ಕ್ರೀಡೆ

ಡೋಪ್ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಪೃಥ್ವಿ ಶಾ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಅಮಾನತು

Pinterest LinkedIn Tumblr

ನವದೆಹಲಿ: ಡೋಪ್ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಪ್ರತಿಭಾವಂತ ಕ್ರಿಕೆಟ್ ಆಟಗಾರ ಪೃಥ್ವಿ ಶಾ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಎಂಟು ತಿಂಗಳ ಕಾಲ ಬ್ಯಾನ್ ಮಾಡಲಾಗಿದೆ ಎಂದು ಬಿಸಿಸಿಐ ಹೇಳಿದೆ.

19 ವರ್ಷದ ಪೃಥ್ವಿ ಶಾ ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನಾಡಿದ್ದರು. ಸೊಂಟ ಗಾಯದ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬಂತಹ ವರದಿಗಳು ಬಂದಿವೆ.

ಸೈಯದ್ ಮುಸ್ತಾಕ್ ಆಲಿ ಟಿ-20 ಟೂರ್ನಮೆಂಟ್ ವೇಳೆಯಲ್ಲಿ ಪರೀಕ್ಷೆ ನಡೆಸಲಾಗಿತ್ತು. ಪೃಥ್ವಿ ಶಾ ಜೊತೆಗೆ ವಿದರ್ಭದ ಅಕ್ಷಯ್ ದುಲ್ಲಾರ್ ವಾರ್ ಹಾಗೂ ರಾಜಸ್ತಾನದ ದಿವ್ಯ ಗಜರಾಜ್ ಅವರು ಕೂಡಾ ಡೋಪ್ ಪರೀಕ್ಷೆಯಲ್ಲಿ ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ.

ಮುಂಬೈ ಕ್ರಿಕೆಟ್ ಅಸೊಸಿಯೇಷನ್ ಆಟಗಾರ ಪೃಥ್ವಿ ಶಾ ಅವರನ್ನು ಡೋಪ್ ಪರೀಕ್ಷೆ ಉಲ್ಲಂಘನೆ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಪೃಥ್ವಿ ಶಾ ಉದ್ದೀಪನ ಮದ್ದು ಸೇವಿಸಿರುವುದು ಕಂಡುಬಂದಿದೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ಮಾರ್ಚ್ 16 ರಿಂದ ನವೆಂಬರ್ 15 ರವರೆಗೂ ಅನ್ವಯವಾಗುವಂತೆ ಪೃಥ್ವಿ ಶಾ ಅವರನ್ನು ಎಂಟು ತಿಂಗಳ ಕಾಲ ಅಮಾನತು ಮಾಡಲಾಗಿದ್ದು, ಭಾರತದಲ್ಲಿ ನಡೆಯಲಿರುವ ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದಲೂ ಅವರನ್ನು ಹೊರಗಟ್ಟಲಾಗಿದೆ ..

Comments are closed.