ಕರ್ನಾಟಕ

ಇಬ್ಬರು ಕುಖ್ಯಾತ ಬೈಕ್ ಕಳ್ಳರ ಬಂಧನ: 15 ಲಕ್ಷ ರೂಪಾಯಿ ಮೌಲ್ಯದ 23 ದ್ವಿಚಕ್ರ ವಾಹನ ವಶ

Pinterest LinkedIn Tumblr

ಬೆಂಗಳೂರು: ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮಹಾಲಕ್ಷ್ಮೀಲೇಔಟ್ ಪೊಲೀಸರು 15 ಲಕ್ಷ ರೂಪಾಯಿ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಂಪೇಗೌಡ ಲೇಔಟ್ ನಿವಾಸಿ ನವೀನ್ ಅಲಿಯಾಸ್ ಡಿಯೋ ನವೀನ್ ಅಲಿಯಾಸ್ ಸೊಳ್ಳೆ (19), ರಾಮನಗರದ ಮಾಗಡಿ ತಾಲೂಕು ಕುದೂರಿನ ಕುಣಿಗನಹಳ್ಳಿ ನಿವಾಸಿ ಲಕ್ಷ್ಮೀನಾರಾಯಣ ಅಲಿಯಾಸ್ ನಾಣಿ (20) ಬಂಧಿತ ಆರೋಪಿಗಳು.

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸುಮಾರು 15 ಲಕ್ಷ ರೂ.ಗಳ ಬೆಲೆ ಬಾಳುವ ವಿವಿಧ ಕಂಪನಿಯ 23 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮಹಾಲಕ್ಷ್ಮೀಲೇಔಟ್‌ನ ಕುರುಬರಹಳ್ಳಿಯ ಸತ್ಯನಾರಾಯಣಲೇಔಟ್‌ನ 7ನೇ ಮೈನ್ ನಿವಾಸಿ ಶರತ್ ಎಚ್.ಬಿ. (24 ) ಅವರು ಇದೇ ವರ್ಷದ ಜನವರಿ 22ರಂದು ರಾತ್ರಿ ತಮ್ಮ ದ್ವಿಚಕ್ರ ವಾಹನವನ್ನು ತಮ್ಮ ಮನೆ ಮುಂಭಾಗ ಬೀಗ ಹಾಕಿ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ಬಂದು ನೋಡಿದಾಗ ಬೈಕ್ ಕಳ್ಳತನ ವಾಗಿರುವುದು ಬೆಳಕಿಗೆ ಬರುತ್ತದೆ. ಈ ಬಗ್ಗೆ ಅವರು ನೀಡಿದ ದೂರಿನ ಮೇರೆಗೆ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರವಾಹನ ಕಳವು ಪ್ರಕರಣ ದಾಖಲು ಮಾಡಲಾಗಿತ್ತು.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮಹಾಲಕ್ಷ್ಮೀಲೇಔಟ್-5, ರಾಜಗೋಪಾಲನಗರ-4, ನಂದಿನಿಲೇಔಟ್-1, ಅನ್ನಪೂರ್ಣೇಶ್ವರಿನಗರ-2, ಹಾಸನ ಜಿಲ್ಲೆಯ ಪೆನ್ಷನ್ ಮೊಹಲ್ಲಾ-1, ಹನುಮಂತನಗರ-1, ಬ್ಯಾಡರಹಳ್ಳಿ-2, ಬಸವೇಶ್ವರನಗರ-1 ದ್ವಿಚಕ್ರ ವಾಹನ ಕಳವು ಪ್ರಕರಣ ಸೇರಿ ಒಟ್ಟು 16 ದ್ವಿಚಕ್ರವಾಹನಗಳು ಪತ್ತೆಯಾಗಿದ್ದು, ಮತ್ತು 6 ದ್ವಿಚಕ್ರವಾಹನಗಳ ಮಾಲೀಕರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ವಿ.ಧನಂಜಯ ಅವರ ಮಾರ್ಗದರ್ಶನದಲ್ಲಿ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಎಂ. ಪ್ರಶಾಂತ್, ಪಿಎಸ್‍ಐ ವೆಂಕಟರಮಪ್ಪ, ಎಎಸ್‍ಐ, ಪರಮೇಶ್ವರಯ್ಯ ಮತ್ತು ಇತರರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Comments are closed.