
ಬೆಂಗಳೂರು: ಇಷ್ಟು ದಿನ ಮಾತಿಗೆ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದ ಸಿದ್ದರಾಮಯ್ಯ ಮುಖದಲ್ಲಿ ಈಗ ಹಳೆ ಖದರ್ ಎದ್ದುಕಾಣ್ತಿದೆ. ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಇದ್ದ ಗತ್ತು, ಆಡಳಿತ ಪಕ್ಷ ಕಟ್ಟಿಹಾಕುವ ಚಾತಿ ಮರುಕಳಿಸಿದೆ. ಸದನದಲ್ಲಿ ಮೊದಲ ದಿನವೇ ಬಿಎಸ್‌ವೈಗೆ ಬಿಸಿ ಮುಟ್ಟಿಸಿದ್ದಾರೆ.
ಇಷ್ಟು ದಿನ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿ, ತಮ್ಮ ಮಾತಿಗೆ ಸ್ವಯಂ ನಿರ್ಬಂಧ ಹಾಕ್ಕೊಂಡಿದ್ದ ಸಿದ್ದರಾಮಯ್ಯ ಇದೀಗ ಹಳೆ ಖದರ್‌ಗೆ ಮರಳಿದ್ದಾರೆ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಇದೇ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದವರು. ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿ, ಅಕ್ರಮ ಗಣಿ ಧೂಳಿ ಮೆತ್ತಿಕೊಂಡಿದ್ದವರಿಗೆ ಜೈಲಿನ ಹಾದಿ ತೋರಿಸಿದ್ದರು. ಈಗಲೂ ಬಿಎಸ್ವೈ ಸಿಎಂ ಆದಾಗಲೂ ಇದೇ ವಿರೋಧ ಪಕ್ಷದ ನಾಯಕ ಕುರ್ಚಿಯಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆ.
ಆಡಳಿತ ಪಕ್ಷದವರ ಸಾಲಿನಿಂದ ವಿರೋಧ ಪಕ್ಷದ ಸಾಲಿಗೆ ಬಂದು ಕುಳಿತಿರೋ ಸಿದ್ದರಾಮಯ್ಯ ಮುಖದಲ್ಲೇ ಹಳೇ ಖದರ್ ಎದ್ದು ಕಾಣಿಸ್ತಿದೆ. ಅವರ ಮಾತಿನ ವೈಖರಿಗೆ ಎಂಥವರೂ ಥಂಡಾ ಹೊಡೆದು ಹೋಗ್ತಾರೆ. ಆಡಳಿತ ಪಕ್ಷದವರನ್ನ ಇಕ್ಕಟ್ಟಿಗೆ ಸಿಲುಕಿಸುವ ಪರಿ ಎಲ್ಲರನ್ನೂ ಬೆರಗುಗೊಳಿಸುತ್ತೆ. ಬಿಜೆಪಿ ಆಡಳಿತದ ಮೊದಲ ದಿನವೇ ಆರ್ಭಟಿಸಿದ್ದು ನೋಡಿದರೆ, ಮುಂದಿನ ದಿನಗಳಲ್ಲಿ ಬಿಎಸ್‌ವೈಗೆ ಹೆಜ್ಜೆ ಹೆಜ್ಜೆಗೂ ಮುಳ್ಳಾಗೋ ಲಕ್ಷಣಗಳು ಗೋಚರಿಸುತ್ತಿವೆ. ಇಂದು ಮೊದಲ ದಿನವೇ ಬಿಜೆಪಿಯ ಪೂರಕ ಬಜೆಟ್‌ಗೆ ಒಪ್ಪಿಗೆ ನೀಡಲು ತರಕಾರು ಎತ್ತಿ, ಸಿಎಂ ಅನ್ನು ಇಕ್ಕಟಿಗೆ ಸಿಲುಕಿಸಿದರು.
ಮೈತ್ರಿ ಸರ್ಕಾರದ ಹಣಕಾಸು ವಿಧೇಯಕ ಮಂಡಿಸಿದ ಯಡಿಯೂರಪ್ಪ, ನಾನು 3 ತಿಂಗಳಿಗೆ ಮಾತ್ರ ಲೇಖಾನುದಾನ ಪಡಿತೀನಿ ಎಂದು ಹೇಳಿದರು. ಆದರೆ, ಸಿದ್ದರಾಮಯ್ಯ ಅವರು, ಅದ್ಹೇಗೆ ಸಾಧ್ಯ(?) ಮುಂದಿನ 8 ತಿಂಗಳಿಗೂ ಇದು ಅನ್ವಯ ಆಗಬೇಕು. ವಿಧೇಯಕದ ಮೇಲೆ ಚರ್ಚೆ ನಡೆಯಲೇ ಬೇಕು ಎಂದು ಪಟ್ಟುಹಿಡಿದು ವಿರೋಧ ಪಕ್ಷದ ನಾಯಕರಾದವರ ಜವಾಬ್ದಾರಿ ಏನು ಅಂತ ತೊರಿಸಿದರು.
ಸಿದ್ದರಾಮಯ್ಯ ಬಗ್ಗೆ ಯಡಿಯೂರಪ್ಪ ಅವರಿಗೆ ಯಾವ ಅಭಿಪ್ರಾಯ ಇದೆಯೋ ಗೊತ್ತಿಲ್ಲ. ಆದರೆ, ಇಂದು ಮುಖಾಮುಖಿ ಆದಾಗ ಕ್ಷಣಹೊತ್ತು ಮಾತುಕತೆ ನಡೆಸಿದರು. ಕಲಾಪ ಆರಂಭಕ್ಕೂ ಮೊದಲು ಬಂದು ಕುಳಿತ ಸಿದ್ದರಾಮಯ್ಯ ಬಳಿಗೆ ಸಿಎಂ ಕುರ್ಚಿಯಿಂದ ಎದ್ದುಹೋದ ಬಿಎಸ್ವೈ, ಕೈ ಕುಲಿಕಿ, ಕ್ಷಣಹೊತ್ತು ಮಾತನಾಡಿದರು. ಕಲಾಪದ ನಂತರ ಸ್ಪೀಕರ್ ಕಚೇರಿ ಎದುರು ಮುಖಾಮುಖಿ ಆದಾಗಲೂ ಮಾತುಕತೆ ನಡೆಸಿದರು.
ಒಟ್ಟಿನಲ್ಲಿ ಈಗ ಯಡಿಯೂರಪ್ಪ ಸಿಎಂ ಆಗಿದರೆ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. 1983ರಲ್ಲಿ ಇವರಿಬ್ಬರೂ ಒಂದೇ ಬಾರಿಗೆ ವಿಧಾನಸೌಧದ ಮೆಟ್ಟಿಲತ್ತಿದವರು. ಇಬ್ಬರೂ ಹೋರಾಟದಿಂದಲೇ ಮೇಲೆ ಬಂದವರು. ಈಗ ಸದನದಲ್ಲಿ ಎದುರು-ಬದರು ಕುಳಿತಿದ್ದಾರೆ. ಇವರಿಬ್ಬರ ಮಾತಿನ ಜುಗಲ್ಬಂದಿಗೆ ವಿಧಾನಸಭೆ ಕಲಾಪ ಸಾಕ್ಷಿಯಾಗೋದು ನಿಶ್ಚಿತ.
Comments are closed.