿದರು.

ನಾವು ಯಾರ ತಂಟೆಗೂ ಹೋಗದಿದ್ದರೂ ಕೂಡ ತಡರಾತ್ರಿಯೇ ನಮ್ಮನ್ನು ಐದು ನಿಮಿಷದಲ್ಲಿ ಹೋಟೆಲ್‌ ನಿಂದ ಹೊರಗೆ ದಬ್ಬಲಾಯಿತು ಎಂದು ದೂರಿದ್ದಾರೆ.

ಇನ್ನು ಈ ಕುರಿತಾದ ದೂರನ್ನು ಹೋಟೆಲ್‌ ಆಡಳಿತ ಮಂಡಳಿ ನಿರಾಕರಿಸಿದ್ದು, ಯುವತಿಯರ ಮೇಲೆ ಇತರೆ ಗ್ರಾಹಕರು ದೂರು ನೀಡಿದ್ದರು. ಮಹಿಳೆಯರ ವಾಶ್‌ರೂಂಗೆ ಹೋಟೆಲ್‌ನ ಯಾವುದೇ ಬೌನ್ಸರ್‌ ತೆರಳಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

Comments are closed.